ಕನ್ನಡ ವಾರ್ತೆಗಳು

ಕೇರಳ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ

Pinterest LinkedIn Tumblr

Awrd_student_photo_a

ಮಂಗಳೂರು,ಆಗಸ್ಟ್.26 : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಕನ್ನಡ ಮಾಧ್ಯಮ ಪ್ರಶಸ್ತಿ ಕಾರ್ಯಕ್ರಮ ಕೂಡ ಒಂದು. ಹೊರರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಮಾಡುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಕನ್ನಡ ಮಾಧ್ಯಮ ಶಿಕ್ಷಣವನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಹೊರರಾಜ್ಯದಲ್ಲಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಗೌರವಿಸಲಾಗುತ್ತಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಪಡೆದ ಪ್ರತಿಭಾನ್ವಿತ ಕೇರಳ ವಿದ್ಯಾರ್ಥಿಗಳನ್ನು ಕಳೆದ ಮೂರು ವರ್ಷಗಳಿಂದ ಗೌರವಿಸಿ, ಪುರಸ್ಕರಿಸುತ್ತಾ ಬಂದಿದೆ. ಈ ಪುರಸ್ಕಾರ ವಿದ್ಯಾರ್ಥಿಗಳಲ್ಲಿ ಓದಿನಲ್ಲಿ ಸ್ಪರ್ಧಾತ್ಮಾಕ ಮನೋಭಾವ ಮೂಡುವಂತಾಗಬೇಕು. ಹೊರರಾಜ್ಯದಲ್ಲೂ ಕನ್ನಡವನ್ನು ಹೆಚ್ಚು-ಹೆಚ್ಚು ವಿದ್ಯಾರ್ಥಿಗಳು ಕಲಿಯುವಂತಾಗಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಈ ಪುರಸ್ಕಾರವನ್ನು ಶಾಲಾಮಟ್ಟದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಶಾಲೆಯ ಮೂರು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಈ ಪುರಸ್ಕಾರವು ಅತಿಹೆಚ್ಚು ಅಂಕ ಪಡೆದವರಿಗೆ(ಎ+) ರೂ. 10,000/-  ಹೆಚ್ಚು ಅಂಕಪಡೆದವರಿಗೆ (ಎ) ರೂ.9,000/-ಗಳು, ಸ್ಮರಣಿಕೆ, ಪ್ರಮಾಣಪತ್ರ, ಕೈಗಡಿಯಾರ, ಶಾಲಾ ಬ್ಯಾಗು, ಕನ್ನಡ-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು ಹಾಗೂ ಪೆನ್‌ಸೆಟ್‌ನ್ನು ಒಳಗೊಂಡಿರುತ್ತದೆ.

Awrd_student_photo_c Awrd_student_photo_b

ಕೇರಳ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ 219 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಸ್ತುತ 2015-16ನೇ ಸಾಲಿನಲ್ಲಿ ಕೇರಳದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದ 83 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಿ, ಪುರಸ್ಕರಿಸಲಾಯಿತು.

ಕನ್ನಡ ಮಾಧ್ಯಮ ಪ್ರಶಸ್ತಿ ನೀಡುವುದು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದೊಂದೇ ಅಲ್ಲ, ಸಾಂಸ್ಕೃತಿಕವಾಗಿ ಕನ್ನಡಿಗರನ್ನು ಒಂದೆಡೆ ಕಲೆಹಾಕುವ ಜತೆಗೆ ಸಾಮರಸ್ಯ, ಸೌಹಾರ್ದತೆಯ ವಾತಾವರಣ ಸೃಷ್ಠಿಸುವಲ್ಲೂ ಇದು ಹೆಚ್ಚು ಪರಿಣಾಮ ಬೀರಲಿದೆ.

ಹೊರರಾಜ್ಯ ಕೇರಳ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಇಂದು ಕಾಸರಗೋಡು ಜಿಲ್ಲೆಯ ಪಿಲಿಕುಂಜೆಯ ಮುನ್ಸಿಪಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಲ್. ಹನುಮಂತಯ್ಯರವರು ನೆರವೇರಿಸಿದರು. ಕಾಸರಗೋಡು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಎನ್.ಎ. ನೆಲ್ಲಿಕುನ್ನುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಪಿ. ಬಿ. ಅಬ್ದುಲ್ ರಝಾಕ್‌ರವರು ಭಾಗವಹಿಸಿದ್ದರು. ಕಾಸರಗೋಡಿನ ಜಿಲ್ಲಾಧಿಕಾರಿಗಳಾದ ಶ್ರೀ ಪಿ. ಎಸ್. ಮೊಹಮ್ಮದ್ ಸಗೀರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಶ್ರೀನಿವಾಸ ರವರುಗಳು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಕಾಸರಗೋಡಿನ ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ಇ. ವೇಣುಗೋಪಾಲನ್, ಕಾಸರಗೋಡು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಅಧ್ಯಕ್ಷರಾದ ಶ್ರೀ ಟಿ. ಡಿ. ಸದಾಶಿವರಾವ್, ಕಾಸರಗೋಡಿನ ಕರ್ನಾಟಕ ಸಮಿತಿಯ ಅಧ್ಯಕ್ಷರಾದ ಶ್ರೀ ಮುರಳೀಧರ ಬಳ್ಳಕುರಾಯ, ಕಾಸರಗೋಡು ಗಡಿನಾಡ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ವಿ. ಭಟ್, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷರಾದ ಶ್ರೀ ಜಯರಾಂ ಎಡನೀರು, ಕೇರಳ ರಾಜ್ಯದ ತುಳು ಅಕಾಡೆಮಿಯ ಅಧ್ಯಕ್ಷರಾದ ನ್ಯಾಯವಾದಿ ಎ. ಸುಬ್ಬಯ್ಯ ರೈ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಶ್ರೀ ಉಮೇಶ್ ಸಾಲಿಯಾನರವರುಗಳು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ ನಾಣಿತ್ತಿಲುರವರು ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ಸಾಹಿತಿಗಳಾದ ಡಾ. ಸಬಿಹಾ ಭೂಮಿ ಗೌಡರವರು ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಕೆ. ಮುರಳಿಧರವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Write A Comment