ಬಂಟ್ವಾಳ: ಗ್ರಾಮ ಪಂಚಾಯತ್ ಸದಸ್ಯನೋರ್ವ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದು ಬಳಿಕ ತಾನೂ ಕತ್ತು ಕೊಯ್ದುಕೊಂಡು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ನಡೆದಿದ್ದು, ಮನೆಯೊಳಗೆ ರಕ್ತದ ಮಡುವಿನಲ್ಲಿ ಶವಗಳು ಪತ್ತೆಯಾಗುವ ಮೂಲಕ ಇಂದು ಮುಂಜಾನೆ ಪ್ರಕರಣ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯತ್ ಸದಸ್ಯರಾಗಿರುವ ಪದ್ಮನಾಭ ಎಂಬವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪದ್ಮನಾಭ ತಮ್ಮ ಪತ್ನಿ ಪುಷ್ಪಾವತಿ ಹಾಗೂ ತನ್ನಿಬ್ಬರು ಮಕ್ಕಳನ್ನು ಹರಿತವಾದ ಕತ್ತಿಯಿಂದ ಇರಿದು ಬಳಿಕ ತಾನೂ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೇಲ್ನೋಟಕ್ಕೆ ತಿಳಿದು ಬಂದಿದೆ.
ಬುಧವಾರ ಮುಂಜಾನೆ ಮನೆ ಹೊರಗೆ ರಕ್ತ ಹರಿದು ಬರುತ್ತಿದ್ದದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹಲವು ಸಮಯಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಪದ್ಮನಾಭ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ
ಡೆತ್ ನೋಟ್ ಪತ್ತೆ : ತಾಯಿ, ತಮ್ಮನಿಗೆ ಇನ್ಷೂರೆನ್ಸ್ ಹಣ ನೆರವಾಗಲಿ
ತಾನು ಮಾಡಿರುವ ಇನ್ಷೂರೆನ್ಸ್ ಪಾಲಿಸಿಯಲ್ಲಿ ತನ್ನ ತಾಯಿ ಮತ್ತು ಸಹೋದರನನ್ನು ನಾಮಿನಿಗಳನ್ನಾಗಿ ಮಾಡಿದ್ದು, ತನ್ನ ತಾಯಿ ಹಾಗೂ ಸಹೋದರನಿಗೆ ಆರ್ಥಿಕವಾಗಿ ನೆರವಾಗುವ ಹಿನ್ನೆಲೆಯಲ್ಲಿ ತಾನು ಈ ಕೃತ್ಯವೆಸಗುತ್ತಿದ್ದೇನೆ. ತಾನು ಮತ್ತು ತನ್ನ ಹೆಂಡತಿ ಮಕ್ಕಳು ಸಾಯುವುದರಿಂದ ಇನ್ಷೂರೆನ್ಸ್ ಪಾಲಿಸಿಯ ನಾಮಿನಿಗಳಾದ ತನ್ನ ಸಹೋದರ ಮತ್ತು ತಾಯಿಗೆ ಹಣ ಸಿಗಲಿ ಎಂಬ ಅರ್ಥ ಬರುವ ಹಾಗೆ ಬರೆದ ಡೆತ್ ನೋಟ್ ಮನೆಯೊಳಗೆ ಪತ್ತೆಯಾಗಿದೆ.
ಮಚ್ಚಿನಿಂದ ಕೊಚ್ಚಿ ಕೊಲೆ – Updated News
ಬಂಟ್ವಾಳ, ಸೆ.23: ಮನೆಯ ಯಜಮಾ ನನೇ ಪತ್ನಿ ಹಾಗೂ ಇಬ್ಬರು ಪುಟ್ಟ ಹೆಣ್ಣುಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದು ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಂಚಿ ಗ್ರಾಮದಲ್ಲಿ ನಡೆದಿರು ವುದು ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ ನೂಜಿ ನಿವಾಸಿ, ಮಂಚಿ ಗ್ರಾಪಂ ಸದಸ್ಯ ಪದ್ಮನಾಭ ನಾಯಕ್(45) ಈ ಕೊಲೆ ಕೃತ್ಯ ಎಸಗಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಅವರು ಪತ್ನಿ ಪುಷ್ಪಾವತಿ(40), ಮಕ್ಕಳಾದ ಪೃಥ್ವಿ(9) ಹಾಗೂ ಪೂರ್ವಿ(7) ಹತ್ಯೆ ಗೀಡಾದವರಾಗಿದ್ದಾರೆ.
