ಮಂಗಳೂರು, ಆಗಸ್ಟ್. 10: ಜೀವನದಲ್ಲಿ ನಿರ್ದಿಷ್ಟ ಗುರಿಯಿದ್ದಲ್ಲಿ ಸೂಕ್ತ ಮಾರ್ಗದರ್ಶನದ ಮೂಲಕ ನಮ್ಮ ಗುರಿಯನ್ನು ಈಡೇರಿಸಲು ಸಾಧ್ಯ ಎಂದು ಕಾರ್ಗಿಲ್ ಕದನದಲ್ಲಿ ಪಾಲ್ಗೊಂಡಿದ್ದ, ಪರಮವೀರಚಕ್ರ ಪುರಸ್ಕೃತ ಗ್ರೆನೇಡಿಯರ್ ಸುಭೇದಾರ್ ಯೋಗೀಂದರ್ ಸಿಂಗ್ ಯಾದವ್ ಅಭಿಪ್ರಾಯಿಸಿದ್ದಾರೆ.
ಮಂಗಳೂರಿನ ಉರ್ವ ಶಾಲೆಯ ಆವರಣದಲ್ಲಿ ಯುವ ಬ್ರಿಗೇಡ್‌ನಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಾರ್ಗಿಲ್ ಕದನದ ಅನುಭವವನ್ನು ಹಂಚಿಕೊಂಡ ಅವರು, ಯುದ್ಧ ಭೂಮಿಯಲ್ಲಿ ಸಾವಿನ ಕದತಟ್ಟಿ ಬಂದವ ನಾನು. ನಾನು ಮೃತಪಟ್ಟಿದ್ದೇನೆ ಎಂಬ ಘೋಷಣೆಯೊಂದಿಗೆ ನನಗೆ ಪರಮವೀರ ಚಕ್ರ ಪುರಸ್ಕಾರವನ್ನೂ ನೀಡಲಾಗಿತ್ತು.
ಮಾಧ್ಯಮಗಳಲ್ಲಿ ನನಗೆ ಮರಣೋತ್ತರ ಪುರಸ್ಕಾರ ನೀಡಲಾಗಿದೆ ಎಂದು ಪ್ರಸಾರವಾಗಿತ್ತು. ಆದರೆ ಭಾರತ ಮಾತೆಯ ಸೇವೆಯ ಋಣ ಮಾತ್ರ ಕೊನೆಗೊಂಡಿರಲಿಲ್ಲ. ಹಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಿ ಮತ್ತೆ ಸೇವೆ ಮುಂದುವರಿಸಿದ್ದೇನೆ ಎಂದು ಅವರು ಹೇಳಿದರು.
ದೇಶ ನಮಗೆ ಏನು ನೀಡಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ನೀಡಿದ್ದೇವೆ ಎಂಬುವುದನ್ನು ನಾವು ಯೋಚಿಸಬೇಕು. ನನ್ನ ತಂದೆ ಸೈನ್ಯದಲ್ಲಿದ್ದರು. ಎಳೆಯ ವಯಸ್ಸಿನಲ್ಲಿಯೇ ಇದರಿಂದ ಸ್ಫೂರ್ತಿ ಪಡೆದು ನಾನು ಸೈನ್ಯಕ್ಕೆ ಸೇರಿದೆ. ಅತ್ಯುತ್ತಮ ತರಬೇತಿ ದೊರಕಿತು. ದೇಶ ಸೇವೆಯ ಭಾಗ್ಯ ನನ್ನದಾಯಿತು ಎಂದವರು ಹೇಳಿದರು.
ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಸೇನೆಯಲ್ಲಿ ಯುದ್ಧ ಭೂಮಿಯಲ್ಲಿರುವವನಿಗೆ ಯಾವ ಪ್ರಶಸ್ತಿ, ಪುರಸ್ಕಾರದ ಅಪೇಕ್ಷೆಯೂ ಇರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ 1965ರ ಭಾರತ-ಪಾಕಿಸ್ತಾನ ಯುದ್ಧದ 50ನೆ ವರ್ಷಾಚರಣೆಯ ‘ವಾರ್ ಆ್ ಟ್ಯಾಂಕರ್’ನ ಲಾಂಛನವನ್ನು ಗ್ರೆನೇಡಿಯರ್ ಸುಭೇದಾರ್ ಯೋಗಿಂದರ್ ಸಿಂಗ್ ಯಾದವ್ ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಶಿಕ್ಷಕ ಮತ್ತು ಸೈನಿಕ ರಾಷ್ಟ್ರದ ಕಣ್ಣುಗಳಿದ್ದಂತೆ. ಶಿಕ್ಷಕ ರಾಷ್ಟ್ರವನ್ನು ಬೆಳೆಸುತ್ತಾನೆ. ಸೈನಿಕ ರಾಷ್ಟ್ರ ಉಳಿಸುತ್ತಾನೆ ಎಂದರು. ಈ ಸಂದರ್ಭ ಯುವ ಬ್ರಿಗೇಡ್‌ನ ಮಾರ್ಗದರ್ಶಕರಾಗಿರುವ ಚಕ್ರವರ್ತಿ ಸೂಲಿಬೆಲೆ, ನರೇಶ್ ಶೆಣೈ ಉಪಸ್ಥಿತರಿದ್ದರು. ಸುಮುಖ್ ಬೆಟಗೇರಿ ಯುವ ಬ್ರಿಗೇಡ್ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ನಿತ್ಯಾನಂದ ವಿವೇಕ್ ವಂಶಿ ಸ್ವಾಗತಿಸಿದರು. ನಿವೇದಿತಾ ಪ್ರತಿಷ್ಠಾನದ ಸ್ವಾತಿ ರೈ ವಂದಿಸಿದರು.