ಮಂಗಳೂರು, ಆ.25 : ದ.ಕ. ಜಿಲ್ಲೆಯ ಅಭಿವೃದ್ಧಿಗೆ ಶೀಘ್ರವೇ ಕಾರ್ಯಪಡೆಯೊಂದನ್ನು ರಚಿಸಲಾಗುವುದು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.ಅವರು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಶ್ರಯದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಯೋಜನೆಗಳ ಬಗ್ಗೆ ಹಮ್ಮಿಕೊಂಡ ಸಂವಾದ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಹಾಳಾಗಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಸನ-ಮಂಗಳೂರು ನಡುವಿನ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಶಿರಾಡಿ ಘಾಟಿಯ ಮೂಲಕ ಪರ್ಯಾಯ ಸುರಂಗ ಮಾರ್ಗ ನಿರ್ಮಾಣಕ್ಕೆ ಜೈಕಾ ಸಂಸ್ಥೆಯ ಮೂಲಕ ಯೋಜನೆ ರೂಪಿಸಲಾಗುವುದು. ಮಂಗಳೂರು ನಗರವನ್ನು ‘ಸ್ಮಾರ್ಟ್ ಸಿಟಿ’ಗೆ ಸೇರಿಸಿರುವುದರಿಂದ ಮುಂದಿನ 5 ವರ್ಷಗಳಲ್ಲಿ 5 ಕೋ.ರೂ. ಅನುದಾನ ಜಿಲ್ಲೆಗೆ ದೊರೆಯುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ರಾಜ್ಯ ನೌಕಾ ಮಂಡಳಿ ರಚನೆಗೆ ಸಚಿವ ಸಂಪುಟ ಅಂಗೀಕಾರ: ರಾಜ್ಯದ ಬಂದರು ಅಭಿವೃದ್ಧಿಗೆ ಸಂಬಂಧಿಸಿದಂತೆ ನೌಕಾ ಮಂಡಳಿಯೊಂದನ್ನು ರಚಿಸಲು ಕಳೆದ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ ಎಂದು ಸಚಿವ ರೈ ತಿಳಿಸಿದರು.ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಹಾಗೂ ಎಂಜಿನಿ ಯರಿಂಗ್ ಕಾಲೇಜು ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ಎತ್ತಿನಹೊಳೆಯ ಯೋಜನೆಗೆ ಕರಾವಳಿಯ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೊಂದು ಕಡೆ ಹಾಸನ ಭಾಗದ ಜನಪ್ರತಿನಿಧಿಗಳು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪ್ರತಿಬಾರಿ ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಆದರೆ ಇದುವರೆಗೆ ಅರಣ್ಯ ಇಲಾಖೆಯಿಂದ ಅರಣ್ಯದೊಳಗೆ ಯಾವುದೇ ಕಾಮಗಾರಿ ನಡೆಸಲು ಅನುಮತಿ ನೀಡಿಲ್ಲ ಎಂದು ರಮಾನಾಥ ರೈ ತಿಳಿಸಿದರು.
ಸಂವಾದ ಗೋಷ್ಠಿಯಲ್ಲಿ ಕೆಸಿಸಿಐ ಅಧ್ಯಕ್ಷ ನಿಗಮ್ ಬಿ.ವಾಸನಿ ಸ್ವಾಗತಿಸಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಿದರು. ವೇದಿಕೆಯಲ್ಲಿ ಸಂಘಟನೆಯ ಉಪಾಧ್ಯಕ್ಷ ರಾಮ್‌ಮೋಹನ್ ಪೈ, ಕಾರ್ಯದರ್ಶಿ ಜೀವನ್ ಸಲ್ದಾನಾ ಉಪಸ್ಥಿತರಿದ್ದರು.