ಮಂಗಳೂರು, ಆ.11: ಅರಣ್ಯ ಇಲಾಖೆ, ದ.ಕ. ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಲಕ್ಷವೃಕ್ಷ ಅಭಿಯಾನ ಕಾರ್ಯಕ್ರಮ ಸೋಮವಾರ ನಗರದ ಸೈಂಟ್ ಅಲೋಶಿ ಯಸ್ ಕಾಲೇಜಿನ ಲೊಯೋಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಿಡನೆಟ್ಟು ಕಾಡು ಬೆಳೆಸುವುದು ನಮ್ಮೆಲ್ಲರ ಆಶಯವಾಗಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ಲಕ್ಷವೃಕ್ಷ ಅಭಿಯಾನ’ದ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರಕಾರವು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಚಿಣ್ಣರ ವನ್ಯದರ್ಶನ ಹಾಗೂ ಹಸಿರು ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಭವಿಷ್ಯತ್ತಿನಲ್ಲಿ ಪರಿಸರ ಸಂರಕ್ಷಣೆಗೆ ಪ್ರೇರೇಪಿಸುವುದು ಈ ಮಹತ್ವಾಕಾಂಕ್ಷೆಯ ಯೋಜನೆಗಳ ಪ್ರಮುಖ ಉದ್ದೇಶ ಎಂದವರು ಹೇಳಿದರು.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಬಿ.ಜೆ. ಹೊಸಮಠ್, ಶಾಸಕರಾದ ಜೆ.ಆರ್.ಲೋಬೊ, ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಸಿಇಒ ಶ್ರೀವಿದ್ಯಾ, ದ.ಕ. ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕ ಬಿ.ಕಿರಣ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಕೆನರಾ ಕಾಲೇಜಿನ ವಿದ್ಯಾರ್ಥಿಗಳು ಆಧುನಿಕತೆಯ ಅಟ್ಟಹಾಸಕ್ಕೆ ಅರಣ್ಯ ನಾಶದ ಕುರಿತಾದ ಕಿರುರೂಪಕವನ್ನು ಪ್ರದರ್ಶಿಸಿದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.