ಮಂಗಳೂರು, ಆ.11: ಮಾದಕ ದ್ರವ್ಯಗಳ ಪರಿಚಯ ಹಾಗೂ ದುಷ್ಪರಿಣಾಮಗಳ ಬಗ್ಗೆ 8ರಿಂದ 11ನೆ ತರಗತಿಯ ಪಠ್ಯದಲ್ಲಿ ಅಳವಡಿಸುವಂತೆ ಸಿಬಿಎಸ್‌ಇ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ತಿಳಿಸಿದ್ದಾರೆ.
ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ ಇಲಾಖೆ) ಎಸ್.ಕೆ.ಪಟ್ಟನಾಯಕ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾದಕದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾರ್ಥಿ ಸಂಘಟನೆಗಳು ಮತ್ತು ಎನ್‌ಜಿಒಗಳ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯಲ್ಲಿ ಮುಖ್ಯವಾಗಿ ಶಾಲಾ-ಕಾಲೇಜುಗಳ ಯುವಕ ರಲ್ಲಿ ಮಾದಕ ದ್ರವ್ಯ ಸೇವನೆ ಹೆಚ್ಚಾಗುತ್ತಿರುವ ಬಗ್ಗೆ ಸಭೆಯಲ್ಲಿ ಆತಂಕ ವ್ಯಕ್ತವಾಗಿದೆ. ಬಹುತೇಕ ಸಂದರ್ಭಗಳಲ್ಲಿ ಪೊಲೀಸರು ನೇರವಾಗಿ ಶಾಲಾ-ಕಾಲೇಜು ಆವರಣದೊಳಗೆ ಪ್ರವೇಶಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಶಾಲಾ ಕಾಲೇಜಿನ ಉಪನ್ಯಾಸಕರು, ಮುಖ್ಯಸ್ಥರೇ ಪೊಲೀಸರಾಗಿ ಕಾರ್ಯನಿರ್ವಹಿಸ ಬೇಕಾಗುತ್ತದೆ. ತಮ್ಮ ಮಕ್ಕಳ ನಡವಳಿಕೆ ಬಗ್ಗೆ ಕಣ್ಣಿಟ್ಟಿರಬೇಕು. ಮಾತ್ರವಲ್ಲದೆ ಜಿಲ್ಲೆ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಶಾಲಾ ಆಡಳಿತ ಮಂಡಳಿಗಳು, ವಿವಿಧ ಇಲಾಖೆಗಳು, ಎನ್‌ಸಿಸಿ, ಸಂಘಸಂಸ್ಥೆಗಳು, ಎನ್ನೆಸ್ಸೆಸ್ ಒಳಗೊಂಡ ಸಭೆಯನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ನಡೆಸಿ, ಸಭೆಯಲ್ಲಿ ಪ್ರಸ್ತಾಪ ವಾಗುವ ವಿಷಯಗಳು, ಕೈಗೊಳ್ಳಲಾಗುವ ನಿರ್ಧಾರಗಳನ್ನು ಅನುಸರಿಸಬೇಕು ಎಂದು ಅವರು ಸಲಹೆ ನೀಡಿದರು.
ಮಾದಕ ದ್ರವ್ಯಗಳನ್ನು ಪತ್ತೆ ಹಚ್ಚುವ ಸಾಧನಗಳನ್ನು ಪೊಲೀಸ್ ಇಲಾಖೆಗೆ ಪೂರೈಸಲಾಗಿದ್ದರೂ, ಅವುಗಳನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪೂರೈಸುವಂತೆ ಮಾದಕದ್ರವ್ಯ ನಿಯಂ ತ್ರಣ ಮಂಡಳಿಗೆ ತಿಳಿಸಲಾಗಿದೆ. ವಿಶೇಷ ಕಾರ್ಯ ಪಡೆ ರಚನೆಯ ಬೇಡಿಕೆ ಬಗ್ಗೆ ಗಮನಹರಿಸಲಾಗುವುದು. ಪ್ರಸ್ತುತ ಪ್ರತಿ ಜಿಲ್ಲೆಯಲ್ಲೂ ಕಾರ್ಯನಿರ್ವಹಿಸುತ್ತಿರುವ ತರಬೇತು ಹೊಂದಿದ ಪೊಲೀಸ್ ಶ್ವಾನವನ್ನು ರೈಲ್ವೆ ನಿಲ್ದಾಣ, ಬೀಚ್ ಮೊದಲಾದ ಕಡೆಗಳಲ್ಲಿ ಮಾದಕ ದ್ರವ್ಯಗಳನ್ನು ಪತ್ತೆ ಹಚ್ಚಲು ಬಳಸಿಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಡಿಜಿಪಿ ಓಂ ಪ್ರಕಾಶ್ ತಿಳಿಸಿದರು.
