ಮಂಗಳೂರು, ಸೆ.1: ದೇಶದ ಕಾರ್ಮಿಕರ ಸುಮಾರು 12 ಮೂಲಭೂತ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಸೆ.2ರಂದು ಅಖಿಲ ಭಾರತೀಯ ಮಟ್ಟದಲ್ಲಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಈ ಮುಷ್ಕರಕ್ಕೆ ಅಖೀಲ ಭಾರತ ಸಾರಿಗೆ ನೌಕರರ ಸಂಘಟನೆಯೂ ಕೈ ಜೋಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಖಾಸಗಿ ಸರ್ವಿಸ್, ಎಕ್ಸ್‌ಪ್ರೆಸ್ ಹಾಗೂ ಸಿಟಿ ಬಸ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಈ ಬಂದ್‌ನಲ್ಲಿ ಸಾರಿಗೆ ನೌಕರರ ಸಂಘಟನೆಯೂ ಪಾಲ್ಗೊಳ್ಳುತ್ತಿರುವುದರಿಂದ ಸೆ. 2ರಂದು ಖಾಸಗಿ ಬಸ್‌ಗಳ ಸಂಚಾರವಿರುವುದಿಲ್ಲ ಎಂದು ಮೋಟಾರ್ ಟ್ರಾನ್ಸ್‌ಪೋರ್ಟ್ ಆ್ಯಂಡ್ ಎಂಜಿನಿಯರಿಂಗ್ ವರ್ಕರ್ ಯೂನಿಯನ್ ಹಾಗೂ ಸಿಐಟಿ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಮತ್ತು ಬಸ್ ನೌಕರರ ಸಂಘಟನೆ ಅಧ್ಯಕ್ಷ ಅಶೋಕ್, ಕಾರ್ಯದರ್ಶಿ ವಿಶ್ವನಾಥ ಕುಲಾಲ್ ಪ್ರಕಟಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಾಳೆ ನಡೆಯಲಿರುವ ಅಖೀಲ ಭಾರತ ಕೈಗಾರಿಕಾ ಮುಷ್ಕರದಲ್ಲಿ ರಸ್ತೆ ಸಾರಿಗೆ ನಿಗಮಗಳ ಎಲ್ಲ ಕಾರ್ಮಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕೆಂದು ಎಐಟಿಯುಸಿಗೆ ಸಮ್ಮಿಳಿತಗೊಂಡ ಕೆಎಸ್‌ಆರ್‌ಟಿಸಿ ಸಿಬಂದಿ ಹಾಗೂ ಕಾರ್ಮಿಕರ ಸಂಘಟನೆ ಮಂಗಳೂರು ವಿಭಾಗ ಕರೆ ನೀಡಿದೆ.
ಕಾರ್ಮಿಕ ಸಂಘಟನೆಗಳ ಜೊತೆಗೆ ಖಾಸಗಿ ಸರ್ವಿಸ್, ಎಕ್ಸ್‌ಪ್ರೆಸ್ ಹಾಗೂ ಸಿಟಿ ಬಸ್ ನೌಕರರು, ಕೆಎಸ್‌ಆರ್‌ಟಿಸಿ ಸಿಬಂದಿಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಸೆ. 2ರಂದು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ. ಶಾಲಾ,ಕಾಲೇಜುಗಳ ವಿದ್ಯಾರ್ಥಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ಸಾರಿಗೆ, ಬ್ಯಾಂಕ್, ವಿಮೆ, ಅಂಚೆ, ಕೈಗಾರಿಕ ವಲಯಗಳಲ್ಲಿ ಬಾರೀ ತೊಂದರೆಯಾಗುವ ಸಾಧ್ಯತೆ ಇದೆ. ಬಂದ್ ಸಂದರ್ಭದಲ್ಲಿ ಅಂಗಡಿ – ಮುಂಗಟ್ಟುಗಳು, ಹೋಟೆಲುಗಳು ಬಂದ್‌ಗೆ ಬೆಂಬಲ ಸೂಚಿಸಿ ಬಾಗಿಲು ತೆರೆಯುವುದು ಅನುಮಾನ. ಜೊತೆಗೆ ಅಗತ್ಯ ಸೇವೆಗಳು ವ್ಯತ್ಯಯವಾಗುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಲಿದೆ.
ಬಿಸಿಯೂಟ ನೌಕರರಿಂದಲೂ ಮುಷ್ಕರ :
ದೇಶದ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ಬದಲಾವಣೆಗೆ ಒತ್ತಾಯಿಸಿ ಸೆ. 2ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಯುತ್ತಿರುವುದರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಅಕ್ಷರದಾಸೋಹ ನೌಕರರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಮುಷ್ಕರದಿಂದ ಹಿಂದೆ ಸರಿದ ಭಾರತೀಯ ಮಜ್ದೂರ್ ಸಂಘ :
ಮಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶದ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ನಾಳಿನ ಈ ಮುಷ್ಕರದಿಂದ ಭಾರತೀಯ ಮಜ್ದೂರ್ ಸಂಘ ಹಿಂದೆ ಸರಿದಿದೆ. ಸೆ.2ರಂದು ನಡೆಯಲಿರುವ ಸಾರ್ವತ್ರಿಕ ಮುಷ್ಕರದಲ್ಲಿ ನಮ್ಮ ಸಂಘಟನೆಯು ಪಾಲ್ಗೊಳ್ಳುವುದಿಲ್ಲ ಎಂದು ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಕೆ. ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಸಾಕಷ್ಟು ಬೇಡಿಕೆಗಳನ್ನು ಈಡೇರಿಸಲು ಹಾಗೂ ಸಮಸ್ಯೆಗಳ ಪರಿಹಾರಕ್ಕೆ ನಿಲುವು ತಳೆದಿದೆ. ಉಳಿದ ವಿಚಾರ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಸಹಮತ ವ್ಯಕ್ತಪಡಿಸಿದ್ದು, ಕಾಲಾವಕಾಶದ ಅಗತ್ಯವಿರುವ ಬಗ್ಗೆ ತಿಳಿಸಿದೆ. ಕೇಂದ್ರ ಸರಕಾರವು ಕಾರ್ಮಿಕ ಸಂಘಟನೆಗಳಿಗೆ ಒಪ್ಪಿಗೆ ನೀಡಿದರೂ, ಅವು ಈಗ ಅಸ್ತಿತ್ವದಲ್ಲಿರುವ ಕಾನೂನಿನೊಳಗೆ ತಿದ್ದುಪಡಿಯಾಗಿ ಒಪ್ಪಿಗೆ ಪಡೆಯುವ ಪ್ರಕ್ರಿಯೆಗೆ ಕಾಲಾವಕಾಶ ಕೊಡಬೇಕಾದುದು ಅನಿವಾರ್ಯ. ಈ ನಿಟ್ಟಿನಲ್ಲಿ ಮುಷ್ಕರ ನಡೆಸದಿರಲು ನಿಶ್ಚಯಿಸಲಾಗಿದೆ ಎಂದರು.
ಪತ್ರಿಕಾಗೋಷ್ಠೊಯಲ್ಲಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ, ಪದಾಧಿಕಾರಿಗಳಾದ ಕೆ.ಎನ್. ಪುರುಷೋತ್ತಮ್, ನಾರಾಯಣ ಶೆಟ್ಟಿ, ಪ್ರಭಾಕರ್ ಮುಂತಾದವರು ಉಪಸ್ಥಿತರಿದ್ದರು.