ಮಂಗಳೂರು, ಆ.13: ಅಮಾನತುಗೊಂಡಿದ್ದ ಕದ್ರಿ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಟಿ.ಡಿ.ನಾಗರಾಜ್‌ರನ್ನು ಬಜ್ಪೆ ಠಾಣೆಗೆ ವರ್ಗಾಯಿಸಿರುವುದನ್ನು ಮಂಗಳೂರು ವಕೀಲ ಸಂಘ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ, ಇತ್ತೀಚೆಗೆ ವಕೀಲ ಉತ್ತಮ್ ಕುಮಾರ್ ರೈ ಅವರ ಮೇಲೆ ಹಲ್ಲೆ ನಡೆಸಿದ ನಾಗರಾಜ್ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ವಕೀಲರ ಸಂಘ ಪ್ರತಿಭಟನೆ ನಡೆಸಿತ್ತು. ಉನ್ನತ ಅಧಿಕಾರಿಗಳು ಪ್ರಕರಣದ ಗಂಭೀರತೆ ಅರಿತು ನಾಗರಾಜ್ ಅವರನ್ನು ಅಮಾನತುಗೊಳಿಸಿದ್ದರು. ಆದರೆ ಯಾವುದೇ ತನಿಖೆಯಾಗದೆ ಮರಳಿ ಕರ್ತವ್ಯಕ್ಕೆ ಅವಕಾಶ ಕಲ್ಪಿಸಿರುವುದು ಖಂಡನೀಯ ಎಂದರು.
ಐಪಿಸಿ ಸೆಕ್ಷನ್ 323, 341, 504, 506, 384, 386, 511 ಮತ್ತು ಸೆಕ್ಷನ್ 34ರ ಅಡಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾಗರಾಜ್ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಇದೀಗ ಅವರನ್ನು ಬೇರೆಡೆಗೆ ವರ್ಗಾಯಿಸುವ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಕಾನೂನು ಪಾಲನೆ ಮಾಡಬೇಕಾದವರೇ ಈ ರೀತಿ ಮಾಡಿದರೆ ಜನಸಾಮಾನ್ಯರ ಪಾಡೇನು. ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನನ್ನು ಉಲ್ಲಂಘಿಸುತ್ತಿರುವುದು ವಿಪರ್ಯಾಸ ಎಂದು ಎಸ್.ಪಿ.ಚೆಂಗಪ್ಪ ಹೇಳಿದರು.
ನಾಗರಾಜ್ ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಇರುವುದನ್ನು ಖಂಡಿಸಿರುವ ವಕೀಲರ ಸಂಘ ಬುಧವಾರ ಕೋರ್ಟ್ ಕಲಾಪಗಳಲ್ಲಿ ಭಾಗವಹಿಸಿದೆ ಪ್ರತಿಭಟಿಸಿದೆ. ಪ್ರಕರಣದ ಕುರಿತಾಗಿ ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಸಲ್ಲಿಸಲಾಗಿದೆ. ಈ ಪ್ರಕರಣದ ಕುರಿತಾಗಿ ಸಿಒಡಿ ಅಥವಾ ಸಿಬಿಐ ತನಿಖೆ ಅಗತ್ಯವಾಗಿ ಆಗಬೇಕು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಯಶೋದರ ಪಿ.ಕರ್ಕೇರಾ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಚ್.ವಿ., ಕೋಶಾಧಿಕಾರಿ ಯತೀಶ, ವಕೀಲ ಉತ್ತಮ್ ಕುಮಾರ್ ರೈ ಉಪಸ್ಥಿತರಿದ್ದರು.