ಮಂಗಳೂರು, ಸೆ.23: ಕಳೆದ 17 ವರುಷಗಳಲ್ಲಿ ಕೈದಿಗಳನ್ನು ಕಲಾವಿದರನ್ನಾಗಿಸಿದ ರಂಗಕರ್ಮಿಗಳ ಸಾಧನೆ ಸಮಾಜಕ್ಕೆ ಮಹತ್ವದ ಕೊಡುಗೆಯಾಗಿದೆ. ರಂಗಭೂಮಿ ಇಂದಿಗೂ ನಾಡಿನ ಜೀವಂತ ಕಲಾ ಮಾಧ್ಯಮ. ಅದರ ಮೂಲಕ ಸಿಗುವ ಆನಂದ ಇತರ ಮಾಧ್ಯಮಗಳಿಗೆ ಸರಿಸಾಟಿಯಾಗಲಾರದು ಎಂದು ಹಿರಿಯ ರಂಗಕರ್ಮಿ, ಧಾರಾವಾಹಿ ನಿರ್ಮಾಪಕ, ಸಿನೆಮಾ ನಿರ್ದೇಶಕ ಸದಾನಂದ ಸುವರ್ಣ ತಿಳಿಸಿದರು.
ಕರ್ನಾಟಕ ಕಾರಾಗೃಹ ಇಲಾಖೆಯ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮೈಸೂರಿನ ಸಂಕಲ್ಪ ಕಲಾ ಸಂಘ ಕೈದಿಗಳಿಗೆ ತರಬೇತಿ ನೀಡಿ ನಾಟಕ ಪ್ರದರ್ಶಿಸುತ್ತಿರುವ ‘ಜೈಲಿನಿಂದ ಜೈಲಿಗೆ ರಂಗಯಾತ್ರೆ’ಯ ಅಂಗವಾಗಿ ನಗರದ ಡಾನ್ ಬೋಸ್ಕೊ ಸಭಾಂಗಣದಲ್ಲಿ 3 ದಿನಗಳ ಕಾಲ ನಡೆಯಲಿರುವ ನಾಟಕ ಕಾರ್ಯಕ್ರಮದಲ್ಲಿ ಮಂಗಳವಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯರು ಯಾರೂ ಹುಟ್ಟಿನಿಂದ ಅಪರಾಧಿಗಳಲ್ಲ. ಸಮಾಜದಲ್ಲಿ ಕೆಲವೊಮ್ಮೆ ನಿರ್ಮಾಣವಾಗುವ ಸನ್ನಿವೇಶಗಳಿಗೆ ನೀಡುವ ಪ್ರತಿಕ್ರಿಯೆಯಿಂದ ಹಲವರು ಅಪರಾಧಿಗಳಾಗಿ ಜೈಲು ಸೇರುತ್ತಾರೆ. ಇಂತಹ ಕೈದಿಗಳನ್ನು ಮಾನವೀಯ ದೃಷ್ಟಿಕೋನದಿಂದ ನೋಡುವುದರಿಂದ ಅವರಲ್ಲೂ ಕಲಾವಿದನನ್ನು ಹುಡುಕಲು ಸಾಧ್ಯವಾಗಿದೆ. ಇಂತಹ ರಂಗ ಚಟುವಟಿಕೆಯಲ್ಲಿ ತೊಡಗಿದ ಕೈದಿಗಳು ಸನ್ನಡತೆಯ ಮೂಲಕ ಬಿಡುಗಡೆಗೊಳ್ಳುತ್ತಿರುವುದು ಕಲಾವಿದರ ಸಾಧನೆ ಎಂದು ಸದಾನಂದ ಸುವರ್ಣ ಶ್ಲಾಘಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ಮಹಾಬಲೇಶ್ವರ ಎಂ.ಎಸ್., ಹದಿನೇಳು ವರ್ಷಗಳಲ್ಲಿ 500 ಕೈದಿಗಳಿಗೆ ತರಬೇತಿ ನೀಡಲಾಗಿದ್ದು, ಈ ಪೈಕಿ 200 ಕೈದಿಗಳು ಸನ್ನಡತೆ ಗಾಗಿ ಬಿಡುಗಡೆಯಾಗುತ್ತಿರುವುದು ಶ್ಲಾಘನೀಯ ಎಂದರು.
ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರಾಗೃಹದಲ್ಲಿ ನಾಟಕ ತರಬೇತಿಯ ನಂತರ ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳ್ಳುವ ಕೈದಿಗಳ ಸಂಖ್ಯೆ ಹೆಚ್ಚಿದೆ. ಬಿಡುಗಡೆಗೊಂಡ ಬಳಿಕವೂ ಕೆಲವು ತಿಂಗಳು ಕೈದಿಗಳನ್ನು ಸೇರಿಸಿ ನಾಟಕ ಪ್ರದರ್ಶನ ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಓಬಳೇಶ್ವರ, ಅತಿಥಿಯಾಗಿ ಅನಿಲ್ ಬೇಕಲ್ ದೀಪಕ್ ಮೈಸೂರು ಮೊದಲಾದವರು ಉಪಸ್ಥಿತರಿದ್ದರು.