ಘಟನೆಯ ವಿವರ:
ಪದ್ಮನಾಭ ಮಂಚಿ ಸಮೀಪದ ಬೊಳ್ಳಾಯಿಯ ಕಪ್ಪುಕಲ್ಲಿನ ಖಾಸಗಿ ಜಮೀನೊಂದನ್ನು ಗುತ್ತಿಗೆ ವಹಿಸಿಕೊಂಡು, ಅರೆಯುವ ಕಲ್ಲಿನ ತಯಾರಿ ಹಾಗೂ ವ್ಯಾಪಾರ ನಡೆಸುತ್ತಿದ್ದರು. ಇವರು ಮಂಚಿ ಗ್ರಾಪಂಗೆ 2ನೆ ಬಾರಿ ಬಿಜೆಪಿ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಂಗಳವಾರ ರಾತ್ರಿ ಮನೆಗೆ ಬಂದ ಪದ್ಮನಾಭ ನಾಯಕ್ 8:45ರ ಹೊತ್ತಿಗೆ ತಾಯಿ ಸುಗಂಧಿಯವರನ್ನು ಪಕ್ಕದಲ್ಲಿರುವ ಸಹೋದರನ ಮನೆಗೆ ಕಳುಹಿಸಿದ್ದರು. ಪತ್ನಿ ಮತ್ತು ಮಕ್ಕಳು ಮಲಗಿದ ಬಳಿಕ ಈ ದುಷ್ಕೃತ್ಯ ಎಸಗಿ ತಾನು ಆತ್ಮಹತ್ಯೆ ಮಾಡಿ ಕೊಂಡಿಬೇಕೆಂದು ಶಂಕಿಸಲಾಗಿದೆ.
ಬಾಗಿಲು ಬಡಿದಾಗಲೂ ಮೌನ..
ಪದ್ಮನಾಭ ಹೇಳಿದ ಕಾರಣಕ್ಕೆ ರಾತ್ರಿ ಹತ್ತಿರದಲ್ಲಿನ ಕಿರಿಯ ಮಗನ ಮನೆಗೆ ಹೋಗಿದ್ದ ಸುಗಂಧಿ, ಬೆಳ್ಳಂಬೆಳಿಗ್ಗೆ ಮನೆಗೆ ವಾಪಸ್ ಬಂದರೆ ಮನೆಯ ಬಾಗಿಲು ಹಾಕಿತ್ತು. ಬಾಗಿಲು ಬಡಿದರೂ ಮೌನ. ಕಿರಿಯ ಸೊಸೆಯನ್ನು ಕರೆದರು. ಅವರೂ ಬಂದು ನೋಡಿದ್ದಾಯಿತು. ಒಳಗಿನಿಂದ ಉತ್ತರವಿಲ್ಲ. ಸಂಶಯ ಗೊಂಡು ಮನೆಮಂದಿಯೆಲ್ಲಾ ಬಂದು ಕರೆದಾಗಲೂ ಪ್ರತಿಕ್ರಿಯೆಯೇ ಇಲ್ಲ. ಕೊನೆಗೆ ನೆರೆಮನೆಯವರ ಸಹಕಾರದೊಂದಿಗೆ ಬಾಗಿಲು ಒಡೆದು ನೋಡಿದಾಗ ರಕ್ತದ ಮಡುವಿನಲ್ಲಿದ್ದ ನಾಲ್ಕು ಮೃತದೇಹಗಳು ಅವರನ್ನು ದಿಗ್ಭ್ರಮೆಗೊಳಿಸಿದ್ದವು.
