ಮಂಗಳೂರು,ಆಗಸ್ಟ್.12: ಉದ್ದಿಮೆದಾರರಿಗೆ ಸಾಲ ನೀಡುವಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಯ(ಕೆಎಸ್‌ಎಫ್‌ಸಿ) ಧೋರಣೆ ಈಗ ಸಂಪೂರ್ಣ ಬದಲಾಗಿದ್ದು, ಪಾಲುದಾರನ ರೀತಿಯಲ್ಲಿ ಸಹಕರಿಸುತ್ತಿದೆ ಎಂದು ಕೆಎಸ್‌ಎಫ್‌ಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಚ್.ಶ್ರೀನಿವಾಸಮೂರ್ತಿ ಹೇಳಿದರು.
ಕೆಎಸ್‌ಎಫ್‌ಸಿ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಉದ್ಯಮಿಗಳಿಗಾಗಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಸಂಸ್ಥೆಯು ಉದ್ಯಮಿಗಳಿಗೆ ಪೂರಕವಾಗಿ ಸಾಲ ಮಂಜೂರಾತಿ ನಿಯಮಗಳನ್ನು ಬದಲಿಸಿದೆ. ಸಾಲಕ್ಕೆ ನೀಡಬೇಕಾದ ಭದ್ರತೆಯನ್ನೂ ಸಡಿಲಿಸಿದೆ. ಉದ್ಯಮಿಗಳು ಈ ನೀತಿಯ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.
ಬದಲಾದ ನೀತಿಯಿಂದ ಕೆಎಸ್ಎಫ್‌ಸಿಗೂ ಅನುಕೂಲ ಆಗಿದೆ. ಸಂಸ್ಥೆಯ ಅನುತ್ಪಾದಕ ಆಸ್ತಿಯ ಮೊತ್ತ ಶೇಕಡ 5ಕ್ಕಿಂತ ಕೆಳಗೆ ಇಳಿದಿದೆ. ಇದರಿಂದ ಸಂಸ್ಥೆಯ ಸಾಮರ್ಥ್ಯ ವೃದ್ಧಿಸಿದ್ದು, ಗ್ರಾಹಕರಲ್ಲಿ ವಿಶ್ವಾಸವೂ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವುದಕ್ಕೆ ಆದ್ಯತೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾದ ಕೈಗಾರಿಕಾ ಬೆಳವಣಿಗೆ ಆಗಬೇಕು ಎಂಬುದು ಸಂಸ್ಥೆಯ ಆಶಯ ಎಂದು ಹೇಳಿದರು.
ಮೊದಲ ಪೀಳಿಗೆಯ ಉದ್ಯಮಿಗಳಿಗೆ ಶೇ 8ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ರೂಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಶೇಕಡ 4ರ ಬಡ್ಡಿ ದರದಲ್ಲಿ ಕೆಎಸ್‌ಎಫ್‌ಸಿ ಮೂಲಕ ನೀಡುತ್ತಿದ್ದ ಸಾಲದ ಮೊತ್ತದ ಮಿತಿಯನ್ನು 5 ಕೋಟಿಗೆ ಹೆಚ್ಚಿಸಿ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಅತ್ಯುತ್ತಮ ವ್ಯವಹಾರ ಹಿನ್ನೆಲೆಯುಳ್ಳ ಹಳೆಯ ಗ್ರಾಹಕರಿಗೆ 3 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲದ ಮೇಲಿನ ಬಡ್ಡಿಯಲ್ಲಿ ಶೇ 0.5ರಷ್ಟು ರಿಯಾಯ್ತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಗೋದಾಮುಗಳ ನಿರ್ಮಾಣ ಮತ್ತು ಸೌರ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಶೇ 4ರ ಬಡ್ಡಿ ದರದಲ್ಲಿ ಸಂಸ್ಥೆಯು ಸಾಲ ನೀಡುತ್ತಿದೆ. ಸೌರ ಶಕ್ತಿ ಉತ್ಪಾದನೆಯು ಒಂದು ಲಾಭದಾಯಕ ಉದ್ದಿಮೆಯಾಗಿ ಗೋಚರಿಸುತ್ತಿದೆ. ದುಡಿಯವ ಬಂಡವಾಳ ಒದಗಿಸುವುದರಲ್ಲೂ ಹಣಕಾಸು ಸಂಸ್ಥೆ ಸರಳ ನಿಯಮಗಳನ್ನು ಪಾಲಿಸುತ್ತಿದೆ. ಈ ಎಲ್ಲವನ್ನೂ ಉದ್ದಿಮೆದಾರರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಕೆಎಸ್‌ಎಫ್‌ಸಿ ಮೈಸೂರು ವೃತ್ತದ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ಶಿರೀಶ್ ಮಾತನಾಡಿ, 2002ರಿಂದ ಈಚೆಗೆ ದೇಶದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆ ಕುಂಠಿತವಾಗಿದೆ. ವಾಣಿಜ್ಯ ರಿಯಲ್ ಎಸ್ಟೇಟ್ ಮತ್ತು ಸೇವಾ ವಲಯಕ್ಕೆ ಉದ್ಯಮಿಗಳು ಆದ್ಯತೆ ನೀಡುತ್ತಿದ್ದಾರೆ. ಉದ್ಯೋಗ ಸೃಷ್ಟಿಯಿಂದ ಈ ಬೆಳವಣಿಗೆ ಒಳ್ಳೆಯದಲ್ಲ ಎಂದು ಹೇಳಿದರು.
ಮಂಗಳೂರು ಶಾಖೆ ಉಪ ಪ್ರಧಾನ ವ್ಯವಸ್ಥಾಪಕ ಜಿ.ವಿ. ಚಂದ್ರಕುಮಾರ್ ಸ್ವಾಗತಿಸಿದರು. ವ್ಯವಸ್ಥಾಪಕಿ ವೀಣಾ ಕುಮಾರಿ, ಉಡುಪಿ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮೋಹನ್ ಉಪಸ್ಥಿತರಿದ್ದರು