ಮಂಗಳೂರು,ಸೆ.21: ಮಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಆಂಕೋಲಜಿ’ ವತಿಯಿಂದ ಸಾರ್ವಜನಿಕರಲ್ಲಿ ಕ್ಯಾನ್ಸರ್ ಜಾಗೃತಿಗಾಗಿ `ಸಂಚಾರಿ ಕ್ಯಾನ್ಸರ್ ಜಾಗೃತಿ ಅಭಿಯಾನ’ಕ್ಕೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಚಾಲನೆ ನೀಡಿದರು.
ಸಂಚಾರಿ ಅಭಿಯಾನದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಜಾಗೃತಿಯಿಂದ ಕ್ಯಾನ್ಸರ್‍ನಂತರ ಮಾರಕ ರೋಗಗಳಿಂದ ಉಂಟಾಗುವ ಸಾವನ್ನು ಮುಂದೂಡಲು ಮತ್ತು ತಪ್ಪಿಸಲು ಸಾಧ್ಯವಿದೆ ಎಂದು ನುಡಿದರು.
ಅಂಕೋಲಜಿ ಸರ್ಜಿಕಲ್ ವಿಭಾಗದ ಮುಖ್ಯಸ್ಥ ಡಾ. ಜಲಾಲುದ್ದೀನ್ ಅಕ್ಬರ್ ಮಾತನಾಡಿ, ಸಂಚಾರಿ ವಾಹನ (ಮೊಬೈಲ್ ಘಟಕ)ದಲ್ಲಿ ಕ್ಯಾನ್ಸರ್ ಕುರಿತಾದ 10 ನಿಮಿಷಗಳ ಮಾಹಿತಿ ನೀಡುವ ವಿಡಿಯೋ ವ್ಯವಸ್ಥೆ ಇದೆ. ಜಾತ್ರೆ, ಬಸ್‍ನಿಲ್ದಾಣಗಳು ಹೀಗೆ ಜನಸಂದಣಿ ಇರುವೆಡೆ ತೆರಳಿ ಕ್ಯಾನ್ಸರ್ ಕುರಿತಾಗಿ ವಿಡಿಯೋ ಪ್ರದರ್ಶನ ಮಾಡಲಾಗುವುದು. ಆಸಕ್ತಿ ಇರುವವರು ವೀಕ್ಷಿಸುತ್ತಾರೆ. ಎಲ್ಲಾ ಬಗೆಯ ಕ್ಯಾನ್ಸರ್‍ಗಳ ಕುರಿತ ಮಾಹಿತಿ ಹಾಗೂ ಸಂದೇಹ ಪರಿಹಾರಕ್ಕಾಗಿ ಈ ವಾಹನದಲ್ಲಿ ಮೂವರು ಪ್ಯಾರಾಮೆಡಿಕಲ್ ಸಿಬ್ಬಂದಿಗಳಿರುತ್ತಾರೆ. ಅವರು ಉಚಿತವಾಗಿ ಮಾಹಿತಿ ನೀಡುವರು. ವಿಶ್ವದ ಇತರ ರಾಷ್ಟ್ರಗಳ ಪೈಕಿ ಭಾರತದಲ್ಲೇ ಕ್ಯಾನ್ಸರ್ ಪ್ರಕರಣಗಳು ಅಧಿಕವಾಗಿದೆ. ಮಂಗಳೂರಿನಲ್ಲೂ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ತಂಬಾಕು ಸೇವನೆ, ಅನಾರೋಗ್ಯಕರ ಜೀವನ ಶೈಲಿ ಮತ್ತು ಕಾಯಿಲೆಯ ಬಗ್ಗೆ ಅಪನಂಬಿಕೆಗಳೇ ಹೆಚ್ಚಳಕ್ಕೆ ಕಾರಣ. ಆರೋಗ್ಯಕರ ಜೀವನ ಶೈಲಿ ನಿರ್ವಹಿಸಲು ಮಾಹಿತಿ ಮತ್ತು ಜಾಗೃತಿಯೇ ಕ್ಯಾನ್ಸರ್ ತಡೆಗಟ್ಟುವ ವಿಧಾನ. ಈ ಹಿನ್ನೆಲೆಯಲ್ಲಿ ಈ ರೀತಿಯ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ರೇಡಿಯೇಷನ್ ಅಂಕಾಲಜಿ ವಿಭಾಗ ಮುಖ್ಯಸ್ಥ ಡಾ. ಸುರೇಶ್ ರಾವ್ ಹಾಗೂ ರೇಡಿಯೇಷನ್ ಅಂಕಾಲಜಿಯ ಡಾ. ಸನತ್ ಹೆಗ್ಡೆ ಮತ್ತು ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.