ಕನ್ನಡ ವಾರ್ತೆಗಳು

ಪಿಲಿಕುಳ ನಿಸರ್ಗಧಾಮದಲ್ಲಿ ಆಟಿಕೂಟ ಕಾರ್ಯಕ್ರಮ : ಮನಸೆಳೆದ ಆಟಿಕಳಂಜ ವೇಷಗಳ ಸ್ಪರ್ಧೆ

Pinterest LinkedIn Tumblr

Pilikula_Aati_Progrmm_1

ಮಂಗಳೂರು, ಆ.9: ದ.ಕ. ಜಿಲ್ಲಾಡಳಿದ ನೇತೃತ್ವದಲ್ಲಿ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಪಿಲಿಕುಳ ನಿಸರ್ಗಧಾಮದಲ್ಲಿ ಭಾನುವಾರ ಬೆಳಿಗ್ಗೆ ಆಟಿ ಕೂಟ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ತುಳುಜಾನಪದ ಹಾಡಿನ ಸ್ಪರ್ಧೆ, ಚೆನ್ನಮಣೆ ಆಟದ ಸ್ಪರ್ಧೆ, ಪ್ರಕೃತಿ, ಪರಿಸರ ಪರಂಪರೆ ಬಗ್ಗೆ ರಸಪ್ರಶ್ನೆಗಳು, ಪೇಸ್ ಪೇಯ್ಟಿಂಗ್ ಸ್ಥಳದಲ್ಲೇ ಮಾಡಿಕೊಳ್ಳಲು ಅವಕಾಶ, ವಿದ್ಯಾರ್ಥಿಗಳು ಮತ್ತು ಆಸಕ್ತರಿಂದ ಭೂಮಿ ಉಳುವುದು ಮತ್ತು ನೇಜಿ ನಾಟಿ, ಚಿಕ್ಕ ಮೇಳ ಯಕ್ಷಗಾನ, ತಾಳಮದ್ದಳೆ, ಆಟಿಕಳಂಜ ವರ್ಣಮಯ ನೃತ್ಯ ಮತ್ತು ಮೆರವಣಿಗೆ, ಮೃಗಾಲಯದ ಎದುರಿನ ಮಳಿಗೆಗಳಲ್ಲಿ ಆಟಿಯ ವಿಶೇಷ ಖಾದ್ಯಗಳು, ಮೀನು ಖಾದ್ಯಗಳು, ಹಣ್ಣು ಹಂಪಲುಗಳ ಪ್ರದರ್ಶನ, ಅಂಚೆ ಚೀಟಿ ಮತ್ತು ನಾಣ್ಯಗಳ ಪ್ರದರ್ಶನದ ಹಾಗೂ ಆಟಿಕಳಂಜ ವೇಷಗಳ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಇದು ಇಂದಿನ ವಿಶೇಷ ಆಕರ್ಷಣೆಯಾಗಿತ್ತು.

Pilikula_Aati_Progrmm_2 Pilikula_Aati_Progrmm_3 Pilikula_Aati_Progrmm_4 Pilikula_Aati_Progrmm_5 Pilikula_Aati_Progrmm_6 Pilikula_Aati_Progrmm_7 Pilikula_Aati_Progrmm_8 Pilikula_Aati_Progrmm_9

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಕೆ‌ಎಂಸಿ ಆಸ್ಪತ್ರೆ ವತಿಯಿಂದ ಆರೋಗ್ಯ ಶಿಬಿರ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಕೂಡ ನಡೆಯಿತು.

ಪಿಲಿಕುಳದಲ್ಲಿ ಆಟಿಕೂಟ ಸಂಭ್ರಮ :  ಊಟದಲ್ಲಿ 21 ಬಗೆಯ ಖಾದ್ಯ ವೈವಿಧ್ಯ

ಮೂಡುಶೆಡ್ಡೆಯ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮದಲ್ಲಿ ರವಿವಾರ ಆಟಿಕೂಟ ಸಂಭ್ರಮದ ಮೂಲಕ ತುಳುನಾಡಿನ ಗತ ವೈಭವವನ್ನು ಮೆಲುಕು ಹಾಕಲಾಯಿತು. ಜಡಿಮಳೆ ಹಾಗೂ ಬಿಸಿಲಿನಾಟದ ನಡುವೆ ಸಾಧಾರಣ ಜನಸಮೂಹದೊಂದಿಗೆ, ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆಯ ಎದುರಿನ ಗದ್ದೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳ ಜತೆ ಕೆಸರು ಗದ್ದೆಗಿಳಿದ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ದ.ಕ. ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ ಭರತ್‌ಲಾಲ್ ಮೀನಾ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ನೇಜಿ ನೆಡುವ ಮೂಲಕ ಆಟಿಕೂಟಕ್ಕೆ ಚಾಲನೆ ನೀಡಿದರು. ನಿಟ್ಟೆ ವಿವಿ ಕುಲಪತಿ ವಿನಯ್ ಹೆಗ್ಡೆ, ಕಲಾವಿದ ಗುರುರಾಜ್ ಮಾರ್ಪಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಭರತ್‌ಲಾಲ್ ಮೀನಾ ಹಾಗೂ ಎ.ಬಿ. ಇಬ್ರಾಹೀಂ ಮಕ್ಕಳೊಂದಿಗೆ ಕೆಸರು ಗದ್ದೆಗೆ ಇಳಿದು, ಶಾಸಕರ ಜತೆಯಲ್ಲಿ ನೇಜಿ ನೆಟ್ಟು ಸಂಭ್ರಮಿಸಿದರು. ಬಳಿಕ ತಮ್ಮ ಕೈಗಳಿಗೆ ಬಣ್ಣಗಳನ್ನು ಹಚ್ಚಿಸಿಕೊಂಡರು. ಈ ವೆೀಳೆ ಜಿಪಂ ಸಿಇಒ ಶ್ರೀವಿದ್ಯಾ ಕೂಡಾ ಭಾಗಿಯಾದರು.

