ಕನ್ನಡ ವಾರ್ತೆಗಳು

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದರೆ ರೂ. 1000 ದಂಡ

Pinterest LinkedIn Tumblr

cigarate_photo_antidoss

ಮಂಗಳೂರು, ಆಗಸ್ಟ್. 26: ಸಮಾಜದಲ್ಲಿ ಎಲ್ಲರಿಗೂ ಆರೋಗ್ಯ ಒದಗಿಸುವುದು ಎಲ್ಲರ ಹೊಣೆಯಾಗಿದ್ದು, ಈ ದಿಸೆಯಲ್ಲಿ ಸಾರ್ವಜನಿಕ ಸ್ಥಳಗಳಾದ ಕಚೇರಿ, ಪಾರ್ಕ್, ಸಿನಿಮಾ ಮಂದಿರ, ಹೊಟೇಲ್, ಬಸ್ಸುನಿಲ್ದಾಣ, ರೈಲ್ವೆ ನಿಲ್ದಾಣ, ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದಲ್ಲಿ ಅಂತಹವರ ವಿರುದ್ದ ಕೊಟ್ಪಾ ಕಾಯ್ದೆಯಡಿ ರೂ.1000 ವರೆಗೆ ದಂಡ ಅಥವಾ 1ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ, ಅದ್ದರಿಂದ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಎಚ್ಚರ ವಹಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಜನರಿಗೆ ಸೂಚಿಸಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕೊಟ್ಪಾ ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶ ವಿಶ್ವದಲ್ಲೆ ತಂಬಾಕು ಉತ್ಪಾದನಯಲ್ಲಿ 2ನೇ ದೊಡ್ಡ ದೇಶವಾಗಿದೆ. ವಿಶ್ವದಲ್ಲಿ ತಂಬಾಕು ಸೇವನೆಯ ಮರಣಗಳಲ್ಲಿ ಶೇ.30 ಭಾರತೀಯರಾಗಿ ದ್ದಾರೆ. ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಕೇವಲ ಜಾಹೀರಾತುಗಳ ಮೂಲಕ ಜನರನ್ನು ಎಚ್ಚರಿಸಿದರೆ ಸಾಲದು, ಬದಲಾಗಿ ತಂಬಾಕು ಸೇವನೆಯಿಂದ ಬರುವ ಮಾರಣಾಂತಿಕ ರೋಗಗಳ ಕುರಿತು ಅವರಲ್ಲಿ ಅರಿವು ಮೂಡಿಸಬೇಕು, ಪ್ರತಿ ಗ್ರಾಮದಲ್ಲೂ ತಂಬಾಕು ಸೇವನೆಯ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಸರ್ಕಾರಗಳು ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ಹಾಕುವ ಮೂಲಕ ತಂಬಾಕು ಬಳಕೆಯನ್ನು ಕಡಿಮೆಗೊಳಿಸಬಹು ದೆಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.

ಸಭೆಯಲ್ಲಿ ಬಂಟ್ವಾಳ ಎ‌ಎಸ್‌ಪಿ ರಾಹುಲ್ ಕುಮಾರ್ ಎಸ್. ಮಾತನಾಡಿ ಬಂಟ್ವಾಳ ಮತ್ತು ಪುತ್ತೂರು ತಾಲುಕುಗಳಲ್ಲಿ 2015 ನೇ ಸಾಲಿನ ಆಗಸ್ಟ್ 25 ರವರೆಗೆ 1657  ಜನ ಧೂಮಪಾನಿಗಳ ವಿರುದ್ದ ಮೊಕದ್ದಮೆ ಹೂಡಿ ಅವರಿಂದ ರೂ. 2.92 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು. ವಿಭಾಗೀಯ ಕೊಟ್ಪಾ ಕಾಯ್ದೆ ಸಂಯೋಜನಾಧಿಕಾರಿ ಡಾ||ಚಂದ್ರಕಿರಣ್ ಕೊಟ್ಪಾ ಕಾಯ್ದೆ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯ ಹಾಜರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿದರು.

Write A Comment