ಮಂಗಳೂರು, ಆ.22: ದ.ಕ. ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝೆಡ್) ಮತ್ತು ಕರಾವಳಿ ಅನಿಯಂತ್ರಣ ವಲಯ (ನಾನ್ ಸಿಆರ್‌ಝೆಡ್) ಎಂಬ ತಾರತಮ್ಯ ವಿರುವುದರಿಂದ ಮರಳುಗಾರಿಕೆಯ ರಾಜಧನ ಸಂಗ್ರಹದಲ್ಲಿ ಏಕರೂಪ ನಿಯಮದ ಕೊರತೆ ಉಂಟಾಗಿದೆ. ಇದರಿಂದಾಗಿ ರಾಜಧನ ದರಗಳಲ್ಲಿ ವ್ಯತ್ಯಾಸವಿದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿರುವುದರಿಂದ ತಾರತಮ್ಯವನ್ನು ನಿವಾರಿಸಿ ಏಕರೂಪ ರಾಜಧನ ಸಂಗ್ರಹಕ್ಕೆ ಮಾರ್ಗದರ್ಶನ ನೀಡಬೇಕೆಂದು ಸರಕಾರಕ್ಕೆ ಪತ್ರ ಬರೆದಿರುವುದಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.
ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾರ್ಯದರ್ಶಿ ನಿತೇಶ್ ನೌಶಾಲ್ ಮತ್ತು ಇಲಾಖೆಯ ಆಯುಕ್ತ ಶಂಕರನಾರಾಯಣ್ ರೊಂದಿಗಿನ ವೀಡಿಯೊ ಕಾನ್ಫೆರೆನ್ಸ್ ಸಭೆಯಲ್ಲಿ ಈ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 232 ಎಕರೆಗಳಲ್ಲಿ 242 ಮಂದಿಗೆ ಸಾಂಪ್ರದಾಯಿಕ ಮರಳುಗಾರಿಕೆಗೆ ಅನುಮತಿ ನೀಡಲಾಗಿದೆ. ಮರಳು ಸಂಗ್ರಹ, ಸಾಗಾಟ ಮೊದಲಾದ ತೊಂದರೆಗಳಿಂದ ಮರಳು ದರಗಳಲ್ಲಿ ವ್ಯತ್ಯಾಸಗಳಾಗುತ್ತಿವೆ ಎಂಬುದನ್ನು ಜಿಲ್ಲಾಧಿಕಾರಿಯವರು ಕಾರ್ಯದರ್ಶಿಗಳ ಗಮನಕ್ಕೆ ತಂದರು.
ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕ ನಾಗೇಂದ್ರಪ್ಪ ಉಪಸ್ಥಿತರಿದ್ದರು.