ಕನ್ನಡ ವಾರ್ತೆಗಳು

ಭೂಗತ ಪಾತಕಿ ರವಿ ಪೂಜಾರಿ ಹೆಸರಲ್ಲಿ ಹಫ್ತಾ ಬೇಡಿಕೆ; ಕಾಪು ಪೊಲೀಸರಿಂದ ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಕರಾವಳಿಯ ಕೆಲವು ಉದ್ಯಮಿಗಳಿಗೆ ಹಫ್ತಾ ಕರೆ ಮಾಡುತ್ತಿದ್ದ ಇಬ್ಬರನ್ನು  ಕಾಪು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಶಿರ್ವದ ಉದ್ಯಮಿ ಸ್ಟ್ಯಾನ್ಲಿ ಮತ್ತು ಮಣಿಪುರದ ಉದ್ಯಮಿ ವಿನ್ಸೆಂಟ್ ಡಿಸೋಜ ಎಂಬವರಿಗೆ ದೂರವಾಣಿ ಕರೆ ಮಾಡಿ ಹಫ್ತಾಕ್ಕಾಗಿ ಬೇಡಿಕೆಯಿಟ್ಟಿದ್ದ ಬೆಂಗಳೂರು ದೊಮ್ಮಸಂದ್ರ ನಿವಾಸಿಗಳಾದ ರೋಹಿತ್ (23) ಮತ್ತು ಶಿವರಾಜ್ (23) ಬಂಧಿತ ಆರೋಪಿಗಳು.

Kaup_Fraud_Case-2

ಸದ್ಯ ಜೈಲಿನಲ್ಲಿರುವ ವ್ಯಕ್ತಿಯೊಬ್ಬನ ಮಾರ್ಗದರ್ಶನದಂತೆ ಹಫ್ತಾ ಹಣಕ್ಕಾಗಿ ಬೇಡಿಕೆ ಇಟ್ಟು ದೂರವಾಣಿ ಕರೆ ಮಾಡುವ ಕೆಲಸ ಮಾಡುತ್ತಿದ್ದ ಇವರು ತಮ್ಮ ಕತ್ಯಕ್ಕೆ ಇಂಟರ್‌ನೆಟ್ ಹಾಗೂ ಟೆಲಿಫೋನ್ ಬೂತ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದರು. ಇವರು ಕರೆ ಮಾಡುವ ವೇಳೆ ಭೂಗತ ದೊರೆ ರವಿ ಪೂಜಾರಿಯ ಹೆಸರನ್ನು ಹೆಚ್ಚಾಗಿ ಬಳಸುತ್ತಿದ್ದರೆಂದು ಮೂಲಗಳು ತಿಳಿಸಿವೆ. ಆರೋಪಿಗಳು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಿಗಳಿಗೂ ಹಫ್ತಾಕ್ಕಾಗಿ ದೂರವಾಣಿ ಕರೆ ಮಾಡುತ್ತಿದ್ದರು. ಬಂಧಿತ ಆರೋಪಿಗಳು ನೀಡಿರುವ ಮಾಹಿತಿಯಂತೆ ಈ ತಂಡದ ಇತರರ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ.

ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ಸಂತೋಷ್ ಕುಮಾರ್ ಮತ್ತು ಡಿವೈಎಸ್ಪಿ ವಿನಯ ನಾಯಕ್ ಅವರ ನಿರ್ದೇಶನದಲ್ಲಿ, ಕಾಪು ಸಿಐ ಸುನೀಲ್ ವೈ. ನಾಯ್ಕ್ ಅವರ ಉಸ್ತುವಾರಿಯಲ್ಲಿ ಕಾಪು ಎಸ್‌ಐ ಜಗದೀಶ್ ಶೆಟ್ಟಿ ನೇತತ್ವದಲ್ಲಿ ಮತ್ತು ಸಿಬ್ಬಂದಿಗಳಾದ ಸುಧಾಕರ್, ಭಾಸ್ಕರ್ ಮತ್ತು ಥಾಮ್ಸನ್ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Write A Comment