ಕನ್ನಡ ವಾರ್ತೆಗಳು

ಆಟೋ ಚಾಲಕ ಹಿದಾಯತ್‌ ಕೊಲೆ ಪ್ರಕರಣ : ಏಳು ಆರೋಪಿಗಳ ಸೆರೆ – ಪ್ರಮುಖ ಇಬ್ಬರು ಆರೋಪಿಗಳಿಗಾಗಿ ಶೋಧ

Pinterest LinkedIn Tumblr

ಉಳ್ಳಾಲ: ಆಟೋ ರಿಕ್ಷಾ ಚಾಲಕ ಉಳ್ಳಾಲ ನಿವಾಸಿ ಹಿದಾಯತ್‌ ಕೊಲೆ ಪ್ರಕರಣದಲ್ಲಿ ಭಾಗಿಯಾದ ಏಳು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಇನ್ನಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪೊಲೀಸರು ಇವರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಬಂಧಿತ ಆರೋಪಿಗಳನ್ನು ಹಿದಾಯತ್‌ನ ಮೊದಲ ಪತ್ನಿ ಉಳ್ಳಾಲ ಪೇಟೆ ನಿವಾಸಿಗಳಾದ ಫಾಝಿಲ (28) ಆಕೆಯ ಸಹೋದರ ಫಾಝಿಲ್‌ (25), ಮದನಿ ನಗರದ ನಿವಾಸಿಗಳಾದ ಖುರ್ಷಿದ್‌, ತನ್ವಿಝ್, ಲುಕ್ಮಾನ್‌, ಜಂಶೀರ್‌, ಇರ್ಫಾನ್ ಎಂದು ಗುರುತಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳು ಮದನಿನಗರ ನಿವಾಸಿ ನಿಸಾರ್‌ ಮತ್ತು ನೌಫಾಲ್‌ ಎನ್ನಲಾಗಿದೆ.

Hidayath_Murder_Ullala1

“ಉಳ್ಳಾಲ ಎಕ್ಸ್‌ಪ್ರೆಸ್‌’ ಎಂದೇ ಹೆಸರುವಾಸಿಯಾದ ಹಿದಾಯತ್‌ನನ್ನು ಆ.28ರಂದು ರಾತ್ರಿ ಕಿನ್ಯ ಗ್ರಾಮದ ಸಂಕೇಶ ರಸ್ತೆಯ ಮಾಂಗಟ್ಟೆ (ಕುಕ್ಕುದಕಟ್ಟೆ) ಬಳಿ ಸೋಂಟೆಯಿಂದ ಬಡಿದು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಿದ್ದು ಆ. 29ರಂದು ಬೆಳಗ್ಗೆ ರಿಕ್ಷಾದ ಚಾಲಕನ ಸೀಟಿನಲ್ಲಿ ಕುಳ್ಳಿರಿಸಿದ ಸ್ಥಿತಿಯಲ್ಲೇ ಶವ ಪತ್ತೆಯಾಗಿತ್ತು. ಅರೆ ಪ್ರಜ್ಞಾ ಸ್ಥಿತಿಯಲ್ಲಿದ್ದ ಹಿದಾಯತ್‌ನನ್ನು ಹೊಡೆದ ಬಳಿಕ ತಂಡ ರಿಕ್ಷಾದ ಹಿಂದಿನ ಸೀಟಿನಲ್ಲಿ ಮಲಗಿಸಿ ತೆರಳಿದ್ದರು. ಆದರೆ ಹಿದಾಯತ್‌ ಹಿಂದಿನ ಸೀಟಿನಿಂದ ಎದ್ದು, ರಿಕ್ಷಾವನ್ನು ಚಲಾಯಿಸಲು ಡ್ರೈವರ್‌ ಸೀಟಿನಲ್ಲಿ ಕುಳಿತು ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಹಿದಾಯತ್‌ ರಿಕ್ಷಾ ಸ್ಟಿಯರಿಂಗ್‌ನಲ್ಲಿ ಮಲಗಿದ್ದು, ಅದೇ ಸ್ಥಿತಿಯಲ್ಲಿ ಬೆಳಗ್ಗೆ ಮೃತದೇಹ ಪತ್ತೆಯಾಗಿತ್ತು.

ಮೂರನೇ ಮದುವೆಯಾಗಿದ್ದ ಹಿದಾಯತ್‌ನ ಪ್ರಥಮ ಪತ್ನಿ ಫಾಝಿಲ ಈ ಕೊಲೆಗೆ ಪ್ರಮುಖ ಕಾರಣವಾಗಿದ್ದು, ಫಾಝಿಲಳಿಗೆ ಎರಡನೇ ಮದುವೆಯಾದ ಬಳಿಕವೂ ಹಿದಾಯತ್‌ ಫಾಝಿಲಳ ಮನೆಗೆ ಬಂದು ಮಗುವಿಗೆ ಚಾಕಲೇಟ್‌ ನೀಡುವ ನೆಪದಲ್ಲಿ ಕಿರುಕುಳ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಹಿದಾಯತ್‌ನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಕೊಲೆ ನಡೆದ ದಿನವೂ ಫಾಝಿಲಳ ಸಹೋದರ ತನ್ನ ಸಂಬಂಧಿ ನಿಸಾರ್‌ನ ಜೊತೆಗೂಡಿ ಹಿದಾಯತ್‌ನಿಗೆ ಹೊಡೆದು ಎಚ್ಚರಿಕೆ ನೀಡುವ ಉದ್ದೇಶದಿಂದ ಕಿನ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಥಳಿಸಿ ತೆರಳಿದ್ದರು. ಆದರೆ ಹೊಡೆತದ ಪರಿಣಾಮ ಹಿದಾಯತ್‌ ಗಂಭೀರ ಗಾಯಗೊಂಡು ಸಾವಿಗೀಡಾಗಿದ್ದನು.

