ಮಂಗಳೂರು, ಸೆ.28: ಜಿಲ್ಲೆಯಲ್ಲಿ ವ್ಯಾಪಾಕವಾಗಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿ (ಗೂಂಡಾಗಿರಿ) ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೆಪ್ಟೆಂಬರ್ 29 ರಂದು ಪಾದಯಾತ್ರೆ ಕೈಗೊಳ್ಳಲಾಗುವುದು. ಪಾದಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಚಾಲನೆ ನಿಡಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.
ಸೋಮವಾರ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2.30ಕ್ಕೆ ನಗರದ ಲಾಲ್ ಬಾಗ್‌ನ ಗಾಂಧಿ ಪ್ರತಿಮೆ ಬಳಿಯಿಂದ ರ್‍ಯಾಲಿ ಆರಂಭವಾಗಿ ಕಂಕನಾಡಿ ಮೈದಾನದಲ್ಲಿ ಸಮಾರೋಪಗೊಳ್ಳಲ್ಲಿದೆ ಎಂದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅನೈತಿಕ ಪೊಲೀಸ್‌ಗಿರಿಯಿಂದಾಗಿ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೋಮುವಾದಿಗಳು ನಡೆಸುತ್ತಿರುವ ಇಂಥಹ ಚಟುವಟಿಕೆಗಳ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಲು ಈ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಿಥುನ್ ರೈ ತಿಳಿಸಿದರು.
ಕೋಮುವಾದ ಒಂದು ಸಾಂಕ್ರಾಮಿಕ ರೋಗ, ಇದನ್ನು ತಡೆಯುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಹಾಗಾಗಿ ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ಬದಲಾಗಿ ಕೋಮುವಾದ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಲು ಈ ರ್‍ಯಾಲಿ ಹಮ್ಮಿಕೊಂಡಿದ್ದೇವೆ ಎಂದರು.
ಯುವ ಕಾಂಗ್ರೆಸ್ ಅನೈತಿಕ ಗೂಂಡಾಗಿರಿ ವಿರುದ್ಧ ಪ್ರತಿಭಟನೆ ನಡೆಸಲು ಇಷ್ಟು ಸಮಯ ಯಾಕೆ ತೆಗೆದುಕೊಂಡಿತ್ತು ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಿಥುನ್ ರೈ ಅವರು, ಯುವ ಕಾಂಗ್ರೆಸ್ ಸೂಕ್ತ ಸಮಯದಲ್ಲಿ ಮತ್ತು ಅಗತ್ಯವಿರುವ ಸಂಧರ್ಭದಲ್ಲಿ ಈ ರೀತಿಯ ಎಲ್ಲಾ ಘಟನೆಗಳನ್ನು ಖಂಡಿಸಿದೆ ಎಂದು ಹೇಳಿದರು.
ಮೋದಿ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯ :
ರಾಷ್ಟ್ರ ಧ್ವಜದ ಕಂಬದಲ್ಲಿ ಯುವ ಕಾಂಗ್ರೆಸ್ ದ್ವಜ ಹಾರಿಸಿದ್ದಕ್ಕೆ ನನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಬಿಜೆಪಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಧ್ವಜದಲ್ಲಿ ತಮ್ಮ ಹಸ್ತಾಕ್ಷರ ಮಾಡಿದ ಸಂಧರ್ಭದಲ್ಲಿ ಯಾಕೆ ಮೌನವಾಗಿದೆ ಎಂದು ಪ್ರಶ್ನಿಸಿದರು. ಭಾರತದ ರಾಷ್ಟ್ರೀಯ ಧ್ವಜದಲ್ಲಿ ತನ್ನ ಸಹಿಯನ್ನು ಹಾಕಿದ ಮೋದಿ ವಿರುದ್ಧ ಎಫ್ಐಆರ್ ದಾಖಲಿಸ ಬೇಕು, ಇಲದೇ ಹೋದರೆ ಈ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.
ಎತ್ತಿನಹೊಳೆ ಯೋಜನೆ ವಿರುದ್ಧ ಶೀಘ್ರದಲ್ಲೇ ಯುವ ಕಾಂಗ್ರೆಸ್‌ನಿಂದ ಹೋರಾಟ :
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಎತ್ತಿನಹೊಳೆ ಯೋಜನೆ ವಿರುದ್ಧ ಶೀಘ್ರವೇ ಹೋರಾಟಕ್ಕಿಳಿಯಲಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರು ಜಿಲ್ಲೆಗೆ ಮಾರಕವಾಗಿರುವ ಯೋಜನೆಯ ವಿರುದ್ಧ ಯುವ ಕಾಂಗ್ರೆಸ್ ನಿಲುವೇನು? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಿಥುನ್ ರೈ, ಎತ್ತಿನಹೊಳೆ ಯೋಜನೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಹೋರಾಟ ಕೈಗೊಳ್ಳಲಾಗುವುದು. ನದಿ ತಿರುವಿನಿಂದಾಗುವ ಅಪಾಯದ ಕುರಿತಂತೆ ಪಕ್ಷದ ಸಚಿವ, ಶಾಸಕರಿಗೂ ಮನವರಿಕೆ ಮಾಡುವ ಕೆಲಸ ಮಾಡುವುದಾಗಿ ಹೇಳಿದರು.
ಹೋರಾಟದ ರೂಪುರೇಷೆ ಹೇಗಿರಬೇಕು ಎಂದು ಚರ್ಚಿಸಿ, ದಿನಾಂಕ ನಿಗದಿಪಡಿಸಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಯುವ ಕಾಂಗ್ರೆಸ್ ಎತ್ತಿನಹೊಳೆ ಯೋಜನೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಉಪ್ಪಿನಂಗಡಿ ಬಂದ್ ವೇಳೆ ಕೂಡಾ ಯುವ ಕಾಂಗ್ರೆಸ್ ಹೋರಾಟದಲ್ಲಿ ಪಾಲ್ಗೊಂಡಿತ್ತು. ಪಕ್ಷದ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟಕ್ಕಿಳಿಯುವುದಾಗಿ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಪೋರೆಟರ್ ಪ್ರವೀಣ್ ಚಂದ್ರ ಆಳ್ವ, ಸೇರಿದಂತೆ ಯೂತ್ ಕಾಂಗ್ರೇಸನ ಮತ್ತಿತ್ತರ ಪದಾಧಿಕಾರಿಗಳು ಉಪಸ್ಥಿತರಿದ್ದರು.