ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಅಡ್ಡಹೊಳೆ ಸಮೀಪ ಕಡಿದಾದ ಕೊಡ್ಯಕಲ್ಲು ತಿರುವಿನಲ್ಲಿ ಸೋಮವಾರ ಸಂಜೆ ವೇಳೆ ಟೂರಿಸ್ಟ್ ಜೀಪು ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟಿದ್ದಾರೆ.
ಶಿರಿಬಾಗಿಲು ಪೆರ್ಜೆ ಮನೆಯ ದಿ. ಗುಡ್ಡಪ್ಪ ಗೌಡರ ಪತ್ನಿ ರುಕ್ಮಿಣಿ (45) ಹಾಗೂ ಅದೇ ಮನೆಯ ವಿಶ್ವನಾಥ ಗೌಡರ ಪತ್ನಿ ಭವಾನಿ (35) ಮೃತರು. ಇವರು ಒಂದೇ ಮನೆಯ ಅಣ್ಣ- ತಮ್ಮಂದಿರ ಪತ್ನಿಯರು. ಟೂರಿಸ್ಟ್ ಜೀಪಿನಲ್ಲಿ ಚಾಲಕ ಸಹಿತ ಒಟ್ಟು 6 ಮಂದಿ ಪ್ರಯಾಣಿಸುತ್ತಿದ್ದರು.
ಜೀಪು ಚಾಲಕ ನೆಲ್ಯಾಡಿ ಹೊಸಮಜಲು ನಿವಾಸಿ ಚಂದ್ರಶೇಖರ, ಮೃತಪಟ್ಟ ಭವಾನಿ ಅವರ ಪತಿ ವಿಶ್ವನಾಥ, ಅಡ್ಡಹೊಳೆಯ ಕಾನ್ವೆಂಟ್ ಒಂದರ ಸಿಸ್ಟರ್ ಲಿಸ್ಸಿ, ಜೆಸ್ಸಿ ಅಡ್ಡಹೊಳೆ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾಸನದಿಂದ ಮಂಗಳೂರು ಕಡೆಗೆ ಬರುತ್ತಿದ್ದ ಪೆಟ್ರೋಲ್ ಟ್ಯಾಂಕರ್ ಅತಿ ವೇಗದಲ್ಲಿ ರಾಂಗ್ ಸೈಡ್‌ನಲ್ಲಿ ಬರುತ್ತಿತ್ತು. ನೆಲ್ಯಾಡಿಯಿಂದ ಗುಂಡ್ಯಕ್ಕೆ ಸರ್ವಿಸ್ ಮಾಡುವ ಟೂರಿಸ್ಟ್ ಜೀಪು ಶಿರಾಡಿ ಕಳೆದು ಮುಂದೆ ಹೋಗುತ್ತಿದ್ದಂತೆ ಕೊಡ್ಯಕಲ್ಲು ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಟ್ಯಾಂಕರ್ ಸಂಪೂರ್ಣ ರಾಂಗ್ ಸೈಡ್‌ನಲ್ಲಿ ಅತಿ ವೇಗದಲ್ಲಿ ಬರುತ್ತಿರುವುದನ್ನು ಕಂಡು ಜೀಪು ಚಾಲಕ ರಸ್ತೆ ಬದಿಯ ಚರಂಡಿಗೆ ಜೀಪನ್ನು ಇಳಿಸಿದ್ದರೂ ಅಲ್ಲಿಗೇ ಬಂದು ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರತೆಗೆ ಜೀಪು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟರು.
ಕೌಕ್ರಾಡಿ ತಾಪಂ ಸದಸ್ಯ ಭಾಸ್ಕರ ಎಸ್. ಗೌಡ, ಗುಂಡ್ಯದ ಯುವಕರಾದ ಯತೀಶ್ ಗುಂಡ್ಯ, ಪದ್ಮನಾಭ, ದಾಮೋದರ, ಸುಭಾಷ್ ಮತ್ತಿತರ ಯುವಕರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ. ಟ್ಯಾಂಕರ್ ಚಾಲಕ ಅಪಘಾತ ನಡೆಯುತ್ತಿದ್ದಂತೆ ಲಾರಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.
