ಮೂಡಬಿದಿರೆ,ಸೆ.15 : ಮೂಲ್ಕಿ ರಾಜ್ಯ ಹೆದ್ದಾರಿ ಬಳಿ ಬಸ್‌ಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಮೃತರನ್ನು ಮೂಡಬಿದಿರೆಯ ದೇವಾಡಿಗರ ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆ ಹಾಗೂ ಅನಿವಾಸಿ ಭಾರತೀಯ ಸಂಪತ್ ಕುಮಾರ್ ಎಂಬವರ ಪತ್ನಿ ತೇಜಶ್ರೀ (33) ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಿಗ್ಗೆ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬಳಿಕ ತಾನು ಕೆಲಸ ಮಾಡಿಕೊಂಡಿದ್ದ ಕಲ್ಲಮುಂಡ್ಕೂರಿನ ಸರ್ವೋದಯ ಹೈಸ್ಕೂಲ್‌ಗೆ ತೆರಳುತ್ತಿದ್ದಾಗ ತೇಜಶ್ರೀ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಕಿನ್ನಿಗೋಳಿ ಕಡೆಯಿಂದ ಬರುತ್ತಿದ್ದ ಬಸ್ ಹಿಂದಿನಿಂದ ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ತೇಜಶ್ರೀ ರಸ್ತೆಗೆ ಎಸೆಯಲ್ಪಟ್ಟರು. ಅದೇ ಸಂದರ್ಭದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಇನ್ನೊಂದು ವಾಹನವೂ ಆಕೆಗೆ ಬಡಿದಿದೆ. ಹೆಲ್ಮೆಟ್ ಹಾಕಿದ್ದರೂ ಸಹ ಹೆಲ್ಮೆಟ್ ಉದುರಿ ಬಿದ್ದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ತೇಜಶ್ರೀ ರಸ್ತೆಯಲ್ಲೆ ಬಿದ್ದಿದ್ದರೂ 20 ನಿಮಿಷಗಳ ಕಾಲ ಆಕೆಯ ನೆರವಿಗೆ ಯಾರೂ ಬಂದಿರಲಿಲ್ಲ ಎನ್ನಲಾಗಿದೆ.
ಬಳಿಕ ಅದೇ ದಾರಿಯಲ್ಲಿ ತೆರಳುತ್ತಿದ್ದ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಮತ್ತು ಬಸ್ ಏಜೆಂಟ್ ದೇವದಾಸ್ ಎಂಬುವವರು ಮೂಡ ಬಿದಿರೆಯ ಆಸ್ಪತ್ರೆಗೆ ಕೊಂಡೊಯ್ದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿತ್ತು. ಮಾರ್ಗಮಧ್ಯದಲ್ಲೇ ತೇಜಶ್ರೀ ಕೊನೆಯುಸಿರೆಳೆದಿದ್ದಾರೆ.
ಮೂಡಬಿದಿರೆಯ ತೇಜಶ್ರೀ ಸಂಪತ್ ಎಂಬವರನ್ನು ಮದುವೆಯಾಗಿದ್ದು ಸಂಪತ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ತೇಜಶ್ರೀಗೆ ಮೂವರು ಹೆಣ್ಣುಮಕ್ಕಳಿದ್ದು ಇಬ್ಬರು 7 ಮತ್ತು 3ನೆಯ ತರಗತಿಯಲ್ಲಿ ಕಲಿಯುತ್ತಿದ್ದರೆ ಮೂರನೆಯ ಮಗುವಿಗೆ ಕೇವಲ ನಾಲ್ಕು ವರ್ಷ ಪ್ರಾಯ. ತೇಜಶ್ರೀ ದೇವಾಡಿಗ ಸಂಘದಲ್ಲಿ ಸಕ್ರಿಯರಾಗಿದ್ದರು. ಪರಿಸರದಲ್ಲಿ ಜನಪ್ರಿಯರಾಗಿದ್ದರು.