ಮಂಗಳೂರು / ಬಜ್ಪೆ : ಬೈಕ್ ಗೆ ಟೆಂಪೊ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಬಜ್ಪೆ ಪೋಲಿಸ್ ಠಾಣಾ ವ್ಯಾಪ್ತಿಯ ಎಕ್ಕಾರ್ ಹುಣಸೆಕಟ್ಟೆಯಲ್ಲಿ ಸಂಭವಿಸಿದೆ.
ಮೃತ ದುರ್ದೈವಿಗಳನ್ನು ಶಿವಮೂರ್ತಿ (27) ಹಾಗೂ ಸಂತೋಷ್ (25) ಎಂದು ಗುರುತಿಸಲಾಗಿದ್ದು, ಈ ಪೈಕಿ ಓರ್ವ ಫರಂಗಿಪೇಟೆ ಅಬ್ಬೆಟ್ಟು ನಿವಾಸಿ ಎಂದು ತಿಳಿದುಬಂದಿದೆ. ಇನ್ನೋರ್ವನ ವಿವರ ತಿಳಿದುಬಂದಿಲ್ಲ. ಅಪರಿಚಿತ ವಾಹನ ಹಾಗೂ ಬೈಕ್ ನಡುವೆ ಈ ಅಪಘಾತ ಸಂಭವಿಸಿದ್ದು, ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿರುವ ವಾಹನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಘಟನೆಯ ವಿವರ:
ಇಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಶಿವಮೂರ್ತಿ ಹಾಗೂ ಸಂತೋಷ್ ತಮ್ಮ ಅಪಾಚೆ ಬೈಕ್‍ನಲ್ಲಿ ಬಜ್ಪೆ ಕಡೆಯಿಂದ ಕಟೀಲು ಕಡೆಗೆ ತೆರಳುತ್ತಿದ್ದು, ಎಕ್ಕಾರ್-ಹುಣ್ಸೆಕಟ್ಟೆ ಎಂಬಲ್ಲಿನ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಸಾಗಿಬಂದ ವಾಹನ ಈ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಸ್ಥಳೀಯರು ಸೇರುವಷ್ಟರಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಆದರೆ ಒಬ್ಬಾತ ಇನ್ನೂ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆತನೂ ಮೃತಪಟ್ಟ ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾಗೂ ಆಂಬ್ಯುಲೆನ್ಸ್ ಘಟನಾ ಸ್ಥಳಕ್ಕೆ ಧಾವಿಸಿ ಬರುವವರೆಗೆ ಇಬ್ಬರ ಮೃತದೇಹಗಳೂ ರಸ್ತೆಯಲ್ಲೇ ಬಿದ್ದಿತ್ತು ಎನ್ನಲಾಗಿದೆ. ಬೈಕ್‍ಗೆ ಡಿಕ್ಕಿ ಹೊಡೆದ ವಾಹನ ಗುರುತಿಸುವಲ್ಲಿ ಸ್ಥಳೀಯರು ವಿಫಲರಾಗಿದ್ದಾರೆ. ಟೆಂಪೋ ಇಲ್ಲವೇ ಇನ್ನಿತರ ಘನವಾಹನ ಡಿಕ್ಕಿಯಾಗಿರಬೇಕೆಂದು ಶಂಕಿಸಲಾಗಿದೆ.
ಹೆಲ್ಮೆಟ್ ಇದ್ದರೂ ಪ್ರಾಣ ಉಳಿಯಲಿಲ್ಲ!
ಬೈಕ್‍ನಲ್ಲಿದ್ದ ಶಿವಮೂರ್ತಿ ತಲೆಗೆ ಹೆಲ್ಮೆಟ್ ಧರಿಸಿದ್ದರೂ ಡಿಕ್ಕಿ ಹೊಡೆದ ರಭಸಕ್ಕೆ ಅದು ಒಡೆದು ತಲೆ ಕೂಡಾ ಛಿದ್ರವಾಗಿತ್ತು. ಸಂತೋಷ್ ಕೂಡಾ ತಲೆ, ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗೊಂಡ ಪರಿಣಾಮ ಸಾವನ್ನಪ್ಪಿದ್ದಾನೆ. ಈಬಗ್ಗೆ ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತಪಟ್ಟವರು ಕೋರೆ ಕೆಲಸಗಾರರು
ಮೃತ ಯುವಕರಿಬ್ಬರೂ ಎಕ್ಕಾರಿನಲ್ಲಿರುವ ಕಲ್ಲು ಗಣಿಗಾರಿಕೆಯ ಕೋರೆಯಲ್ಲಿ ಕೆಲಸ ಮಾಡುತ್ತಿದ್ದರು. ಒಬ್ಬಾತ ಮಡಿಕೇರಿಯ ಕುಶಾಲನಗರದವನಾಗಿದ್ದರೆ ಇನ್ನೊಬ್ಬ ಬಾದಾಮಿ ಮೂಲದವನು ಎಂದು ಹೇಳಲಾಗಿದೆ. ಇವರಲ್ಲಿ ಓರ್ವ ಫರಂಗಿಪೇಟೆ ಬಳಿ ವಾಸ್ತವ್ಯ ಹೂಡಿದ್ದ. ಘಟನೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಬಜ್ಪೆ-ಕಟೀಲು ರಾಜ್ಯ ಹೆದ್ದಾರಿಯಾಗಿದ್ದರೂ ರಸ್ತೆ ವಿಸ್ತಾರವಾಗಿರದೇ ಇರುವುದು ಹಾಗೂ ಅನೇಕ ಕಡಿದಾದ ತಿರುವುಗಳನ್ನು ಹೊಂದಿರುವ ಕಾರಣ ಈ ಭಾಗದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಅಮಾಯಕ ವಾಹನ ಸವಾರರು ಪ್ರಾಣ ತೆರುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.