ಉಡುಪಿ: ಸಾಸ್ತಾನದ ಪೇಟೆಯ ಸಮೀಪವಿರುವ ಮಂದಾರ ಫ್ಯಾನ್ಸಿ ಸ್ಟೋರ್ ಎಂಬ ಅಂಗಡಿಯೊಂದಕ್ಕೆ ಆ.27ರ ರಾತ್ರಿ ಬೆಂಕಿ ಹಚ್ಚಿದ್ದು ಮರುದಿನ ಬೆಳಿಗ್ಗೆ (ಆ.28) ಘಟನೆ ಬೆಳಕಿಗೆ ಬಂದಿತ್ತು. ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಪೈಕಿ ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೋಟದ ಬಾರಿಕೆರೆ ನಿವಾಸಿಗಳಾದ ಶರತ (22) ಹಾಗೂ ವಿಘ್ನೇಶ್ ಕಾಂಚನ್ (20) ಬಂಧಿತ ಆರೋಪಿಗಳಾಗಿದ್ದು, ಪ್ರಕರಣದ ಪ್ರಮುಖ ರುವಾರಿ ಅಭಿಷೇಕ್ ಹಾಗೂ ಫ್ಲ್ಯಾನ್ ನಡೆಸಿದ ಭರತ್ ಹಾಗೂ ಶಶಿ ಎಂಬ ಮೂವರು ತಲೆಮರೆಸಿಕೊಂಡಿದ್ದಾರೆ.
ಪೂರ್ವ ದ್ವೇಷದ ಹಿನ್ನಲೆಯಲ್ಲಿ ಕ್ರತ್ಯ: ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಪ್ರವೀಣ್ ಎನ್ನುವವರಿಗೆ ಸೇರಿದ ಈ ಫ್ಯಾನ್ಸಿ ಅಂಗಡಿ ಇದಾಗಿದ್ದು ಕಳೆದ ಎಂಟು ತಿಂಗಳಿನ ಹಿಂದೆ ಶಿವರಾತ್ರಿ ದಿನದಂದು ಕಳ್ಳತನ ಪ್ರಕರಣವೊಂದರಲ್ಲಿ ಅಭಿಷೇಕ್ ಎಂಬಾತ ತನ್ನ ಸ್ನೇಹಿತನೊಂದಿಗೆ ಪ್ರವೀಣನಿಗೆ ಸಿಕ್ಕಿಹಾಕಿಕೊಂಡಿದ್ದು ಈ ವೇಳೆ ಅವರು ಈತನಿಗೆ ಹೊಡೇದಿದ್ದರಂತೆ, ಅಲ್ಲಿನಿಂದ ಅದೇ ದ್ವೇಷವನ್ನು ಬೆಳೆಸಿದ್ದ ಈತ ಪ್ರವೀಣನಿಗೆ ಶಾಸ್ತಿ ಮಾಡುವ ಬಗ್ಗೆ ಹಲವರಲ್ಲಿ ಕೇಳೀಕೊಂಡು ತಿರುಗಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ತನ್ನ ಸ್ನೇಹಿತರ ಬಳಿಯೂ ಚರ್ಚಿಸಿದ್ದ ಈತ ಎಷ್ಟೇ ಖರ್ಚಾದರೂ ಆತನನ್ನು ನೆಮ್ಮಡಿಯಾಗಿ ಬದುಕಲು ಬಿಡಬಾರದೆಂದು ಹೇಳಿಕೊಂಡಿದ್ದ ಎನ್ನಲಾಗಿದೆ. ಇದೇ ದ್ವೇಷವನ್ನು ಮುಂದುವರಿಸಿದ್ದ ಅಭಿಷೇಕ್ ಸಮಯಕ್ಕಾಗಿ ಕಾಯುತ್ತಿದ್ದು ಆ.26 ರಂದು ಹಿಂದೂ ಸಂಘಟನೆಯ (ಅಂಗಡಿ ಮಾಲೀಕ) ಪ್ರವೀಣ ಹಾಗೂ ಕೆಲವು ಅನ್ಯಕೋಮಿನ ಯುವಕರಿಗೆ ಘರ್ಷಣೆ ಉಂಟಾಗಿತ್ತು. ಇದನ್ನೇ ದಾಳವನ್ನಾಗಿ ಬಳಸಿಕೊಂಡ ಅಭಿಷೇಕ್ ತನ್ನ ಗೆಳೆಯ ಶರತ್ ಎಂಬಾತನಿಗೆ ಅಂಗಡಿಗೆ ಬೆಂಕಿ ಹಾಕಲು ಸುಫಾರಿ ನೀಡಿದ್ದ.
