ಮಂಗಳೂರು, ಆಗಸ್ಟ್.22 : ವಿದ್ಯುತ್ ಪರಿವರ್ತನಾ ಮಾರ್ಗದ ದುರಸ್ತಿ ಕಾರ್ಯದ ವೇಳೆ ನಡೆದ ದುರ್ಘಟನೆಯಲ್ಲಿ ಮೆಸ್ಕಾಂ ನೌಕರನೋರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಗರದ ಎ.ಬಿ.ಶೆಟ್ಟಿ ವೃತ್ತದಲ್ಲಿ ನಡೆದಿದೆ.
ಮೃತರನ್ನು ಶಕ್ತಿನಗರದ ನಿವಾಸಿ ಅಲೆಕ್ಸ್ ಎಸ್. ಪಾಸ್(40) ಎಂದು ಗುರುತಿಸಲಾಗಿದೆ. ಮತ್ತೋರ್ವ ಲೈನ್‌ಮೆನ್ ಕಾವೂರು ಮೆಸ್ಕಾಂ ಕ್ವಾರ್ಟರ್ಸ್ ನಿವಾಸಿ ನಾರಾಯಣ (42) ಎಂಬಾತ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಟೇಟ್‌ಬ್ಯಾಂಕ್ ಸಮೀಪದ ಎ.ಬಿ. ಶೆಟ್ಟಿ ಸರ್ಕಲ್ ಬಳಿಯ ಟ್ರಾನ್ಸ್‌ಫಾರ್ಮರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಲೈನ್‌ಮೆನ್‌ಗಳಾದ ಅಲೆಕ್ಸ್ ಹಾಗೂ ನಾರಾಯಣ ಕಂಬವೇರಿ ದುರಸ್ತಿ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಈ ಸಂದರ್ಭ ವಿದ್ಯುತ್ ಆಘಾತಕ್ಕೊಳಗಾಗಿ ಇಬ್ಬರೂ ಎಸೆಯಲ್ಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಘಟನೆಯಿಂದ ಅಲೆಕ್ಸ್ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ನಾರಾಯಣರನ್ನು ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪಾಂಡೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.