ತಬ್ಬಲಿಯಾದ 10 ವರ್ಷದ ಬಾಲಕ: ಪೆರ್ಜೆ ಮನೆಯ ಗುಡ್ಡಪ್ಪ ಗೌಡ ಅವರು 4 ತಿಂಗಳ ಹಿಂದೆ ಅನಾರೋಗ್ಯಕ್ಕೊಳಗಾಗಿ ಮೃತಪಟ್ಟಿದ್ದು ಅವರ ಪತ್ನಿ ರುಕ್ಮಿಣಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಡು ಬಡತನದಲ್ಲಿರುವ ಅವರಿಗೆ 10 ವರ್ಷದ ಪುತ್ರನಿದ್ದು ಇದೀಗ ತಬ್ಬಲಿಯಾಗಿದ್ದಾನೆ. ಒಂದೇ ಮನೆಯ ಇಬ್ಬರು ಸೊಸೆಯಂದಿರು ಒಂದೇ ಅಪಘಾತದಲ್ಲಿ ಮೃತಪಟ್ಟಿರುವುದು ಇನ್ನೊಂದು ದುರ್ವಿಧಿ.
ಲಂಗು ಲಗಾಮಿಲ್ಲದ ಸಂಚಾರಕ್ಕೆ ಕ್ರಮ ಅಗತ್ಯ: ಈಗಾಗಲೇ ಶಿರಾಡಿ ಘಾಟಿ ಪೂರ್ತಿ ಕಾಂಕ್ರಿಟೀಕರಣವಾಗಿದ್ದು, ಸೋಮವಾರದಿಂದ ಅಧಿಕೃತವಾಗಿ ಸಂಚಾರ ಆರಂಭವಾದೊಡನೇ ಈ ಹೆದ್ದಾರಿಯಲ್ಲಿ ಭೀಕರ ಅಪಘಾತ ನಡೆದಿದೆ. ವಿಜಯ ಕರ್ನಾಟಕ ಭಾನುವಾರದ ಸಂಚಿಕೆಯಲ್ಲಿ ‘ಬೇಡ ಅವಸರ, ಇರಲಿ ಎಚ್ಚರ’ ಎಂಬ ವರದಿ ಪ್ರಕಟಿಸಿ ಈ ಬಗ್ಗೆ ಮೊದಲೇ ಎಚ್ಚರಿಸಿತ್ತು.
ರಸ್ತೆ ದುರಸ್ತಿಯಾದ ನೆಪದಲ್ಲಿ ಲಂಗು ಲಗಾಮಿಲ್ಲದೆ ಅತಿ ವೇಗವಾಗಿ ಸಂಚರಿಸುವ ದೈತ್ಯ ವಾಹನಗಳಿಂದ ಇಲ್ಲಿ ಇದೇ ರೀತಿ ಅಪಘಾತಗಳು ಸಂಭವಿಸುವ ಮುನ್ಸೂಚನೆ ಆರಂಭದಂದೇ ದೊರೆತಿದ್ದು ಸಂಬಂಧಪಟ್ಟ ಇಲಾಖೆಗಳು ಎಲ್ಲ ವಾಹನಗಳಿಗೆ ಸೂಕ್ತ ರೀತಿಯಲ್ಲಿ ಸಂಚರಿಸುವಂತೆ ಸೂಚನೆ ನೀಡಬೇಕು.
ಅತಿ ವೇಗವಾಗಿ ಅಪಾಯಕಾರಿ ರೀತಿಯಲ್ಲಿ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕದೇ ಇದ್ದಲ್ಲಿ ಇನ್ನಷ್ಟು ಅವಘಡಗಳು ಎದುರಾಗುವ ಭೀತಿ ಇದೆ. ಸಂಚಾರಿ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ತಾಪಂ ಸದಸ್ಯ ಭಾಸ್ಕರ ಎಸ್. ಗೌಡ ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.