ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಲಶೇಖರ, ಮಂಗಳೂರು ಇವರ 46ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿಯ ಶೋಭಾಯಾತ್ರೆಯು ಶನಿವಾರ ಸಂಜೆ ಬಹಳ ವಿಜೃಂಭಣೆಯಿಂದ ಜರಗಿತು.
ಇದೇ ಸಂದರ್ಭದಲ್ಲಿ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ (ಕೆ.ಎಮ್.ಎಫ್ – ನಂದಿನಿ) ಇವರ 29ನೇ ವರ್ಷದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿಯ ಶೋಭಾಯಾತ್ರೆಯು ಶನಿವಾರ ಸಂಜೆ ಬಹಳ ವೈಭವಯುತವಾಗಿ ನೆರವೇರಿತು.
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಲಶೇಖರ ಇವರ ಶ್ರೀ ಮಹಾಗಣಪತಿಯ ಶೋಭಾಯಾತ್ರೆಯು ಬಿಕರ್ಣಕಟ್ಟೆ ಮಾರ್ಗವಾಗಿ ನಗರದ ನಂತೂರು ಪದವು ಶಾಲಾ ಬಳಿಯವರೆಗೆ ಬಂದು ಮತ್ತೆ ಅದೇ ದಾರಿಯಲ್ಲಿ ಕುಡುಪು ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜನೆಗೊಳ್ಳಲು ಹಿಂತಿರುಗುತ್ತಿರುವ ಸಂದರ್ಭದಲ್ಲಿ ಮಂಗಳೂರು ಡೈರಿಯವರ ಶ್ರೀ ಮಹಾಗಣಪತಿಯ ವಿಸರ್ಜನಾ ಮೆರವಣಿಗೆಯು ನಂತೂರು ಕಡೆ ಬರುತ್ತಿದ್ದು, ಕುಲಶೇಖರದ ಕರ್ನಾಟಕ ಬ್ಯಾಂಕ್ ಸಮೀಪ ಈ ಎರಡೂ ಸಮಿತಿಯ ವತಿಯಿಂದ ಪೂಜಿಸಲ್ಪಟ್ಟ ಶ್ರೀ ಮಹಾಗಣಪತಿಗಳು ಮುಖಮುಖಿಯಾಗುವ ಅಪೂರ್ವ ದೃಶ್ಯವನ್ನು ನೋಡುವ ಸುವರ್ಣವಕಾಶ ಭಕ್ತಾಧಿಗಳ ಪಾಲಿಗೆ ಒದಗಿ ಬಂತು.
ಎರಡೂ ಸಮಿತಿಗಳ ಮೆರವಣಿಗೆಯಲ್ಲಿ ಹುಲಿವೇಷ ಟ್ಯಾಬ್ಲೋಗಳು, ಹಲವಾರು ವೈವಿಧ್ಯಮಯ ವೇಷಧಾರಿಗಳು, ನಾಸಿಕ್ ಬ್ಯಾಂಡ್, ಚೆಂಡೆ ವಾದನ ಮುಂತಾದ ತಂಡಗಳು ಪಾಲ್ಗೊಂಡಿದ್ದವು.