ಮಂಗಳೂರು / ಪಣಂಬೂರು :ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 20 ಕೋಣಗಳನ್ನು ಮಂಗಳವಾರ ಪಣಂಬೂರು ಪೊಲೀಸರು ಎಂಸಿಎಫ್ ಫ್ಯಾಕ್ಟರಿಯ ಬಳಿ ಪತ್ತೆ ಹಚ್ಚಿ ಲಾರಿ ಸಹಿತಾ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಲಾರಿಯೊಂದರಲ್ಲಿ ಕೇರಳಕ್ಕೆ ಕೋಣಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಮಂಗಳೂರಿನ ಪಣಂಬೂರು ಪೊಲೀಸರು ಎಂಸಿಎಫ್ ಫ್ಯಾಕ್ಟರಿಯ ಬಳಿ ಲಾರಿಯನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ 20 ಕೋಣಗಳು ಪತ್ತೆಯಾಗಿವೆ.
ಲಾರಿಯ ಚಾಲಕ ಶೈನಾಜ್ ಎಂಬಾತ ಪರಾರಿಯಾಗಿದ್ದು, ಮೂಲ್ಕಿಯ ಹಮ್ಮಬ್ಬ ಯಾನೆ ಮೋನು (48) ಮತ್ತು ಬಂಟ್ವಾಳದ ಇಬ್ರಾಹಿಂ (24) ಎನ್ನುವವರನ್ನು ಬಂಧಿಸಲಾಗಿದೆ. ಈ ಕೋಣಗಳನ್ನು ಸಂಕಲಕರಿಯದ ಇಬ್ರಾಹಿಂನಿಂದ ಖರೀದಿಸಿ ಕೇರಳದ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಲಾರಿಯು ಕೆ. ಮೊಹಮ್ಮದ್ ಕುಂಞ ಎಂಬಾತನಿಗೆ ಸೇರಿದ್ದೆನ್ನಲಾಗಿದೆ.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.