ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜಾನನ್ನು ಬಾಡಿ ವಾರೆಂಟ್ ಮೂಲಕ ಉಡುಪಿಗೆ ಕರೆತರಲಾಗಿದೆ. ನಗುಮುಖದಲ್ಲಿಯೇ ಮಾಧ್ಯಮಗಳ ಮುಂದೆ ಫೋಸು ಕೊಡುತ್ತಾ ಬನ್ನಂಜೆ ಪೊಲೀಸ್ ವಾಹನದ ಕೆಳಗಿಳಿದಿದ್ದಾನೆ. ಮಧ್ಯಾಹ್ನ 1.50ಕ್ಕೆ ಸುಮಾರಿಗೆ ಈತ ಉಡುಪಿಯ ನಗರ ಠಾಣೆಯೆದುರು ಬಂದಿಳಿದಿದ್ದ.
(ಉಡುಪಿಯಲ್ಲಿ ಬನ್ನಂಜೆ)
ಶುಕ್ರವಾರ ಬೆಳಗಾವಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ವೇಳೆ ನ್ಯಾಯಾಲಯವು ಆತನಿಗೆ ಆ.28ರವರೆಗೆ ಉಡುಪಿ ಪೊಲೀಸರ ಕಸ್ಟಡಿಗೆ ನೀಡಿತ್ತು. ಬೆಳಗಾವಿಯಿಂದ ವಿಶೇಷ ಭದ್ರತೆ ಮೂಲಕ ರಾಷ್ಟ್ರ್‍ಈಯ ಹೆದ್ದಾರಿ ಮೂಲಕ ಬನ್ನಂಜೆ ರಾಜಾನನ್ನು ಉಡುಪಿಗೆ ಕರೆತರಲಾಯಿತು. ಈ ವೇಳೆ ಆತ ನಗುಮೊಗದಲ್ಲಿಯೇ ಇದ್ದ. ಬಿಗು ಭದ್ರತೆ ಮಾತ್ರವಲ್ಲದೇ ವಿಶೇಷ ಎಸ್ಕಾರ್ಟ್ ಭದ್ರತೆಯಲ್ಲಿ ಬನ್ನಂಜೆಯನ್ನು ಉಡುಪಿಗೆ ಕರೆತರಲಾಗಿದ್ದು ಶನಿವಾರ ಮಧ್ಯಾಹ್ನದ ಬಳಿಕ ಉಡುಪಿಯ ನಗರ ಠಾಣೆಯಲ್ಲಿ ಬನ್ನಂಜೆಯ ಸುಧೀರ್ಘ ವಿಚಾರಣೆ ನಡೆಯಲಿದೆ ಎಂದು ಉಡುಪಿ ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ.
(ಭದ್ರತೆಯಲ್ಲಿ ಬನ್ನಂಜೆಯನ್ನು ಕುಂದಾಪುರ ರಾ.ಹೆದ್ದಾರಿ ಮೂಲಕ ಉಡುಪಿಗೆ ಕೊಂಡೊಯ್ಯುತ್ತಿರುವುದು)
ಹೆಚ್ಚುವರಿ ಮಾಹಿತಿ (latest update): ಮೂಲತಃ ಉಡುಪಿಯವನೇ ಆದ ಬನ್ನಂಜೆ ರಾಜ ಹಲವು ವರ್ಷಗಳ ಹಿಂದೆ ದೇಶ ಬಿಟ್ಟು ವಿದೇಶಕ್ಕೆ ತೆರಳಿದ್ದ. ಬಳಿಕ ಭೂಗತವಾಗಿಯೇ ಇದ್ದ ಈತ ತನ್ನ ಸಾಮ್ರಾಜ್ಯವನ್ನು ಬಲಪಡಿಸಿಕೊಳ್ಳುವಲ್ಲಿ ಇನ್ನಷ್ಟು ಕ್ರೈಮ್ ಮಾಡಿದ್ದ. ಮೊರಕ್ಕೋದಿಂದ ಆತನನ್ನು ಭಾರತಕ್ಕೆ ಕರೆತರುವ ವೇಳೆ ಅತನ ಮೇಲಿದ್ದ 44 ಕೇಸುಗಳ ಪೈಕಿ 16 ಕೇಸುಗಳ ತನಿಖೆಗಷ್ಟೇ ಅವಕಾಶ ನೀಡಲಾಗಿದೆಯೆಂಬ ಮಾಹಿತಿಯಿದೆ. ಕಳೆದೊಂದೆರಡು ವರ್ಷಗಳ ಹಿಂದೆಯಷ್ಟೇ ನಡೆದ ಅಂಕೋಲಾದ ಆರ್.ಎನ್. ನಾಯ್ಕ್ ಶೂಟೌಟ್ ಪ್ರಕರಣದಲಿ ಈತನೇ ಪ್ರಮುಖ ಆರೋಪಿಯಾಗಿದ್ದು ಈ ಪ್ರಕರಣದ ತನಿಕಾಧಿಯಾಗಿದ್ದು ಪ್ರಸ್ತುತ ಉಡುಪಿ ಎಸ್ಪಿ ಆಗಿರುವ ಕೆ. ಅಣ್ಣಾಮಲೈ ಅವರು ಕೂಡ ಈತನನನ್ನು ಮೊರಕ್ಕೋದಿಂದ ಕರೆತರುವ ತಂಡದಲ್ಲಿ ಒಬ್ಬರಾಗಿದ್ದರು.
