ಮಂಗಳೂರು : ಜಿಲ್ಲೆಯ ಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ವಿವಾದಾತ್ಮಕ ಎತ್ತಿನಹೊಳೆ ಯೋಜನೆಯ ಪರಿಣಾಮದ ಬಗ್ಗೆ ಪುನರ್ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಶಾಸಕ ಹಾಗೂ ರಾಜ್ಯ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿಯ ಅಧ್ಯಕ್ಷ ಜೆ.ಆರ್.ಲೋಬೊ ತಿಳಿಸಿದ್ದಾರೆ.
ಸೋಮವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ, ಅದರಿಂದ ಕರಾವಳಿ ಜನರಿಗೆ ಯಾವರೀತಿಯ ತೊಂದರೆಯಾಗಬಹುದು ಎನ್ನುವ ಬಗ್ಗೆ ಸಮಗ್ರವಾದ ವರದಿಯನ್ನು ತಜ್ಞರಿಂದ ಸರಕಾರ ಪಡೆದುಕೊಳ್ಳಬೇಕು. ಯೋಜನೆಯಿಂದ ಪರಿಸರಕ್ಕೆ ಹಾನಿ ಇದೆಯೇ?, ಎತ್ತಿನಹೊಳೆಯಲ್ಲಿ ನೀರಿನ ಲಭ್ಯತೆ ಎಷ್ಟಿದೆ? ಎನ್ನುವ ಬಗ್ಗೆ ಖಚಿತವಾದ ತಜ್ಞರ ಅಭಿಪ್ರಾಯವನ್ನು ಸರಕಾರ ಪಡೆದುಕೊಳ್ಳಬೇಕು. ನಂತರ ಜನರ ಸಮ್ಮತಿಯನ್ನು ಪಡೆದುಕೊಂಡು ಸರಕಾರ ಮುಂದುವರಿಯುವುದು ಉತ್ತಮ ಎಂದರು.
ಈ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಇರುವ ಸಂದೇಹಗಳನ್ನು ಪರಿಹರಿಸುವ ಕೆಲಸ ಆಗಬೇಕಾಗಿದೆ. ಜನತೆಯ ವಿಶ್ವಾಸಗಳಿಸಿದ ಬಳಿಕ ಎತ್ತಿನಹೊಳೆ ಯೋಜನೆಯನ್ನು ಸರಕಾರ ಅನುಷ್ಠಾನಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಜೆ.ಆರ್.ಲೋಬೊ ತಿಳಿಸಿದರು.
ಕೋಲಾರದಲ್ಲಿ ಕುಡಿಯುವ ನೀರಿನ ಗಂಭೀರವಾದ ಸಮಸ್ಯೆ ಇದೆ. ಈ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದರೆ ಅಲ್ಲಿನ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ ಎಂದು ಜೆ.ಆರ್.ಲೋಬೊ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.