ಉಳ್ಳಾಲ,ಆಗಸ್ಟ್.22 : ದಕ್ಷಿಣ ಕನ್ನಡ ಜಿಲ್ಲಾ ಛಾಯಾಗ್ರಾಹಕರ ಸಂಘದ ಉಳ್ಳಾಲ ವಲಯದ ವತಿಯಿಂದ ಹಿರಿಯ ಛಾಯಾಗ್ರಾಹಕ ರಾಮಣ್ಣ ಪೂಜಾರಿಯವರನ್ನು ಅಸೈಗೋಳಿಯಲ್ಲಿರುವ ಅವರ ಸ್ವ ಗೃಹದಲ್ಲಿ ಸನ್ಮಾನಿಸುವ ಮೂಲಕ ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಯಿತು.
ದಕ್ಷಣ ಕನ್ನಡ ಜಿಲ್ಲಾ ಛಾಯಾಗ್ರಹಕರ ಸಂಘದ ಅಧ್ಯಕ್ಷ ವಾಸುದೇವರಾವ್ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ, ವಿಶ್ವ ಛಾಯಾಗ್ರಹಣ ದಿನದಂಗವಾಗಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹಿರಿಯ ಛಾಯಾಗ್ರಾಹಕ ರಾಮಣ್ಣ ಪೂಜಾರಿಯವರನ್ನು ಸನ್ಮಾನಿಸುವ ಮೂಲಕ ಎಸ್ ಕೆಪಿಎ ಉಳ್ಳಾಲ ವಲಯವು ಅವಿಸ್ಮರಣೀಯವಾದ ಕಾರ್ಯವನ್ನು ಮಾಡಿದೆ ಎಂದು ಹೇಳಿದರು.
ಇಂತಹ ಹಿರಿಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನಮ್ಮ ಪಾಲಿನ ಭಾಗ್ಯವೇ ಸರಿ. ಡಿಜಿಟಲ್ ತಂತ್ರಜ್ಞಾನದ ಆಗಮನದ ಮುನ್ನವೇ ರಾಮಣ್ಣ ಪೂಜಾರಿಯವರಂತಹ ಛಾಯಾಗ್ರಾಹಕರು ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದರು. ಇಂತಹ ಹಿರಿಯರನ್ನು ಈ ಸನ್ಮಾನಕ್ಕೆ ಆಯ್ಕೆ ಮಾಡಿರುವ ಉಳ್ಳಾಲ ವಲಯದ ಕಾರ್ಯವು ದಕ್ಷಿಣ ಕನ್ನಡ ಜಿಲ್ಲಾ ಛಾಯಾಗ್ರಾಹಕರು ಸಂಘಕ್ಕೇ ಹೆಮ್ಮೆಯ ವಿಷಯವಾಗಿದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಎಸ್ ಕಎಪಿಎ ಉಳ್ಳಾಲ ವಲಯದ ಗೌರವಾಧ್ಯಕ್ಷ ಯು.ಅರುಣ್ ಕುಮಾರ್ ಮಾತನಾಡಿ, ರಾಮಣ್ಣ ಪೂಜಾರಿಯವರು ನಮ್ಮ ಸಂಘದ ಹಿರಿಯ ಸದಸ್ಯರಲ್ಲೊಬ್ಬರು. ಇಂತಹ ಸದಸ್ಯರನ್ನು ಸನ್ಮಾನಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಇವರು ಕೇವಲ ತಾವಷ್ಟೇ ಛಾಯಾಗ್ರಹಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳದೆ ತಮ್ಮ ಸಹೋದರರನ್ನೂ ಕೂಡ ಈ ಕ್ಷೇತ್ರಕ್ಕೆ ಕರೆ ತಂದರು. ಇಂದು ಅವರುಗಳೂ ಹಲವಾರು ಸಾಧನೆಗಳನ್ನು ಮಾಡಿದ್ದು ದಕ್ಷಿಣ ಕನ್ನಡ ಜಿಲ್ಲಾ ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಹೋದರರ ಸಾಧನೆಗಳ ಸಂಪೂರ್ಣ ಯಶಸ್ಸು ಇವರಿಗೇ ಸಲ್ಲಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಎಸ್ ಕೆಪಿಎ ಜಿಲ್ಲಾ ಸಂಘದ ಕೋಶಾಧಿಕಾರಿ ಜಗನ್ನಾಥ ಶೆಟ್ಟಿ, ಎಸ್ ಕೆಪಿಎ ಉಳ್ಳಾಲ ವಲಯದ ಅಧ್ಯಕ್ಷ ಉಮೇಶ್ ತೊಕ್ಕೊಟ್ಟು, ಉಪಾಧ್ಯಕ್ಷ ಚಿದಾನಂದ್, ಕಾರ್ಯದರ್ಶಿ ತನುಂಜಯರಾವ್, ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್ ಮಾರ್ಲ, ಕೋಶಾಧಿಕಾರಿ ತೀರ್ಥನಾಥ್, ಜತೆ ಕಾರ್ಯದರ್ಶಿ ರಾಜೇಶ್ ತೊಕ್ಕೊಟ್ಟು, ಸಿದ್ದಿಕ್, ಮಾದ್ಯಮ ಪ್ರತಿನಿಧಿ ಧರಣೇಶ್ ಕೊಣಾಜೆ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.