ಹಿದಾಯತ್‌ ತೊಕ್ಕೊಟ್ಟಿನಲ್ಲಿ ಉಳ್ಳಾಲ ಎಕ್ಸ್‌ಪ್ರೆಸ್‌ ಎಂದೇ ಕರೆಯಲ್ಪಡುತ್ತಿದ್ದ. ಎಲ್ಲ ರಿಕ್ಷಾಗಳು ಪಾರ್ಕಿನಲ್ಲಿ ನಿಲ್ಲಿಸಿ ಸರತಿಯಲ್ಲಿ ಬಾಡಿಗೆ ಹಿಡಿಯುತ್ತಿದ್ದರೆ, ಹಿದಾಯತ್‌ ಮಾತ್ರ ಉಳ್ಳಾಲ ಕಡೆ ಹೋಗುವ ಬಸ್‌ ನಿಲ್ದಾಣ ಬಳಿ ಬಂದು ಉಳ್ಳಾಲ ಎಕ್ಸ್‌ಪ್ರೆಸ್‌ ಎಂದೇ ಜನರನ್ನು ಹತ್ತಿಸಿ ಸರ್ವಿಸ್‌ ಬಾಡಿಗೆ ಮಾಡುತ್ತಿದ್ದ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳು ಇದ್ದು, ಹಲವು ಬಾರಿ ಇಂತಹ ಸಣ್ಣಪುಟ್ಟ ವಿಚಾರಕ್ಕೆ ಪೊಲೀಸರಿಂದ ಪೆಟ್ಟು ತಿಂದಿದ್ದ.

ಹಿದಾಯತ್‌ ಮನೆಯಲ್ಲಿ ಕಿರಿಕಿರಿ ಸೇರಿದಂತೆ ವಿಚಿತ್ರವಾಗಿ ವರ್ತಿಸುತ್ತಿದ್ದ ಇದೇ ಕಾರಣಕ್ಕೆ ಇಬ್ಬರು ಪತ್ನಿಯರು ಈತನನ್ನು ಬಿಟ್ಟಿದ್ದರು. ಮನೆಯಲ್ಲೂ ಸಹೋದರರು ಇದೇ ಕಾರಣಕ್ಕೆ ಬೇರೆ ಮನೆ ಮಾಡಿಕೊಂಡಿದ್ದರು. ಆದರೆ 10 ತಿಂಗಳ ಹಿಂದೆ ಮೂರನೇ ಮದುವೆಯಾದ ಬಳಿಕ ಜೀವನದಲ್ಲಿ ತಂಬಾ ಸುಧಾರಿಸಿದ್ದ ಎನ್ನುತ್ತಾರೆ ಈತನ ಕುಟುಂಬದವರು. ಘಟನೆ ನಡೆದ ದಿನ ಪತ್ನಿಗೆ ದೂರವಾಣಿ ಕರೆ ಮಾಡಿ ರಾತ್ರಿ ಊಟ ಮಾಡಬೇಡ ನಾನೇ ಹೋಟೆಲ್‌ನಿಂದ ತರುತ್ತೇನೆ ಎಂದಿದ್ದ. ಆದರೆ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದ.

ಪತ್ತೆ ಕಾರ್ಯದಲ್ಲಿ ಪೊಲೀಸ್‌ ಕಮಿಷನರ್‌ ಮುರುಗನ್‌, ಡಿಸಿಪಿಗಳಾದ ಶಾಂತರಾಜ್‌, ಸಂಜೀವ್‌ ಪಾಟೀಲ್‌, ಎಸಿಪಿ ಕಲ್ಯಾಣ ಶೆಟ್ಟಿ ನಿರ್ದೇಶನದಲ್ಲಿ ಉಳ್ಳಾಲ ಇನ್‌ಸ್ಪೆಕ್ಟರ್‌ ಸವಿತ್ರ ತೇಜ, ಎಸ್‌ಐಗಳಾದ ಭಾರತಿ, ರಾಜೇಂದ್ರ, ಎಎಸ್‌ಐಗಳಾದ ಮೋಹನ್‌ದಾಸ್‌, ವಿಜಯರಾಜ್‌, ಸಿಬಂದಿ ಮೋಹನ್‌, ರಾಜಾರಾಮ್‌, ದಿನೇಶ್‌, ರಂಜಿತ್‌, ಮಹೇಶ್‌ ಗಟ್ಟಿ, ಪ್ರಶಾಂತ್‌, ಲಿಂಗರಾಜು, ಶಾಂತಪ್ಪ, ಶೋನ್‌ಷಾ ಮತ್ತಿತರರು ಭಾಗವಹಿಸಿದ್ದರು.

Write A Comment