ಮನೆಯ ಬೆಡ್‌ರೂಂನಲ್ಲಿ ಹಾಸಲಾಗಿದ್ದ ಚಾಪೆಯಲ್ಲಿ ಮೂವರ ಹೆಣಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಅದೇ ಕೊಠಡಿಯ ಕಿಟಕಿಯೊಂದಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪದ್ಮನಾಭ ನಾಯಕ್ ಮೃತದೇಹ ಪತ್ತೆಯಾಗಿತ್ತು. ಪದ್ಮನಾಭರ ಕೈಯ ನರ ಕೊಯ್ದುಕೊಂಡ ಸ್ಥಿತಿಯಲ್ಲಿದ್ದು ರಕ್ತದ ಮಡುವಿನಲ್ಲಿ ಮೊಣಕಾಲು ನೆಲಕ್ಕೆ ತಾಗಿದ ಸ್ಥಿತಿಯಲ್ಲಿತ್ತು. ಪದ್ಮನಾಭರ ಮಚ್ಚಿನೇಟಿನಿಂದ ಪಾರಾಗಲು ಪತ್ನಿ ಹಾಗೂ ಇಬ್ಬರು ಮಕ್ಕಳು ಹೊರ ಳಾಟ ನಡೆಸಿದ್ದರ ಕುರುಹಾಗಿ ಕೊಠಡಿ ಯಾದ್ಯಂತ ರಕ್ತ ಚೆಲ್ಲಾಡಿತ್ತು. ಗೋಡೆ ಯಲ್ಲೂ ರಕ್ತ ಎರಚಿದ ಸ್ಥಿತಿಯಲ್ಲಿತ್ತು. ಕತ್ತಿಯೇಟಿನ ತೀವ್ರತೆಗೆ ಹಿರಿಮಗಳು ಪೃಥ್ವಿಯ ಒಂದು ಕೈ ತುಂಡರಿಸಿದ್ದರೆ, ಮೂವರ ಕೊರಳಿಗೂ ಮಚ್ಚಿನಿಂದ ತೀವ್ರವಾಗಿ ಕೊಚ್ಚಿರುವುದು ಕಂಡು ಬಂದಿದೆ.
ಮನೆಯ ಮುಂಬಾಗಿಲು ಹಾಕಿದ ಸ್ಥಿತಿಯಲ್ಲಿದ್ದು, ಒಳಬದಿಯ ಗೋಡೆ ಯಲ್ಲಿ ರಕ್ತದ ಕೈಯಚ್ಚು ಕಂಡುಬಂದಿದೆ. ಚಾವಡಿಯಲ್ಲೂ ರಕ್ತ ಚೆಲ್ಲಾಡಿದ್ದು, ಕೊಲೆಗೈದ ಬಳಿಕ ಹೊರಬಂದ ಪದ್ಮನಾಭ ಬಾಗಿಲು ಭದ್ರಪಡಿಸಿ ಒಳ ಹೋಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ. ಮೃತ ಪದ್ಮನಾಭ ನಾಯಕ್ ಮಂಚಿ ಗ್ರಾಪಂನ ಕ್ರಿಯಾಶೀಲ ಸದಸ್ಯ ರಾಗಿದ್ದು, ಬಿಜೆಪಿಯ ಕಾರ್ಯ ಚಟು ವಟಿಕೆಗಳಲ್ಲೂ ಸಕ್ರಿಯರಾಗಿದ್ದರು.
ಪತ್ನಿ ಪುಷ್ಪಾವತಿ ಗೃಹಿಣಿಯಾಗಿದ್ದು, ಬೀಡಿ ಕಟ್ಟುವ ವೃತ್ತಿ ನಿರ್ವಹಿಸುತ್ತಿದ್ದರು. ಅಲ್ಲದೆ ಮಂಚಿ ಗೋಪಾಲಕೃಷ್ಣ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆಯಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಂಚಿ ಒಕ್ಕೂಟದ ಕಾರ್ಯದರ್ಶಿಯಾಗಿದ್ದರು. ಪುತ್ರಿ ಪೃಥ್ವಿ ಮಂಚಿ-ಕುಕ್ಕಾಜೆ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 4ನೆ ತರಗತಿಯ ವಿದ್ಯಾರ್ಥಿನಿಯಾಗಿದ್ದರೆ, ಪೂರ್ವಿ 2ನೆ ತರಗತಿಯಲ್ಲಿ ಕಲಿಯುತ್ತಿದ್ದಳು.