ಮನ ಸೆಳೆದ ಆಟಿಕಳೆಂಜ ನರ್ತನ

ತುಳುನಾಡಿನಲ್ಲಿ ಆಟಿ ತಿಂಗಳ ವಿಶೇಷವೆಂದೇ ಪರಿಗಣಿಸಲಾಗುವ ಆಟಿ ಕಳೆಂಜ ಸಂಭ್ರಮದ ವಿಶೇಷ ಆಕರ್ಷಣೆಯಾಗಿತ್ತು. ಗುತ್ತಿನ ಮನೆಯ ಅಂಗಳದಲ್ಲಿ ಬಚ್ಚ ನಲಿಕೆ ತಂಡದಿಂದ ಆಟಿಕಳೆಂಜ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ‘‘ಮಾಯೊಡ್ ಬರುವೆನೋ ಕಳೆಂಜೆ, ಆಟಿಡು ಬರುವೆನೋ, ಕಷ್ಟನ್ ಕಳೆವೆನೋ ಕಳೆಂಜೆ, ಮಾಯೊಡ್ ಬರುವೆನೊ’’ ಪಾಡ್ದನಕ್ಕೆ ಹೆಜ್ಜೆ ಹಾಕುತ್ತಾ 8ನೆ ತರಗತಿಯ ಬಾಲಕ ಪ್ರಜ್ವಲ್‌ನ ಆಟಿ ಕಳೆಂಜ ನೃತ್ಯ ನೋಡುಗರಿಗೆ ಮುದ ನೀಡಿತ್ತು. ಗುತ್ತಿನ ಮನೆಯ ಹೊಸ್ತಿಲಲ್ಲಿ ಬೆಲ್ಲ ಹಾಗೂ ನೀರಿನ ಸ್ವಾಗತದೊಂದಿಗೆ ತುಳು ನಾಡಿನ ವಿಶಿಷ್ಟ ತಿಂಡಿ ತಿನಿಸುಗಳ ಮೂಲಕ ಆಗಮಿಸಿದ್ದವರನ್ನು ಸ್ವಾಗತಿಸಲಾಯಿತು. ಬಳಿಕ ಗುತ್ತಿನಮನೆಯ ಚಾವಡಿಯಲ್ಲಿ ‘ಬಲರಾಮ ಭಕ್ತಿ’ ಎಂಬ ತಾಳಮದ್ದಳೆ ಕಾರ್ಯ ಕ್ರಮವನ್ನು ಆಯೋಜಿಸಲಾಗಿತ್ತು. ಗುತ್ತಿನಮನೆಯ ಒಳ ಚಾವಡಿಯಲ್ಲಿ ಪೆರ್ಮಂಕಿಯ ದುರ್ಗಾಪರಮೇಶ್ವರಿ ಕೃಪಾ ಪೋಷಿತ ಚಿಕ್ಕಮೇಳ ಯಕ್ಷಗಾನ ತಂಡವು ‘ಶೂರ್ಪನಖಿ ಮಾನಭಂಗ’ ಪ್ರಸಂಗವನ್ನು ಪ್ರದರ್ಶಿಸಿತು.

