ಕನ್ನಡ ವಾರ್ತೆಗಳು

ಮಂಗಳೂರು ಸರಕಾರಿ ಆಸ್ಪತ್ರೆ ವೆನ್ಲಾಕ್‌ನಲ್ಲಿ ನವೀಕೃತ ಹಿಮೋಡಯಾಲಿಸಿಸ್ ವಿಭಾಗ ಉದ್ಘಾಟನೆ

Pinterest LinkedIn Tumblr

wenlock_dayalis_center_1

ಮಂಗಳೂರು, ಆ.13: ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ, ಸರಕಾರಿ ಆಸ್ಪತ್ರೆಗಳ ಬಳಕೆದಾರರಿಂದ ಸಂಗ್ರಹಿಸಲಾಗುವ ಶುಲ್ಕವನ್ನು ಬಡ ರೋಗಿಗಳ ಅತ್ಯುತ್ತಮ ಚಿಕಿತ್ಸೆಗಾಗಿಯೇ ಉಪಯೋಗಿಸಬೇಕು ಎಂದು ಸಲಹೆ ನೀಡಿದ್ದಾರೆ.

ದ.ಕ. ಜಿಲ್ಲಾಸ್ಪತ್ರೆ ವೆನ್ಲಾಕ್‌ನಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ನವೀಕೃತಗೊಂಡ ಹಿಮೋಡಯಾಲಿಸಿಸ್ ವಿಭಾಗದ ಸಾಂಕೇತಿಕ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಐಎಂಎ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ನಾನು ಆರೋಗ್ಯ ಮಂತ್ರಿಯಾಗಿದ್ದ ಸಂದರ್ಭ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿದಾಗ ಇಲ್ಲಿ ಡಯಾಲಿಸಿಸ್ ವ್ಯವಸ್ಥೆ ಇರಲಿಲ್ಲ. ಇದೀಗ ಇಲ್ಲಿ ಉತ್ತಮ ಡಯಾಲಿಸಿಸ್ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ ಡಯಾಲಿಸಿಸ್ ವ್ಯವಸ್ಥೆಗೆ ವಿಶೇಷ ಗಮನಹರಿಸಬೇಕು. ಮೂಲಭೂತ ಸೌಕರ್ಯಗಳ ಜತೆ ಸಿಬ್ಬಂದಿಯನ್ನು ಒದಗಿಸಬೇಕು ಎಂದವರು ಹೇಳಿದರು.

wenlock_dayalis_center_2 wenlock_dayalis_center_3

ಆಸ್ಪತ್ರೆಗಳಲ್ಲಿ ವಾಚ್‌ಮನ್ ನೇಮಕ ಮಾಡಿ:

ವೆನ್ಲಾಕ್ ಆಸ್ಪತ್ರೆಯಲ್ಲಿ ಸಾಕಷ್ಟು ಸೌಲಭ್ಯ ಗಳಿದ್ದರೂ ಸ್ವಚ್ಛತೆಯ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಹೊರಗಡೆ ತೊಟ್ಟಿ ಯನ್ನಿಟ್ಟು, ಆಸ್ಪತ್ರೆಗೆ ಪ್ರವೇಶಿಸುವವರು ಬೀಡ ತಿನ್ನುವವರಾಗಿದ್ದರೆ ಅವರನ್ನು ತೊಟ್ಟಿಗೆ ಉಗುಳುವಂತೆ ತಿಳಿಸುವ ಮೂಲಕ ಜನರಿಗೆ ಸ್ವಚ್ಛತೆಯ ಸಂಸ್ಕೃತಿ ಕಲಿಸಬೇಕು. ಈ ಬಗ್ಗೆ ಗ್ರಾಪಂನಿಂದ ಹಿಡಿದು ಜಿಪಂವರೆಗಿನ ಜನ ಪ್ರತಿನಿಧಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಕರೆ ನೀಡಿದರು.

