ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು: ಬೆಳ್ತಂಗಡಿಯಲ್ಲಿ ಭೂಮಾಲಕರೊಬ್ಬರು ಸುಂದರ ಮಲೆಕುಡಿಯ ಎಂಬವರ ಮೇಲೆ ಹಲ್ಲೆ ನಡೆಸಿ ಅವರ ಕೈ ಬೆರಳು ಕತ್ತರಿಸಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ಪತ್ರಿಕಾಗೋಷ್ಠಿ ನಡೆಸಲು ಬುಧಾವರ ಮಂಗಳೂರಿನ ಪತ್ರಿಕಾ ಭವನಕ್ಕೆ ಆಗಮಿಸಿದ ಚಿಂತಕ,ಲೇಖಕ ಹಾಗೂ ಕರ್ನಾಟಕ ಹಿಂದೂಳಿದ ವರ್ಗಗಳ ವೇದಿಕೆಯ ರಾಜ್ಯಾಧ್ಯಕ್ಷ ಮೈಸೂರಿನ ಪ್ರೊ.ಭಗವಾನ್ ಅವರ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಹಿಂದೂ ಸಂಘಟನೆಯ ಕೆಲವು ಯುವಕರು ಪ್ರೆಸ್‌ಕ್ಲಬ್ ಬಳಿ ಜಾಮಾಯಿಸಿ, ಬಂಧನಕ್ಕೊಳಗಾದ ಘಟನೆ ನಡೆದಿದ್ದು, ಸ್ಥಳದಲ್ಲಿ ಸ್ವಲ್ಪ ಹೊತ್ತು ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಪ್ರೊ|ಭಗವಾನ್ ಅವರು ಈ ಹಿಂದೆ ಭಗವದ್ಗೀತೆಯನ್ನು ಸುಡ ಬೇಕು,“ಹಿಂದೂ ದೇವರನ್ನು ಪೂಜಿಸಬೇಡಿರಿ. ಹಿಂದೂ ದೇವತೆಗಳ ಕೈಯಲ್ಲಿ ಶಸ್ತ್ರಾಸ್ತ್ರಗಳಿದ್ದು, ಇದು ಹಿಂಸೆಯ ಸಂಕೇತ” ಎಂಬ ವಿವಾದತ್ಮಾಕ ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಪ್ರೊ|ಭಗವಾನ್ ಅವರು ಮಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಲು ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಕೆಲವು ಹಿಂದೂ ಸಂಘಟನೆಯ ಕಾರ್ಯಕರ್ತರು ಪತ್ರಿಕಾ ಭವನದ ಹೊರಗೆ ಜಮಾಯಿಸಿ, ಪ್ರೊ|ಭಗವಾನ್ ಮೇಲೆ ದಾಳಿ ನಡೆಸುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಆದರೆ ಭಗವಾನ್ ಅವರ ಪತ್ರಿಕಾಗೋಷ್ಠಿಯ ಸುಳಿವು ಪಡೆದಿದ್ದ ಪೊಲೀಸರು ಮೊದಲೇ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಬಂದೋಬಸ್ತ್ ಕೈಗೊಂಡಿದ್ದರು. ತಮ್ಮ ಯೋಜನೆ ವಿಫಲಗೊಂಡ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ಪತ್ರಿಕಾಗೋಷ್ಟಿಗೆ ಅಡ್ಡಿಪಡಿಸಲು ಯತ್ನಿಸಿದರಲ್ಲದೇ,ಭಗವಾನ್ ವಿರುದ್ಧ ದಿಕ್ಕಾರ ಕೂಗಿದರು. ಭಗವಾನ್ ಅವರದು ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ. ಅವರು ಮಂಗಳೂರಿಗೆ ಕಾಲಿಡಬಾರದು ಎಂಬ ಪೋಷಣೆಗಳನ್ನು ಕೂಗಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಎಸಿಪಿ ತಿಲಕಚಂದ್ರ ಅವರ ಆದೇಶದ ಮೇರೆಗೆ ಬರ್ಕೆ ಠಾಣಾ ಪೊಲೀಸರು ಪ್ರೊ.ಭಗವಾನ್ ವಿರುದ್ಧ ಧಿಕ್ಕಾರ ಕೂಗಿದ ಹಿಂದು ಸಂಘಟನೆ ಕಾರ್ಯಕರ್ತರನ್ನು ಬಂಧಿಸಿ ಠಾಣೆಗೆ ಕರೆದೊಯ್ದರು.