ಡೆತ್‌ನೋಟ್ ಪತ್ತೆ :
ಪತ್ನಿ-ಮಕ್ಕಳನ್ನು ಕೊಂದ ಆರೋಪಿ ಪದ್ಮನಾಭ ಕೃತ್ಯವೆಸಗುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ. ಈ ಇನ್ಸೂರನ್ಸ್ ಹಣವನ್ನು ತನ್ನ ಸ್ವ ಇಚ್ಛೆಯಿಂದಲೇ ನೋಮಿನಿಯಾಗಿ ತಮ್ಮ ಮತ್ತು ತಾಯಿಗೆ ಸಿಗುವ ಹಾಗೆ ಮಾಡಬೇಕು. ಹಾಗೆ ಮಾಡಿದರೆ ಅವರ ಕಷ್ಟಕ್ಕೆ ನಾನು ಸಣ್ಣ ಧನಸಹಾಯ ಮಾಡಿದಂತೆ ಆಗುತ್ತದೆ. ಆದ್ದರಿಂದ ನನ್ನ ತಮ್ಮ ರಾಧಾಕೃಷ್ಣ ಹಾಗೂ ತಾಯಿ ಸುಗಂಧಿಯವರಿಗೆ ಈ ಹಣ ಸಿಗುವಂತೆ ಮಾಡಲು ತನ್ನ ಸ್ವಂತ ಒಪ್ಪಿಗೆ ಇದೆ’ ಎಂದು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಸಹಿ ಮಾಡಿದ ಡೆತ್ ನೋಟ್ ಸ್ಥಳದಲ್ಲಿ ಪತ್ತೆಯಾಗಿದೆ.
ಅದರಲ್ಲಿ ಕರ್ಣಾಟಕ ಬ್ಯಾಂಕ್‌ನ ಮಂಚಿ ಶಾಖೆಯಲ್ಲಿರುವ ಅವರ ಅಕೌಂಟ್ ಸಂಖ್ಯೆಯನ್ನೂ ದಾಖಲಿಸಲಾಗಿದೆ. ತನಗೆ ಬರಬೇಕಿದ್ದ ಹಣ, ತಾನು ಪಡೆದುಕೊಂಡ ಹಣ ಸೇರಿದಂತೆ ಎಲ್ಲ ವನ್ನೂ ಡೆತ್ ನೋಟಿನಲ್ಲಿ ಉಲ್ಲೇಖಿಸಿ, ಆರ್ಥಿಕ ಸಂಕಷ್ಟವೇ ಸಾವಿಗೆ ಕಾರಣ ಎಂದಿರುವ ಪದ್ಮನಾಭ, ತನ್ನ ಜೊತೆಗೆ ಪತ್ನಿ-ಮಕ್ಕಳ ಜೀವ ತೆಗೆದದ್ದು ಯಾಕೆ ಎಂಬುದೇ ಅವರ ಆತ್ಮೀಯರ ಪ್ರಶ್ನೆ.
ದ.ಕ. ಜಿಲ್ಲಾ ಎಸ್ಪಿ ಡಾ. ಶರಣಪ್ಪ ಎಸ್.ಡಿ., ಹೆಚ್ಚುವರಿ ಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಬಂಟ್ವಾಳ ಉಪ ವಿಭಾಗದ ಎಎಸ್ಪಿರಾಹುಲ್‌ಕುಮಾರ್, ವೃತ್ತ ನಿರೀಕ್ಷಕ ಬೆಳ್ಳಿಯಪ್ಪ, ಗ್ರಾಮಾಂತರ ಎಸ್ಸೈ ರಕ್ಷಿತ್ ಗೌಡ, ನಗರ ಠಾಣಾ ಎಸ್ಸೈ ನಂದಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪೂರ್ವಯೋಜಿತ ಕೃತ್ಯ ಶಂಕೆ..?