ಸಭೆಯಲ್ಲಿ ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಮೂಡುಬಿದಿರೆ ಆಳ್ವಾಸ್ ಕಾಲೇಜು ಹಾಗೂ ಸಹ್ಯಾದ್ರಿ ಕಾಲೇಜಿನ ಪ್ರತಿನಿಧಿ ಗಳು, ಎನ್‌ಜಿಒ ಸಂಸ್ಥೆಯ ಅಶೋಕ್ ಭಟ್, ಕಮಲಾಗೌಡ, ಮ್ಯಾಂಗಲೋರಿಯನ್ ಡಾಟ್ ಕಾಂನ ವಾಯ್ಲೆಟ್, ಕ್ರಿಯೇಟಿವ್ ಫೌಂಡೇಶನ್, ಜನಜಾಗೃತಿ ವೇದಿಕೆ ಮೊದಲಾದ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಸಂಸ್ಥೆಗಳಿಂದ ಮಾದಕ ದ್ರವ್ಯ ವ್ಯಸನದ ವಿರುದ್ಧ ಹಮಿಕೊಳ್ಳಲಾದ ಜಾಗೃತಿ ಕಾರ್ಯಕ್ರಮ ಹಾಗೂ ಆಗಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಎಡಿಜಿಪಿಗಳಾದ ಎ.ಎಂ.ಪ್ರಸಾದ್, ಸುನಿಲ್, ಐಜಿಪಿ ಅಮೃತ್ ಪಾಲ್, ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್, ಜಿಪಂ ಸಿಇಒ ಶ್ರೀವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.
ಮಾದಕ ದ್ರವ್ಯ ಸೇವನೆಯಲ್ಲಿ ಯುವಕರೇ ಹೆಚ್ಚು :
ದ.ಕ. ಜಿಲ್ಲೆಯಲ್ಲಿ ಯುವಜನರಲ್ಲಿ ಮಾದಕ ದ್ರವ್ಯಗಳ ಸೇವನೆ ಚಟ ಅತ್ಯಂತ ವ್ಯಾಪಕವಾಗಿ ಹೆಚ್ಚುತ್ತಿದೆ ಎಂದು ಪ್ರಸ್ತಾಪಿಸಿದ ಲಿಂಕ್ ಡಿಎಡಿಕ್ಷನ್ ಸೆಂಟರ್ ಪ್ರತಿನಿಧಿ ಲಿಡಿಯಾ ಅವರು, ಸಾಫ್ಟ್‌ವೇರ್ ಎಂಜಿನಿಯರ್ ಮೊದಲಾದ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೂ ಮಾದಕ ದ್ರವ್ಯ ವ್ಯಸನದ ಚಟಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ನುಡಿದರು.
ನಾನಾ ರೀತಿಯ ಗಾಂಜಾದ ಜತೆಗೆ ಇದೀಗ ನೈಸರ್ಗಿಕವಾಗಿ ದೊರೆಯುವ ಅಣಬೆಗಳನ್ನು ಒಣಗಿಸಿ ಮಾದಕ ದ್ರವ್ಯವಾಗಿ ಬಳಸುವುದೂ ನಡೆಯುತ್ತಿದೆ ಎಂದು ಲಿಡಿಯಾ ಆತಂಕ ವ್ಯಕ್ತಪಡಿಸಿದರು. 10 ವರ್ಷಗಳ ಹಿಂದೆ ವಯಸ್ಸಾದವರು ಚಿಕಿತ್ಸೆಗಾಗಿ ತಮ್ಮ ಕೇಂದ್ರಕ್ಕೆ ದಾಖಲಾಗುತ್ತಿದ್ದರೆ, ಇದೀಗ 16ರಿಂದ 18 ವರ್ಷದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಲಿಡಿಯಾ ಹೇಳಿದರು.
ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಮೆಡಿಕಲ್‌ಗಳ ಪರವಾನಿಗೆ ರದ್ದು : ಜಿಲ್ಲಾಧಿಕಾರಿ
ಮಾದಕ ದ್ರವ್ಯ ಮಾರಾಟ ಹಾಗೂ ಸೇವನೆ ಕುರಿತಂತೆ ಕೊಟ್ಪಾ ಕಾಯ್ದೆಯನ್ನು ದ.ಕ. ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಪೊಲೀಸ್ ಇಲಾಖೆಯಿಂದ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮಾದಕ ದ್ರವ್ಯ ಮಾರಾಟ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 40ಕ್ಕೂ ಅಧಿಕ ಮೆಡಿಕಲ್‌ಗಳ ಪರವಾನಿಗೆಯನ್ನು ರದ್ದುಪಡಿಸಲಾಗಿದೆ ಎಂದರು.
ಡ್ರಗ್ಸ್ ನಿಯಂತ್ರಣಕ್ಕೆ ಸಾರ್ವಜನಿಕರು, ಎನ್‌ಜಿಒಗಳನ್ನು ಒಳಗೊಂಡ ವಾರ್ಡ್ ಕಮಿಟಿ, ಮೊಹಲ್ಲಾ ಕಮಿಟಿ ರಚಿಸುವ ಚಿಂತನೆಯೂ ಇದೆ ಎಂದು ಜಿಲ್ಲಾಧಿಕಾರಿ ನುಡಿದರು.