ಮಂಗಳೂರು, ಸೆ.30 : ಪ್ರವಾಸೋದ್ಯಮ ಇಲಾಖೆ, ದ.ಕ. ಜಿಲ್ಲಾಡಳಿತ ಮತ್ತು ವಿಶ್ವ ವಿದ್ಯಾನಿಲಯ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದ ವಿವಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ , ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ವಿಶೇಷ ಒತ್ತು ನೀಡಲಾಗಿದೆ. ಅಲ್ಲದೆ, ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಡಿಸೆಂಬರ್ 4 ಮತ್ತು 5ರಂದು ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಉದ್ಯೋಗ ಮೇಳವನ್ನು ಯಶಸ್ವಿಯಾಗಿ ಸಂಘಟಿಸುವ ನೆಲೆಯಲ್ಲಿ ಈಗಾಗಲೇ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಮೊದಲ ಹಂತದ ಪೂರ್ವಭಾವಿ ಸಭೆಗಳಾಗಿದ್ದು, ಶೀಘ್ರದಲ್ಲೇ ಇನ್ನೊಂದು ಸಭೆ ಆಗಲಿದೆ ಎಂದು ಅವರು ಹೇಳಿದರು. ಈ ಸಂದರ್ಭ ದ.ಕ. ಜಿಲ್ಲಾ ಮಟ್ಟದ ಪ್ರವಾಸಿ ಕೇಂದ್ರಗಳ ಮಾಹಿತಿ ನೀಡುವ ನಕಾಶೆಯನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳಿಗೆ ಸಂಗೀತ ಪರಿಕರಗಳನ್ನು ವಿತರಿಸಲಾಯಿತು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜೆ.ಕ್ಲಿರ್ಡ್ ಲೋಬೊ ಪ್ರಾಸ್ತಾವಿಕವಾಗಿ ಮಾತನಾಡಿ, ತಲಪಾಡಿ, ಸೋಮೇಶ್ವರ, ಉಳ್ಳಾಲ, ಸುಲ್ತಾನ್ ಬತ್ತೇರಿ, ಸುರತ್ಕಲ್ ಸೇರಿ ಐದು ಕಡಲ ತೀರಗಳ ಅಭಿವೃದ್ಧಿಗೆ 13.72 ಕೋ.ರೂ. ವಿನಿಯೋಗಿಸ ಲಾಗುತ್ತಿದೆ ಎಂದರು.
ಶಾಸಕರಾದ ಮೊಯ್ದಿನ್ ಬಾವ, ಐವನ್ ಡಿಸೋಜ, ಮುಡಾ ಆಯುಕ್ತ ಮುಹಮ್ಮದ್ ನಝೀರ್, ಕೆಸಿಸಿಐ ಅಧ್ಯಕ್ಷ ರಾಮ್‌ಮೋಹನ್ ಪೈ ಮಾರೂರು ವಿವಿ ಕಾಲೇಜಿನ ಪ್ರಾಂಶುಪಾಲ ಡಾ.ಉದಯಕುಮಾರ ಎಂ.ಎ. ಉಪಸ್ಥಿತರಿದ್ದರು.
ಹೂಡಿಕೆದಾರರ ಸಮಾವೇಶ:
ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದಕ್ಕಾಗಿ ಶೀಘ್ರದಲ್ಲೇ ಮಂಗಳೂರಿನಲ್ಲಿ ಟೂರಿಸ್ಟ್ ಇನ್‌ವೆಸ್ಟರ್ ಮೀಟ್ ಆಯೋಜಿಸಲಾಗುವುದು. ಇದರಿಂದ ಹೆಚ್ಚಿನ ಬಂಡವಾಳ ಹೂಡಿಕೆಯಾಗಲಿದ್ದು, ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಭಿಪ್ರಾಯಿಸಿದರು.
ಈಗಾಗಲೇ ನಗರದಲ್ಲಿ 40 ಪಾರಂಪರಿಕ ಸ್ಥಳಗಳನ್ನು ಗುರುತಿಸಲಾಗಿದೆ. ಜಿಲ್ಲಾ ಪ್ರವಾಸಿ ಕೇಂದ್ರಗಳನ್ನು ಗುರುತಿಸಲಾಗಿದೆ. ನಗರದ ಪ್ರಮುಖ ಕೇಂದ್ರಗಳನ್ನೊಳಗೊಂಡ ಸಿಟಿ ಮ್ಯಾಪ್ ಕೂಡ ಶೀಘ್ರವೇ ಸಾರ್ವಜನಿಕರಿಗೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.