ಉಡುಪಿ ನಗರ ಠಾಣೆಗೆ ಬನ್ನಂಜೆಯನ್ನು ಉಡುಪಿ ನಗರ ಠಾಣೆಗೆ ಕರೆತಂದ ಬಳಿಕ ಕೆಲವೇ ಕ್ಷಣಗಳ ಕಾಲ ಆತನನ್ನು ಮಾಧ್ಯಮದ ಮುಮ್ದೆ ನಿಲ್ಲಿಸಲಾಗಿತ್ತು. ಇನ್ನು ಅಂದಾಜು 13 ದಿನಗಳ ಕಾಲ ಆತ ಉಡುಪಿ ಪೊಲೀಸರ ಕಸ್ಟಡಿಯಲ್ಲಿಯೇ ಇರಲಿದ್ದಿ ಆರ್.ಎನ್. ನಾಯ್ಕ್ ಕೇಸು ಸೇರಿದಂತೆ ಹಲವು ಪ್ರಕರಣಗಳ ಬಗ್ಗೆ ಉಡುಪಿ ಪೊಲೀಸರು ಬನ್ನಂಜೆಯನ್ನು ತನಿಖೆ ಮಾಡಲಿದ್ದಾರೆ, ಅಲ್ಲದೇ ಹೆಚ್ಚುವರಿ ಕಸ್ಟಡಿ ಬೇಕಾದಲ್ಲಿ ಪುನಃ ನ್ಯಾಯಾಲಯದ ಎದುರು ಕೋರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಬನ್ನಂಜೆ ವಿರುದ್ಧ ಉಡುಪಿ, ಕಾರ್ಕಳ ಹಾಗೂ ಮಲ್ಪೆ ಸೇರಿದಂತೆ ಹಲವೆಡೆ ಕೇಸುಗಳಿದೆ. ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದ ಕೊಕ್ಕರ್ಣೆಯಲ್ಲಿ ವ್ಯಕ್ತಿಯೋರ್ವರ ಹತ್ಯೆಯಲ್ಲಿಯೂ ಈತನ ಕೈವಾಡವಿದ್ದು ಈ ಬಗ್ಗೆಯೂ ಉಡುಪಿ ಪೊಲೀಸರು ತನಿಖೆಯನ್ನು ನಡೆಸುತ್ತಾರೆ ಎನ್ನಲಾಗಿದೆ. ಇನ್ನು ಹಲವು ಬೆದರಿಕೆ ಕರೆಗಳು ಹಾಗೂ ಜೀವಬೆದರಿಕೆ ಸೇರಿದಂತೆ ಹಲವು ಕೇಸುಗಳು ಈತನ ಮೇಲಿದೆ.
ಇನ್ನು ನ್ಯಾಯಾಲಯದ ಎದುರು ಬನ್ನಂಜೆ ತನಗೆ ಜೀವಬೆದರಿಕೆಯಿದೆ ಎಂದು ಹೇಳಿಕೊಂಡಿದ್ದಲ್ಲದೇ ಭದ್ರತೆ ಬೇಕೆಂದು ವಿನಂತಿಸಿದ್ದಾನೆ ಎನ್ನಲಾಗಿದೆ, ತನಗೆ ಅನಾರೋಗ್ಯ ಸಮಸ್ಯೆಯೂ ಇದ್ದು ಸೂಕ್ತ ಚಿಕಿತ್ಸೆಯ ಅಗತ್ಯವಿರುವ ಬಗ್ಗೆಯೂ ಭಿನ್ನವಿಸಿಕೊಂಡಿದ್ದನಂತೆ.