ಮದ್ಯ ಕುಡಿಸಿ ಬೆಂಕಿ ಹಾಕಿಸಿದ: ಪ್ರವೀಣನ ಬಗ್ಗೆ ದ್ವೇಷ ಕಾರುತ್ತಿದ್ದ ಅಭಿಷೇಕ್ ಪ್ರವೀಣನ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಾಕಿಸಿ ಅದನ್ನು ಕೋಮು ಗಲಭೆಯೆಂಬಂತೆ ಸ್ರಷ್ಟಿಸಲು ಎಲ್ಲಾ ಫ್ಲಾನ್ ಮಾಡಿದ್ದ. ಇದಕ್ಕೆ ಭರತ್, ಶಶಿ ಎಂಬಿಬ್ಬರ ಸಹಕಾರವನ್ನು ಪಡೆದು ಬೆಂಕಿ ಹಾಕಲು ಕೋಟದ ಶರತ್ ಎಂಬಾತನಿಗೆ ತಿಳಿಸಿದ್ದ. ಅಂತೆಯೇ ಶರತನ ಸ್ನೇಹಿತನಾದ ವಿಘ್ನೇಶ್ ಕೂಡ ಇದರಲ್ಲಿ ಭಾಗಿಯಾಗಿದ್ದ. ಆ.27 ರಾತ್ರಿ ಇವರೆಲ್ಲರು ಬ್ರಹ್ಮಾವರದ ಮದ್ಯದಂಗಡಿಯಲ್ಲಿ ಚೆನ್ನಾಗಿ ಕುಡಿಯುತ್ತಾರೆ. ಅಲ್ಲಿ ತಮ್ಮ ಸ್ಕೇಚ್ ರೂಪಿಸಿದ ಇವರು ಶರತ್ ಹಾಗೂ ವಿಘ್ಹ್ನೇಶ್ ಎಂಬವರ ಬಳಿ ತಾನು ಬೆಂಕಿ ಹಚ್ಚಿ ಬನ್ನಿ, ನಾವು ಮೂವರು ಕುಂದಾಪುರ ಲಾಡ್ಜಿನಲ್ಲಿ ತಂಗಿರುತ್ತೇವೆಂದು ತಿಳಿಸುತ್ತಾರೆ. ಈತನ ಅಣತಿಯಂತೆ ಇಬ್ಬರು ಚೆನ್ನಾಗಿ ಮದ್ಯ ಸೇವಿಸಿ 2 ಲೀಟರ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಸಾಸ್ತಾನದತ್ತ ಶರತನ ಬೈಕಿನಲ್ಲಿ ಬರುತ್ತಾರೆ. ಶರತ ಬೈಕಿನಲ್ಲಿಯೇ ಕುಳಿತಿದ್ದು, ವಿಘ್ನೇಶ್ ಪ್ರವೀಣನ ಅಂಗಡಿಯತ್ತ ತೆರಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಯೇ ಬಿಡುತ್ತಾನೆ. ಇಬ್ಬರೂ ಬೈಕಿನಲ್ಲಿ ಕುಂದಾಪುರ ಲಾಡ್ಜಿಗೆ ತೆರಳಿ ಉಳಿದ ಮೂವರನ್ನು ಸೇರಿಕೊಳ್ಳುತ್ತಾರೆ.
