ಮಂಗಳೂರು, ಆ. 12: ದ.ಕ. ಜಿಲ್ಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಗಳು ಸಿದ್ಧಪಡಿಸಿರುವ ವಿಜ್ಞಾನ ಮಾದರಿಗಳ ಜಿಲ್ಲಾ ಮಟ್ಟದ ಸ್ಪರ್ಧೆ ಹಾಗೂ ಪ್ರದರ್ಶನ ಕಾರ್ಯಕ್ರಮ (ಇನ್‌ಸ್ಪಾಯರ್ ಅವಾರ್ಡ್)ಕ್ಕೆ ಮಂಗಳವಾರ ನಗರದ ಸ್ಕೌಟ್ ಭವನದಲ್ಲಿ ಚಾಲನೆ ನೀಡಲಾಯಿತು.
ಉರ್ವ ಕೆನರಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಗಳ ವಿಜ್ಞಾನ ಮಾದರಿಗಳ ಪ್ರದರ್ಶನ ಇಂದಿನಿಂದ ಆ.14ರವರೆಗೆ ನಡೆಯಲಿದೆ. ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೊಸದಿಲ್ಲಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಬೆಂಗಳೂರು ಹಾಗೂ ದ.ಕ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಮಂಗಳೂರು ಇದರ ಆಶ್ರಯದಲ್ಲಿ ವಿಜ್ಞಾನ ಮಾದರಿ ವಸ್ತುಪ್ರದರ್ಶನ ಸ್ಪರ್ಧೆ ಆಯೋಜನೆಗೊಂಡಿದೆ.
ಉದ್ಘಾಟನೆ ನೆರವೇರಿಸಿ ಮಾತನಾಡಿದ ದ.ಕ. ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಡಾ.ಕಲಾಂ ಅವರ ಆದರ್ಶಗಳು ವಿಜ್ಞಾನದ ವಿದ್ಯಾರ್ಥಿಗಳಲ್ಲಿ ಹೊಸ ಕನಸುಗಳಿಗೆ ನಾಂದಿ ಹಾಡಲಿ ಎಂದರು. ಅಧ್ಯಕ್ಷತೆ ವಹಿಸಿದ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಪ್ರಶ್ನಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಿದಾಗ, ವಿಜ್ಞಾನದ ಆಸಕ್ತಿ ಸಹಜವಾಗಿಯೇ ಮೂಡಿಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಐವನ್ ಡಿಸೋಜ, ವಿಧಾನ ಪರಿಷತ್‌ನ ವಿಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ದ.ಕ. ಜಿಲ್ಲಾಧಿ ಕಾರಿ ಎ.ಬಿ.ಇಬ್ರಾಹೀಂ, ಮನಪಾ ಸದಸ್ಯೆ ಜಯಂತಿ ಆಚಾರ್, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್.ಕಾಮತ್, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ನಾಗೇಂದ್ರ ಮಧ್ಯಸ್ಥ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ, ಮೋಸೆಸ್ ಜಯಶೇಖರ್ ಉಪಸ್ಥಿತರಿದ್ದರು.
ಡಯಟ್ ಪ್ರಾಂಶುಪಾಲ ಸಿಪ್ರಿಯನ್ ಮೊಂತೇರೊ ಸ್ವಾಗತಿಸಿದರು. ಎ.ಬಿ. ಕುಟಿನ್ಹ ವಂದಿಸಿದರು. ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
529 ವಿಜ್ಞಾನ ಮಾದರಿಗಳ ಪ್ರದರ್ಶನ
ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ದ.ಕ. ಜಿಲ್ಲೆಯ 282 ಪ್ರಾಥಮಿಕ ಹಾಗೂ ಪ್ರೌಢಶಾಲೆಯ 247 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 529 ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳು ಪ್ರದರ್ಶನಗೊಳ್ಳಲಿವೆ. ಆ.11 ಹಾಗೂ 12ರಂದು ಬಂಟ್ವಾಳ ಬೆಳ್ತಂಗಡಿ, ಮೂಡುಬಿದಿರೆ ಮತ್ತು ಪುತ್ತೂರು ಬ್ಲಾಕ್‌ನ ವಿದ್ಯಾರ್ಥಿಗಳ ವಿಜ್ಞಾನ ಸ್ಪರ್ಧೆಯ ಮಾದರಿಗಳು ಪ್ರದರ್ಶನಗೊಳ್ಳುತ್ತಿದ್ದು, ಆ.13 ಹಾಗೂ 14ರಂದು ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಹಾಗೂ ಸುಳ್ಯ ವ್ಯಾಪ್ತಿಯ ವಿದ್ಯಾರ್ಥಿಗಳ ವಿಜ್ಞಾನ ಮಾದರಿಗಳು ಪ್ರದರ್ಶನಗೊಳ್ಳಲಿವೆ.