ಮಂಗಳೂರು: ಮುಸ್ಲಿಂ ಯುವಕನೋರ್ವ ತನ್ನ ಸಹೋದ್ಯೋಗಿ ಅನ್ಯ ಕೋಮಿನ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ಆರೋಪಿಸಿ ಯುವಕನನ್ನು ಅರೆಬೆತ್ತಲೆಗೊಳಿಸಿ, ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಘಟನೆ ಸೋಮವಾರ ಸಂಜೆ ಮಂಗಳೂರಿನ ಅತ್ತಾವರ ಬಾಬುಗುಡ್ಡೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು. ಅತ್ತಾವರದ ಮಾಲ್‌ವೊಂದರ ನೌಕರ, ಕೂಳೂರು ನಿವಾಸಿ ಶಾಕಿರ್ (28) ಎಂದು ಗುರುತಿಸಲಾಗಿದೆ.
ಯುವಕ ಮತ್ತು ಸೇಲ್ಸ್ ಗರ್ಲ್ ಆಗಿರುವ ಯುವತಿ ಒಂದೇ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ಸಂಜೆ ಇವರಿಬ್ಬರು ಸಂಜೆ ಕೆಲಸ ಬಿಟ್ಟ ಬಳಿಕ ಕಾರಿನಲ್ಲಿ ಒಟ್ಟಿಗೆ ತೆರಳಿದ್ದಾರೆ ಎಂದು ಆರೋಪಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ. ಕಾರು ಅತ್ತಾವರ ಬಾಬುಗುಡ್ಡೆ ಸಮೀಪಕ್ಕೆ ಬರುತ್ತಿದ್ದಂತೆ ಹಿಂಬಾಲಿಸಿಕೊಂಡು ಬಂದ ತಂಡ ಅಡ್ಡಗಟ್ಟಿ ಯುವತಿ ಜತೆಯಲ್ಲಿ ಕಾರಿನಲ್ಲಿ ತೆರಳಿದ್ದನ್ನು ಆಕ್ಷೇಪಿಸಿ ಯುವಕನನ್ನು ಕಾರಿನಿಂದ ಇಳಿಸಿ ಸಮೀಪದ ಕಂಬಕ್ಕೆ ಕಟ್ಟಿ ಹಾಕಿ ಪ್ಯಾಂಟ್, ಶರ್ಟ್ ಬಿಚ್ಚಿಸಿ ಹಲ್ಲೆ ನಡೆಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ನೂರಾರು ಮಂದಿ ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಠಾಣೆ ಪೊಲೀಸರು ತೆರಳಿ ಸ್ಥಳದಲ್ಲಿ ಜಮಾಯಿಸಿದ್ದ ಯುವಕರನ್ನು ಲಾಠಿ ಬೀಸಿ ಚದುರಿಸಿದ್ದಾರೆ.
ಈ ಸಂದರ್ಭ ಸ್ಥಳದಲ್ಲಿದ್ದ ಮೂವರು ಸಂಘಟನೆ ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಹಲ್ಲೆ ನಡೆಸಿದ ಬಳಿಕ ಬಹುತೇಕ ಎಲ್ಲ ಆರೋಪಿಗಳು ಸ್ಥಳದಿಂದ ಪರಾರಿಯಾಗಿ ತಲೆ ಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಪಾಂಡೇಶ್ವರ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಯುವತಿಗೆ ಹಣ ತೆಗೆದುಕೊಡಲು ಹೋಗಿದ್ದೆ :
ಯುವತಿಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದುದರಿಂದ ಅತ್ತಾವರದ ಎಟಿಎಂನಿಂದ ಹಣ ತೆಗೆದು ಆಕೆಗೆ ನೀಡುತ್ತಿದ್ದೆ. ಅಷ್ಟರಲ್ಲಿ ಯುವಕರ ತಂಡ ನನ್ನನ್ನು ಎಳೆದೊಯ್ದು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಶಾಕಿರ್ ಪಾಂಡೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ಮೂಡಿಗೆರೆ ಮೂಲದವರಾಗಿದ್ದು, ಆಕೆಯಿಂದಲೂ ಠಾಣೆಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಪಾಂಡೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.