ಖತರ್ನಾಕ್ ಸ್ಕೆಚ್: ಪರಾರಿಯಾಗಿರುವ ಆರೋಪಿಗಳ ಪೈಕಿ ಭರತ್ ಎಂಬಾತ ನಟೋರಿಯಸ್ ಆಗಿದ್ದು ಕೋಟ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ. ಪ್ರವೀಣ ಹಾಗೂ ಶಶಿ ಎನ್ನುವವರು ಕೂಡ ಸಣ್ಣಪುಟ್ಟ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದರು. ಬಂಧಿತ ಆರೋಪಿಗಳಿಬ್ಬರು ಎಸ್.ಎಸ್.ಎಲ್.ಸಿ. ಫೇಲ್ ಆದ ಬಳಿಕ ಸಣ್ಣಪುಟ್ಟ ಕೂಲಿ ಕೆಲಸ ಮಾಡಿಕೊಂಡಿದ್ದರು. ಅದ್ಯೇಗೋ ಈ ಐವರು ವರ್ಷಗಳ ಹಿಂದೆ ಒಗ್ಗೂಡಿದ್ದು ಬಳಿಕ ಸ್ನೇಹ ಬೆಳೆಸಿಕೊಂಡಿದ್ದರು. ಪ್ರವೀಣನ ಬಗ್ಗೆ ದ್ವೇಷ ಸಾಧಿಸುವ ಸ್ಕೇಚ್ ರೂಪಿಸುವ ವೇಳೆ ಸಿನಿಮೀಯ ಮಾದರಿಯಲ್ಲಿ ತಂತ್ರ ಮಾಡಿದ್ದರು. ಯಾವುದೇ ಕಾರಣಕ್ಕೂ ಮೊಬೈಲ್ ಉಪಯೋಗಿಸಬಾರದು, ಮುಖಕ್ಕೆ ಬಟ್ಟೆ ಸುತ್ತಿಕೊಂಡಿರಬೇಕು, ಹೆದ್ದಾರಿಯಲ್ಲಿ ಸಂಚರಿಸಿದರೇ ತೊಂದರೆಯಾಗಬಹುದೆಂಬ ಕಾರಣಕ್ಕೆ ಬಹುತೇಕ ಮೀನುಗಾರಿಕಾ ರಸ್ತೆ (ಒಳರಸ್ತೆ) ಬಳಸಿದ್ದರು. ಸಿ.ಸಿ. ಕ್ಯಾಮೆರಾ ಭಯ ಹೊಂದಿದ್ದ ಇವರು ಕ್ಯಾಮೆರಾ ಬಗ್ಗೆ ಬಹಳಷ್ಟು ಮುಂಜಾಗ್ರತೆ ವಹಿಸಿದ್ದರು. ಅಲ್ಲದೇ ಇದಕ್ಕೆ ಕೋಮು ಬಣ್ಣ ಬಳಿಯುವ ಬಗ್ಗೆಯೂ ಕೆಲಸ ಮಾಡಿದ್ದರೆನ್ನಲಾಗಿದೆ.