ಜನರಿಕ್ ಔಷಧ ಮಳಿಗೆಯಿಂದ ಬೆಲೆ ನಿಯಂತ್ರಣ: ರಾಜ್ಯದ ಆರೋಗ್ಯ ಸಚಿವರ ಜನರಿಕ್ ಔಷಧ ಮಳಿಗೆಯ ಪರಿಕಲ್ಪನೆ ಉತ್ತಮವಾದುದು. ಇದರಿಂದ ಔಷಧಗಳ ಬೆಲೆ ನಿಯಂತ್ರಣ ಆಗಲಿದೆ. ಮಾತ್ರವಲ್ಲದೆ ಫಾರ್ಮಸಿಗಳಿಗೆ ಪರವಾನಿಗೆ ಪಡೆದವರೇ ಅದನ್ನು ನಡೆಸುವ ಬಗ್ಗೆ ನಿಗಾ ವಹಿಸಬೇಕೆಂದೂ ಅವರು ಈ ಸಂದರ್ಭ ಸಲಹೆ ನೀಡಿದರು. ಪಾರದರ್ಶಕ ಆಡಳಿತ ವ್ಯವಸ್ಥೆ ಜನರಿಗೆ ಕಾಣುವಂತಿರಲಿ: ಮುಖ್ಯಮಂತ್ರಿಯವರು ಪಾರದರ್ಶಕ ಆಡಳಿತ ನೀಡುವುದಾಗಿ ಹೇಳುತ್ತಾರೆ. ಅಂತಹ ಪಾರದರ್ಶಕ ಆಡಳಿತ ವ್ಯವಸ್ಥೆ ಜನರ ಕಣ್ಣಿಗೆ ಕಾಣುವಂತಿರಬೇಕು ಎಂದರು. ವೈದ್ಯರ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ: ವೈದ್ಯರ ನೇಮಕಾತಿಗೆ ಸಂಬಂಧಿಸಿ ಅರ್ಹರಿಂದ ಅರ್ಜಿ ಸಲ್ಲಿಕೆಯ ಅವಧಿ ಆ.9ರಿಂದ ಮತ್ತೆ 15 ದಿನಗಳಿಗೆ ವಿಸ್ತರಿಸಲಾಗಿದೆ (ಆ.24). ಅರ್ಜಿಗಳನ್ನು ಪರಿಗಣಿಸಿ ಶೀಘ್ರವೇ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು.

wenlock_dayalis_center_4

ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಡಯಾಲಿಸಿಸ್ ವ್ಯವಸ್ಥೆ ಮಾಡಲು ಸರಕಾರ ಚಿಂತನೆ ನಡೆಸಿದೆ. ಆದರೆ ವೈದ್ಯರು ಮತ್ತು ತಂತ್ರಜ್ಞರ ಕೊರತೆಯಿಂದ ಇದು ಸಾಧ್ಯವಾಗಿಲ್ಲ. ದ.ಕ.ದ ಪುತ್ತೂರಿನ ತಾಲೂಕು ಹಾಗೂ ಉಡುಪಿಯ ಕುಂದಾಪುರ ತಾಲೂಕು ಆಸ್ಪತ್ರೆಗಳಲ್ಲಿ ಈಗಾಗಲೇ ಆರಂಭಿಸಲಾಗಿದೆ. ಸರಕಾರಿ- ಖಾಸಗಿ ಪ್ರಾಯೋಜಕತ್ವದಲ್ಲಿ ಎಲ್ಲಾ ತಾಲೂಕುಗಳಲ್ಲಿ ವಿಸ್ತರಿಸುವ ಚಿಂತನೆ ಇದೆ ಎಂದು ಅವರು ಹೇಳಿದರು. ದ.ಕ. ಜಿಲ್ಲಾ ವೈದ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಸ್ವಾಗತಿಸಿದರು. ವೆನ್ಲಾಕ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕಿ ಡಾ.ರಾಜೇಶ್ವರಿದೇವಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವೆನ್ಲಾಕ್‌ನ ಹಿಮೋ ಡಯಾಲಿಸಿಸ್ ವಿಭಾಗದ ನವೀಕರಣಕ್ಕೆ ಆರ್ಥಿಕ ನೆರವು ನೀಡಿದ ಕರ್ಣಾಟಕ ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ಮಹಾಬಲೇಶ್ವರ ಭಟ್, ಪೆರಿಟೋ ನಿಯಲ್ ಡಯಾಲಿಸಿಸ್ ಚಿಕಿತ್ಸೆ ನಿರ್ವಹಿಸುತ್ತಿರುವ ವೈದ್ಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಜಿಲ್ಲಾ ಪಂ ಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ಪುರಸಭಾಧ್ಯಕ್ಷೆ ಗಿರಿಜಾ ವೈ.ಎಂ., ಆರೋಗ್ಯ ಇಲಾಖೆಯ ನಿರ್ದೇಶಕ ವಾಮದೇವ, ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ.ಶಕುಂತಳಾ ಮತ್ತಿತರರು ಉಪಸ್ಥಿತರಿದ್ದರು. ವೆನ್ಲಾಕ್ ಆಸ್ಪತ್ರೆಯ ಆರ್‌ಎಂಒ ಡಾ. ಈರಣ್ಣ ವಂದಿಸಿದರು.