ಪದ್ಮನಾಭ ನಾಯಕ್ ನಿನ್ನೆ ರಾತ್ರಿ ತನ್ನ ತಾಯಿಯನ್ನು ಸಮೀಪದಲ್ಲಿರುವ ತನ್ನ ತಮ್ಮನ ಮನೆಗೆ ಕಳುಹಿಸಿದ್ದರು. ಆ ಬಳಿಕ ಪತ್ನಿ ಮತ್ತು ಮಕ್ಕಳ ಕೊಲೆಗೈದಿ ರುವುದರಿಂದ ಪೂರ್ವ ಯೋಜಿತ ಕೃತ್ಯ ವೆಂಬ ಶಂಕೆ ಮೂಡಿಸಿದೆ. ಡೆತ್ ನೋಟ್, ನೇಣು ಹಾಕಿಕೊಳ್ಳಲು ಬಳಸಿದ ಹೊಸ ನೈಲಾನ್ ಹಗ್ಗ, ಹೊಸಮಚ್ಚು ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಸಾಕ್ಷಿಗಳಾಗಿವೆ. ಬರೆದಿಟ್ಟಿರುವ ಪತ್ರವೂ ಇದಕ್ಕೆ ಪುಷ್ಟಿ ನೀಡಿದ್ದು, ಡೆತ್ ನೋಟ್ ಪೊಲೀಸರ ವಶದಲ್ಲಿದೆ. ಮನೆಯೊಳಗಡೆ ಎರಡು ಮದ್ಯದ ಬಾಟಲಿ ಪತ್ತೆಯಾಗಿದ್ದು, ಮದ್ಯ ಸೇವಿಸಿ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಬಹು ಆಯಾಮಗಳಿಂದ ತನಿಖೆ: ಎಸ್ಪಿ
ಮೂವರ ಕೊಲೆ ಮತ್ತು ಹಾಗೂ ಓರ್ವನ ಆತ್ಮಹತ್ಯೆ ಪ್ರಕರಣದ ಕುರಿತಾಗಿ ಬಹು ಆಯಾಮಗಳಿಂದ ತನಿಖೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪಎಸ್.ಡಿ. ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಸುದ್ಧಿಗಾರರಲ್ಲಿ ಮಾತನಾಡಿದ ಅವರು, ಮೃತ ಪುಷ್ಪಾವತಿಯ ಸಹೋದರ ಶಿವರಾಮ ಪ್ರಭು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕೌಟುಂಬಿಕ ಹಾಗೂ ಆರ್ಥಿಕ ಸಮಸ್ಯೆಯ ಕುರಿತಾಗಿ ತನಿಖೆ ನಡೆಸುವುದಾಗಿ ತಿಳಿಸಿದರು.
ಪದ್ಮನಾಭ ಮಂಗಳವಾರ ರಾತ್ರಿ ಎಲ್ಲಿಗೋ ಹೋಗುವುದಾಗಿ ತಿಳಿಸಿ ತನ್ನ ತಾಯಿಯನ್ನು ಸಹೋದರ ರಾಧಾಕೃಷ್ಣ ನ ಮನೆಗೆ ಕಳುಹಿಸಿದ್ದರು. ಅವರು ಪತ್ನಿ ಮಕ್ಕಳೊಂದಿಗೆ ರಾತ್ರಿ ಮನೆಯಿಂದ ತೆರಳಿದ್ದರೇ, ಹೋಗಿದ್ದರೆ ಅದು ಎಲ್ಲಿಗೆ, ಎಷ್ಟು ಹೊತ್ತಿಗೆ ಹಿಂದಿರುಗಿ ಬಂದಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಘಟನೆ ಎಷ್ಟು ಹೊತ್ತಿಗೆ ನಡೆಯಿತು ಎಂಬ ಬಗ್ಗೆಯೂ ಮರಣೋತ್ತರ ಪರೀಕ್ಷಾ ವರದಿಯ ಬಳಿಕ ತನಿಖೆ ಚುರುಕುಗೊಳಿಸಲಾಗುವುದು ಎಂದ ಎಸ್ಪಿ, ಮನೆಯಲ್ಲಿ ದೊರೆತ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.