ಪೊಲೀಸರಿಗೆ ಸುಳಿವು-ಆರೋಪಿಗಳೆಲ್ಲರೂ ಪರಾರಿ:
ಬೆಂಕಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋಟ ಪೊಲೀಸರು ಆರೋಪಿಗಳ ಪತ್ತೆಗಾಗಿ ವ್ಯಾಪಕ ಬಲೆಬೀಸಿ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದರು. ಪ್ರಕರಣ ಕೋಮು ಬಣ್ಣ ಪಡೆದು ಹಿಂದೂ ಸಂಘಟನೆಯವರು ಪ್ರತಿಭಟನೆಯನ್ನು ನಡೆಸಿ ಪೊಲೀಸರಿಗೆ ಇನ್ನಷ್ಟು ಒತ್ತಡ ಹೇರಿದ್ದರು. ಇದೇ ಸಂದರ್ಭ ಪೊಲೀಸರಿಗೆ ಸಿಕ್ಕ ಮಾಹಿತಿಯಂತೆ ಪ್ರಕರಣದ ಆರೋಪಿಗಳ ಪೈಕಿ ಶಶಿ ಎಂಬಾತನನ್ನು ಸೆ. ೭ರಂದು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಹೆಚ್ಚಿನ ತನಿಖೆಗೆ ಕರೆದಾಗಲೆಲ್ಲಾ ಠಾಣೆಗೆ ಬರುವಂತೆಯೂ ಹೇಳುತ್ತಾರೆ. ಆದರೇ ಶಶಿ ಅಂದು ಠಾಣೆಯಿಂದ ವಾಪಾಸಾದವನೇ ತನ್ನೆಲ್ಲ ಸ್ನೇಹಿತರಿಗೆ ಈ ವಿಚಾರ ತಿಳಿಸಿ ನಾವಿನ್ನು ಊರಲ್ಲಿಯೇ ಇದ್ದರೇ ಪೊಲೀಸರು ಬಾಯ್ಬಿಡಿಸುವುದು ಗ್ಯಾರೆಂಟಿ, ನಾವೆಲ್ಲಾ ಸ್ವಲ್ಪ ದಿನ ಊರು ಬಿಡೋಣ ಎಂದು ಕಾರ್ಯತಂತ್ರ ರೂಪಿಸುತ್ತಾರೆ. ಅದರಂತೆಯೇ ವಿಘ್ನೇಶ್ ಮತ್ತು ಶರತನಿಗೆ 500 ರೂ. ನೀಡಿ ನಮ್ಮ ನಿಮ್ಮ ಸಂಬಂಧ ಇಂದಿಗೆ ಸಾಕು ನೀವು ಸ್ವಲ್ಪ ದಿನ ಎಲ್ಲಾದರೂ ಹೋಗಿರಿ ಎಂದು ಅವರವರ ದಾರಿಯತ್ತ ಸಾಗುತ್ತಾರೆ.
ಆರೋಪಿಗಳು ಅರೆಸ್ಟ್: ಸೆ.7 ರಂದು ಅಭಿಷೇಕ್ ನೀಡಿದ 500ರೂ ಪಡೆದು ಆರೋಪಿಗಳಿಬ್ಬರು ಸಾಗರಕ್ಕೆ ತೆರಳುತ್ತಾರೆ. ಅಲ್ಲಿ ಎರಡು ವಾರಗಳ ಕಾಲವಿದ್ದ ಅವರು ಹಣ ಖರ್ಚಾದ ಬಳಿಕ ಮಂಗಳವಾರ ಕೋಟದತ್ತ ಬರುತ್ತಾರೆ, ಆರೋಪಿಗಳು ಕೋಟಕ್ಕೆ ಬಂದ ಬಗ್ಗೆ ಖಚಿತ ವರ್ತಮಾನದಂತೆ ಪೊಲೀಸರು ಬಲೆಬೀಸಿ ಆರೋಪಿಗಳಿಬ್ಬರನ್ನು ಪತ್ತೆಹಚ್ಚಿ ತನಿಖೆ ನಡೆಸುವ ವೇಳೆ ಇಡೀ ಪ್ರಕರಣ ಬಯಲಾಗುತ್ತದೆ.
ಮೂವರಿಗಾಗಿ ಶೋಧ: ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳು ಸದ್ಯ ಅರೆಸ್ಟ್ ಆಗಿದ್ದು, ಇದರ ರುವಾರಿಗಳಾದ ಮೂವರು ಸದ್ಯ ತಲೆಮರೆಸಿಕೊಂಡಿದ್ದಾರೆ. ಬ್ರಹ್ಮಾವರ ವ್ರತ್ತನಿರೀಕ್ಷಕ ಅರುಣ ನಾಯ್ಕ್ ಮಾರ್ಗದರ್ಶನದಲ್ಲಿ ಕೋಟ ಠಾಣೆಯ ಪಿಎಸ್.ಐ. ಕಬ್ಬಾಳ್ ರಾಜ್ ಮತ್ತು ತಂಡ ಉಳಿದ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.