ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪದ ಮಾಂಗಟ್ಟೆ ಎಂಬಲ್ಲಿ ಆಟೋದೊಳಗೆ ಆಟೋ ಚಾಲಕನ ಶವವೊಂದು ಪತ್ತೆಯಾಗಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಕೊಲೆಗೀಡಾದ ರಿಕ್ಷಾ ಚಾಲಕನನ್ನು ಅಳೇಕಲ ನಿವಾಸಿ ಹಿದಾಯತ್ (30) ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಶುಕ್ರವಾರ ರಾತ್ರಿಯೇ ಈತನ ತಲೆಗೆ ಕಲ್ಲಿನಿಂದ ಜಜ್ಜಿ, ಕಬ್ಬಿಣದ ಸಲಾಕೆಯಿಂದ ಬಡಿದು ಕೊಲೆ ಮಾಡಿ ಬಳಿಕ ಆಟೋದೊಳಗೆ ಹಾಕಿರಬೇಕೆಂದು ಶಂಕೀಸಲಾಗಿದೆ. ಪ್ರಕರಣ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಮನೆ ಬಿಟ್ಟು ತೆರಳಿದ ಹಿದಾಯತ್ ರಾತ್ರಿ 9 ರ ಸುಮಾರಿಗೆ ಪತ್ನಿಗೆ ಕರೆ ಮಾಡಿದವರು ಬಾಡಿಗೆ ಇರುವುದಾಗಿ ತಿಳಿಸಿದ್ದರು. ರಾತ್ರಿ ಅಡುಗೆ ಮಾಡಬೇಡ ಬರುವಾಗ ಏನಾದರೂ ತರುತ್ತೇನೆ ಎಂದು ಹೇಳಿದ್ದರು. ತಡರಾತ್ರಿವರೆಗೂ ಪತ್ನಿ ಕಾದರೂ ಹಿದಾಯತ್ ಮಾತ್ರ ಬಂದಿರಲಿಲ್ಲ. ಇಂದು ಬೆಳಿಗ್ಗೆ ಕೂಡಾ ಮನೆಗೆ ಬಾರದೇ ಇರುವುದರಿಂದ ಹಿದಾಯತ್ ಸಹೋದರ ಹನೀಫ್ ಅವರಿಗೆ ವಿಷಯ ತಿಳಿಸಿದ್ದರು. ಅವರು ಇನ್ನೋರ್ವ ಸಹೋದರ ಮಹಮ್ಮದ್ ರಫೀಕ್ ಅವರ ಜತೆಗೆ ಸೇರಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ . ಇದೀಗ ಹಿದಾಯತ್ ಶವ ನಾಟೆಕಲ್ ಸಮೀಪದ ಮಾಂಗಟ್ಟೆ ಎಂಬಲ್ಲಿ ನಿಲ್ಲಿಸಿದ ಆಟೋದೊಳಗೆ ಪತ್ತೆಯಾಗಿದೆ.
ಫಾರುಕ್ ಮೇಲೆ ಅನುಮಾನ :
ಹಿದಾಯತ್‍ನ ಮೊದಲನೇ ಪತ್ನಿಯ ಸಹೋದರ ಅಳೇಕಲ ನಿವಾಸಿ ಫಾರುಕ್ ಎಂಬಾತ ಎರಡು ದಿನಗಳ ಹಿಂದೆ ಹಿದಾಯತ್‍ಗೆ ಜೀವಬೆದರಿಕೆ ಒಡ್ಡಿದ್ದ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಹಿದಾಯತ್ ಶುಕ್ರವಾರ ಮಧ್ಯಾಹ್ನ ವೇಳೆ ಮೌಖಿಕವಾಗಿ ದೂರು ಸಲ್ಲಿಸಲಾಗಿತ್ತು.
ಫಾರುಕ್ ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬೆದರಿಕೆಯೊಡ್ಡುತ್ತಿದ್ದ. ಜೀವಬೆದರಿಕೆ ಕುರಿತ ಎಫ್ ಐ ಆರ್ ಇಂದು ಮಧ್ಯಾಹ್ನ ವೇಳೆ ಉಳ್ಳಾಲ ಪೊಲೀಸರು ದಾಖಲಿಸಿಕೊಂಡಿದ್ದು, ಆದರೆ ಈ ವೇಳೆ ಹಿದಾಯತ್ ಕೊಲೆಯಾಗಿ ಪತ್ತೆಯಾಗಿದ್ದಾನೆ.
ಹಿದಾಯತ್‍ನ ವಿರುದ್ಧವೂ ಉಳ್ಳಾಲ ಠಾಣೆಯಲ್ಲಿ ಹಲವು ಸಣ್ಣ ಪುಟ್ಟ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಡಿಸಿಪಿ ಶಾಂತರಾಜು ಕೆ.ಯಸ್.ಪಿ.ಯಸ್, ಎಸಿಪಿ ಕಲ್ಯಾಣ್ ಶೆಟ್ಟಿ ಆರ್.ಆರ್, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ, ಎಸ್.ಐ ಭಾರತಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ,
ಎರಡನೇ ಪ್ರಕರಣ :
ಕೆಲವು ದಿನಗಳ ಹಿಂದೆ ವಾಮಂಜೂರು ಸಮೀಪ ಇದೇ ರೀತಿ ಆಟೋ ಚಾಲಕನ ಶವವೊಂದು ಆಟೋದೊಳಗೆ ಕಬ್ಬಿಣದ ರಾಡ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸ ಬಹುದು.