ಮಂಗಳೂರು. ಅಗಸ್ಟ್,10 : ರಾಜ್ಯದ ಕರಾವಳಿಯಲ್ಲಿರುವ ಎಲ್ಲಾ ಬಂದರುಗಳ ಭದ್ರತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಪರ ಮುಖ್ಯ ಕಾರ್ಯದರ್ಶಿ(ಗೃಹ) ಎಸ್.ಕೆ. ಪಟ್ಟನಾಯಕ್ ಸೂಚಿಸಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಬಂದರು ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಎನ್.ಎಂ.ಪಿ.ಟಿ ಹಾಗೂ ಕಾರವಾರ ಬಂದರು ಹೊರತುಪಡಿಸಿ ಉಳಿದ ಕಿರುಬಂದರುಗಳಲ್ಲಿ ಭದ್ರತಾ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಯೋಜನೆ ರಚಿಸಬೇಕು. ಸಿಸಿಟಿವಿ, ಪೊಲೀಸ್ ವ್ಯವಸ್ಥೆ, ಭದ್ರತಾ ಸಿಬ್ಬಂದಿಗಳ ನೇಮಕ ಮತ್ತಿತರ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಸಮುದ್ರಮಾರ್ಗವು ಭಯೋತ್ಪಾದಕರಿಗೆ ಸುಲಭದ ದಾರಿಯಾಗಿದೆ. ಹೀಗಾಗಿ ಬಂದರುಗಳ ಭದ್ರತೆಯು ಅತ್ಯಂತ ಪ್ರಾಮುಖ್ಯವಾಗಿದೆ. ಆದ್ಯತೆಯಲ್ಲಿ ಭದ್ರತೆಗೆ ಸಂಬಂಧಪಟ್ಟ ಯೋಜನೆಗಳನ್ನು ಜಾರಿಗೊಳಿಸಬೇಕು. ಎಲ್ಲಾ ಮೀನುಗಾರಿಕಾ ಬೋಟುಗಳಿಗೆ ಕಲರ್ ಕೋಡ್ ಕಡ್ಡಾಯ ಮಾಡಬೇಕು. ಮಂಗಳೂರು ಹಳೇ ಬಂದರಿಗೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯಿಂದ ಭದ್ರತೆ ಒದಗಿಸುವ ಬಗ್ಗೆ ರಾಜ್ಯ ಸರಕಾರ ಪರಿಶೀಲಿಸುತ್ತಿದೆ. ಅದೇ ರೀತಿ ಹಳೇ ಬಂದರಿನಿಂದ ಸರಕುಸಾಗಿಸುವ ನೌಕೆಗಳ ಸಂಚಾರದಲ್ಲಿ ನಿಗಾ ಇಡಬೇಕು ಎಂದು ಅಪರ ಮುಖ್ಯ ಕಾರ್ಯದರ್ಶಿಗಳು ತಿಳಿಸಿದರು.
ಪೊಲೀಸ್ ಮಹನಿರ್ದೇಶಕ ಓಂಪ್ರಕಾಶ್ ಮಾತನಾಡಿ, ಬಂದರುಗಳ ಭದ್ರತೆ ವೃದ್ಧಿಸಲು ಬಂದರು, ಮೀನುಗಾರಿಕೆ ಹಾಗೂ ಪೊಲೀಸ್ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು.
ಅಪರ ಪೊಲೀಸ್ ಮಹಾನಿರ್ದೇಶಕ ಎ.ಎಂ. ಪ್ರಸಾದ್ ಸಭೆಯಲ್ಲಿ ಮಾತನಾಡಿ, ಸಮುದ್ರ ಹಾಗೂ ತೀರದಲ್ಲಿ ಭದ್ರತೆ ನಿಗಾ ಇಡಬೇಕು. ಕಿರು ಬಂದರುಗಳ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಬೇಕು. ಸ್ಥಳೀಯ ಪೊಲೀಸರ ನೆರವು ಅಲ್ಲದೇ, ಅಗತ್ಯಬಿದ್ದಲ್ಲಿ ಖಾಸಗೀ ಭದ್ರತಾ ಏಜನ್ಸಿಗಳ ಸೇವೆ ಬಳಸಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಪಶ್ಚಿಮ ವಲಯ ಐಜಿಪಿ ಅಮೃತಪಾಲ್, ಪೊಲೀಸ್ ಆಯುಕ್ತ ಎಸ್.ಮುರುಗನ್, ದ.ಕ. ಎಸ್‌ಪಿ ಡಾ.ಶರಣಪ್ಪ, ಉ.ಕ. ಎಸ್‌ಪಿ ದಿಲೀಪ್, ಕರಾವಳಿ ರಕ್ಷಣಾ ಪಡೆ ಎಸ್‌ಪಿ ಚೆನ್ನಬಸವಣ್ಣ, ಕೋಸ್ಟ್‌ಗಾರ್ಡ್, ಬಂದರು, ಮೀನುಗಾರಿಕೆ, ಎನ್‌ಎಂಪಿಟಿ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.