ಮಂಗಳೂರು, ಸೆ.30: ವನ್ಯಜೀವಿ ಸಪ್ತಾಹದ ಅಂಗವಾಗಿ ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಅ.4ರಂದು ಶ್ವಾನ, ಮಾರ್ಜಾಲ (ಬೆಕ್ಕು)ಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಂದು ಮಧ್ಯಾಹ್ನ 1ರಿಂದ 3ರವರೆಗೆ ಪಿಲಿಕುಳದ ಅರ್ಬನ್ ಹಾಥ್‌ನಲ್ಲಿ ಶ್ವಾನ ಮತ್ತು ಮಾರ್ಜಾಲ(ಬೆಕ್ಕು) ಪ್ರದರ್ಶನವಿದ್ದು, ವಿವಿಧೆಡೆಯಿಂದ ಜನತೆ ತಮ್ಮ ಸುಂದರವಾದ ಬೆಕ್ಕು, ಶ್ವಾನಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಥಮ ಸ್ಥಾನ ಗಳಿಸುವ ಶ್ವಾನಕ್ಕೆ 10 ಸಾವಿರ ರೂ., ದ್ವಿತೀಯ 7,500 ರೂ. ಹಾಗೂ ತೃತೀಯ 5 ಸಾವಿರ ರೂ. ಹಾಗೂ ಟ್ರೋಫಿಯನ್ನು ನಿಗದಿಪಡಿಸಲಾಗಿದೆ. ಮಾರ್ಜಾಲ ಪ್ರದರ್ಶನದಲ್ಲಿ ಪ್ರಥಮ 5 ಸಾವಿರ ರೂ. ಹಾಗೂ ದ್ವಿತೀಯ 3 ಸಾವಿರ ರೂ. ನಿಗದಿಪಡಿಸಲಾಗಿದೆ. ಇದೇ ಸಂದರ್ಭ ಪೊಲೀಸ್ ಶ್ವಾನಗಳ ವಿಶೇಷ ಕವಾಯತು ಕೂಡಾ ನಡೆಯಲಿದೆ ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎ.ಪ್ರಭಾಕರ ಶರ್ಮ ವಿವರಿಸಿದರು.
ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ, ಪ್ರಾಥಮಿಕ, ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಕೊಲಾಜ್ ಸ್ಪರ್ಧೆ, ಮೊಬೈಲ್ ಕಿರುಚಿತ್ರ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆ, ಮುಕ್ತ ರಸಪ್ರಶ್ನೆ ಸ್ಪರ್ಧೆ ಹೀಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಆಸಕ್ತರು ದೂ.ಸಂ.: 0824-2263300, ಮೊ.9980187057ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಪಿಲಿಕುಳ ಜೈವಿಕ ಉದ್ಯಾನ ವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇ ಶಕ ಡಾ.ಕೆ.ವಿ.ರಾವ್, ಪಶುಸಂಗೋಪನಾ ಇಲಾಖೆಯ ಡಾ.ತಿಪ್ಪೇ ಸ್ವಾಮಿ, ಪ್ರಮುಖರಾದ ಸುಬ್ಬಯ್ಯ ಶೆಟ್ಟಿ, ಎನ್. ಜಿ.ಮೋಹನ್, ಡಾ.ಶಿಲ್ಪಾ, ಡಾ.ವಸಂತ್ ಮತ್ತಿತರರು ಉಪಸ್ಥಿತರಿದ್ದರು.