ಮಧ್ಯಾಹ್ನದ ಊಟದಲ್ಲಿ 21 ಬಗೆಯ ಖಾದ್ಯ ವೈವಿಧ್ಯ

ಗುತ್ತಿನಮನೆಯಲ್ಲಿ ಆಟಿಯ ವಿಶೇಷ ಭೋಜನದ ಪ್ರಯುಕ್ತ ಅನ್ನ, ಮಜ್ಜಿಗೆ ಸೇರಿ 21 ಬಗೆಯ ವಿಶೇಷ ಖಾದ್ಯ ವೈವಿಧ್ಯಗಳಿದ್ದವು. ಉಪ್ಪಿನಕಾಯಿ, ಕೋಸಂಬ್ರಿ, ತಿಮರೆ ಚಟ್ನಿ, ಹುರುಳಿ ಚಟ್ನಿ, ಚೇರೆಕೊಡಿ ಚಟ್ನಿ, ಹಲಸಿನ ಬೀಜ ಮತ್ತು ತೊಜಂಕ್ ಉಪ್ಪುಕರಿ, ಉಪ್ಪಡ್ ಪಚ್ಚಿರ್ ಮತ್ತು ಕಡ್ಲೆ ಪಲ್ಯ, ಅರಿವೆ ದಂಟು- ಕೆಸುದಂಟು- ಹೀರೆಕಾಯಿ- ಅಂಬಟೆ ಹುಳಿ, ಪತ್ರೊಡೆ, ಹಾಲುಬಾವೆ, ತೆಜಂಕ್ ಸೊಪ್ಪು ಪಕೋಡ, ರಸಂ, ಸೆಂಡಿಗೆ, ಕನಿಲೆ ಮತ್ತು ಹೆಸರು ಮೊಳಕೆ ಗಸಿ, ಸೌತೆ- ಕೆಸುವಿನ ತೇಟ್ಲ ಸಾಂಬರ್, ಹಲಸಿನಕಾಯಿ ಕಾಯಿಹುಳಿ, ಹಲಸಿನ ಹಣ್ಣಿನ ಗಾರಿಗೆ, ಹೋಳಿಗೆ, ಮಾವಿನ ಹಣ್ಣಿನ ರಸಾಯನ, ಹೆಸರುಬೇಳೆ- ಹಲಸಿನ ಹಣ್ಣಿನ ಪಾಯಸ, ಮಜ್ಜಿಗೆಯ ರುಚಿಯು ವಿಶೇಷ ಭೋಜನವಾಗಿ ಒಬ್ಬರಿಗೆ 250 ರೂ. ದರದಲ್ಲಿ ಒದಗಿಸಲಾಗಿತ್ತು.

ಮೃಗಾಲಯದ ಎದುರು ವಿದ್ಯಾರ್ಥಿಗಳಿಗಾಗಿ ಜಾನಪದ ಹಾಡಿನ ಸ್ಪರ್ಧೆ, ಚೆನ್ನಮಣೆ ಆಟದ ಸ್ಪರ್ಧೆ, ಆಟಿಯ ವಿಶೇಷ ಖಾದ್ಯಗಳ ಪ್ರದರ್ಶನ, ಹಣ್ಣು ಹಂಪಲುಗಳ ಪ್ರದರ್ಶನ ಮಾರಾಟ, ಅಂಚೆ ಚೀಟಿ ಮತ್ತು ನಾಣ್ಯಗಳ ಪ್ರದರ್ಶನ ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಕೆಸರು ಗದ್ದೆಯಲ್ಲಿ ವಿದ್ಯಾರ್ಥಿಗಳು ಹಾಗೂ ಆಸಕ್ತರಿಗಾಗಿ ಗದ್ದೆ ಉಳುವುದು, ನೇಜಿ ನಾಟಿ ಹಾಗೂ ಪುರುಷ ಮತ್ತು ಮಹಿಳಾ ತಂಡಗಳಿಗೆ ಹಗ್ಗಜಗ್ಗಾಟ ಸ್ಪರ್ಧೆ, ಆಟಿಕಳೆಂಜ ಸ್ಪರ್ಧೆಯನ್ನೂ ವ್ಯವಸ್ಥೆ ಮಾಡಲಾಗಿತ್ತು.

ಪಿಲಿಕುಳದ ಗುತ್ತಿನಮನೆ ಆವರಣ ಹಾಗೂ ಮೃಗಾಲಯದ ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಕಾಣುವ ವಿಶೇಷತೆ ಹಾಗೂ ಕರಾವಳಿಯ ಇತರ ಲೋಕವನ್ನು ಸಾಂಪ್ರದಾಯಿಕ ರೀತಿಯಲ್ಲಿಯೇ ಬಿಂಬಿಸುವ ವಿಶೇಷ ಪ್ರಯತ್ನ ಇದಾಗಿದೆ. ಈ ಮೂಲಕ ಆಟಿ ತಿಂಗಳ ವಿಶೇ ತೆಯನ್ನು ಯುವಜನತೆಗೆ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಜತೆಗೆ ವಿವಿಧ ಇಲಾಖೆಗಳಿಂದ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನೂ ನೀಡ ಎಂದುತ್ತಿದ್ದೇವೆ.  ಪಿಲಿಕುಳ ನಿಸರ್ಗಧಾಮದ ಅಭಿವೃದ್ಧಿಯ ನಿಟ್ಟಿನಲ್ಲಿ ತಿಂಗಳಿಗೊಂದರಂತೆ ವರ್ಷಪೂರ್ತಿ ಪಿಲಿಕುಳ ದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಅದರಂತೆ ಇಂದಿನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ಈ ಸಂದರ್ಭದಲ್ಲಿ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದರು.

ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೋ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇ ಶಕ ಪ್ರಭಾಕರ ಶರ್ಮ, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ.ರಾವ್, ಎನ್.ಜಿ. ಮೋಹನ್, ಜಯಪ್ರಕಾಶ್ ಭಂಡಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಿಜಿಸ್ಟ್ರಾರ್ ಚಂದ್ರಹಾಸ್ ರೈ,ಮಂಗಳೂರು ಸಹಾಯಕ ಆಯುಕ್ತ ಡಾ.ಡಿ.ಆರ್.ಅಶೋಕ್, ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.

Write A Comment