ಬಂಟ್ವಾಳ, ಆ.11: ದಾರಿ ಕೇಳುವ ನೆಪದಲ್ಲಿ ಇಲ್ಲಿನ ಮೆಲ್ಕಾರ್ ಸಮೀಪದ ಕಂದೂರಿನಲ್ಲಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಸಜೀಪಮುನ್ನೂರು ಗ್ರಾಮದ ಮಲೈಬೆಟ್ಟು ನಿವಾಸಿ ನಾಸಿರ್ (28) ಎಂಬವರನ್ನು ಆ.6ರಂದು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಚಿ ನಿವಾಸಿ ವಿಜಿತ್(22), ಗುರುಪುರ ನಿವಾಸಿ ಅನಿಷ್(22) ಹಾಗೂ ವಾಮಂಜೂರು ನಿವಾಸಿ ಕಿರಣ್(21) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಮಂಚಿ ನಿವಾಸಿ ಅಭಿಜಿತ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬೆಳ್ಳಿ ಯಪ್ಪನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಡಿಸಿಐಬಿ ಹಾಗೂ ಬಂಟ್ವಾಳ ನಗರ ಪೊಲೀಸರನ್ನೊಳಗೊಂಡ ತಂಡವು ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಸಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವುದಾಗಿ ನಗರ ಠಾಣೆ ಎಸೈ ನಂದಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.
ತಡರಾತ್ರಿ ಈ ಘಟನೆ ನಡೆದಿದ್ದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಪೊಲೀಸರಿಗೂ ಸವಾಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ರೌಡಿ ಶೀಟರ್‌ಗಳು, ಅಪರಾಧ ಕೃತ್ಯದಲ್ಲಿ ಭಾಗಿಯಾದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಆದರೆ ಆ ವೇಳೆ ಕೃತ್ಯದ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ವಿವಿಧ ಆಯಾಮಾಗಳಲ್ಲಿ ತನಿಖೆ ನಡೆಸಿದಾಗ ಪ್ರಕರಣದ ನಿಜಾಂಶ ಬೆಳಕಿಗೆ ಬಂದಿದ್ದು ಆರೊಪೀಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಈ ದಾಳಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮಾಡಿರಲಿಲ್ಲ. ಬದಲಾಗಿ ಪ್ರತೀಕಾರಕ್ಕಾಗಿ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಸಾಲೆತ್ತೂರಿನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.