ಸಚಿವ ಖಾದರ್ ಬಗ್ಗೆ ಕಾಗೋಡು ಮೆಚ್ಚುಗೆ

ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಹದಗೆಡುತ್ತಿದೆ ಎಂದು ವಿಧಾನಸಭೆಯಲ್ಲಿ ಆರೋಗ್ಯ ಇಲಾಖೆಗೆ ಮಾತಿನ ಚಾಟಿಯೇಟು ಬೀಸುತ್ತಿದ್ದ ಕಾಗೋಡು ತಿಮ್ಮಪ್ಪ, ಇಂದಿನ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವರು ಕಾರ್ಯಕ್ರಮಕ್ಕೆ ಹೊಸ ಅರ್ಥ ನೀಡಿದ್ದಾರೆ ಎನ್ನುವ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವೊಂದು ಸಂದರ್ಭಗಳಲ್ಲಿ ಆರೋಗ್ಯ ಇಲಾಖೆಯ ನ್ಯೂನತೆ ಕುರಿತಂತೆ ತಿವಿದು ಹೇಳಿದ ಪರಿಣಾಮವಾಗಿ ಸಚಿವರು ಜಾಗೃತರಾಗಿ ವೈದ್ಯರನ್ನು ನೇಮಕ ಮಾಡಲು ಸಿದ್ಧತೆ ಮಾಡಿದ್ದಾರೆ ಎಂದರು. ಆರೋಗ್ಯ ಇಲಾಖೆಯನ್ನು ವಿದ್ಯಾವಂತ ಯುವಕನ ಕೈಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ. ಅವರು ಇಲಾಖೆಗೆ ಹೊಸ ದೃಷ್ಟಿಕೋನ ನೀಡುವ ಕೆಲಸ ಮಾಡಬೇಕು. ಆಸ್ಪತ್ರೆಗಳಿಗೆ ಬರುವವರಿಗೆ ಸ್ವಚ್ಛತೆಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಆರೋಗ್ಯ ಸಚಿವರಿಗೆ ಸಲಹೆ ನೀಡಿದರು.

ಕಾಗೋಡು ಆರೋಗ್ಯ ಇಲಾಖೆಯ ರಾಯಭಾರಿ: ಸಚಿವ ಖಾದರ್

ಆರೋಗ್ಯ ಸಚಿವರಾಗಿ, ಇದೀಗ ವಿಧಾನಸಭೆಯ ಅಧ್ಯಕ್ಷರಾಗಿ ಆರೋಗ್ಯ ಇಲಾಖೆಗೆ ಕಾಯಕಲ್ಪ ನೀಡುವ ಕುರಿತಂತೆ ಆಗಾಗ ಎಚ್ಚರಿಸುವ ಕಾಗೋಡು ತಿಮ್ಮಪ್ಪನವರು ಆರೋಗ್ಯ ಇಲಾಖೆಯ ರಾಯಭಾರಿ ಎಂದು ಸಚಿವಖಾದರ್ ಬಣ್ಣಿಸಿದರು.
ಅಪೌಷ್ಟಿಕತೆಯಿಂದ ಬಳಲುವ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಅಪೌಷ್ಟಿಕತೆಯಿಂದ ಬಳಲುವ ಗರ್ಭಿಣಿಯರನ್ನು ಗುರುತಿಸಿ ಅವರಿಗೆ ಸಕಲ ವ್ಯವಸ್ಥೆಗಳೊಂದಿಗೆ ಸುರಕ್ಷಿತ ಹೆರಿಗೆಯ ವ್ಯವಸ್ಥೆಯನ್ನು ಕಲ್ಪಿಸಲು ಚಿಂತಿಸಲಾಗಿದೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಪೈಲಟ್ ಯೋಜನೆಯಡಿ ನಡೆಯುತ್ತಿರುವ ಪೆರಿಟೋನಿಯಲ್ ಡಯಾಲಿಸಿಸ್ ಯಶಸ್ವಿಯಾಗಿದ್ದು, ಇತರ ಕಡೆಗಳಿಗೂ ವಿಸ್ತರಿಸುವ ಬಗ್ಗೆ ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದು ಅವರು ಸಮಾರಂಭದಲ್ಲಿ ತಿಳಿಸಿದರು.

ವರದಿ ಕೃಪೆ : ವಾಭಾ

Write A Comment