ಮೂಡುಬಿದಿರೆ, ಅ.12: ಬಜರಂಗದಳದ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್‌ರಿಗೆ ಅಪರಿಚಿತ ವ್ಯಕ್ತಿಯೊಬ್ಬ ಅಂತರ್ಜಾಲದ ಮೂಲಕ ಕರೆ ಮಾಡಿ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ರಾತ್ರಿ ಸುಮಾರು 9:20ಕ್ಕೆ ಸೋಮನಾಥ್ ಕೋಟ್ಯಾನ್‌ರ ಮೊಬೈಲ್‌ಗೆ 007122833 ಸಂಖ್ಯೆಯ ಇಂಟರ್‌ನೆಟ್ ಕರೆ ಬಂದಾಗ ಸ್ವೀಕರಿಸಲಿಲ್ಲ ಎನ್ನಲಾಗಿದೆ. ನಂತರ ಮತ್ತೊಂದು ಕರೆ 9:22ಕ್ಕೆ ಅದೇ ಸಂಖ್ಯೆಯಿಂದ ಬಂದಾಗ ಸೋಮನಾಥ್ ಕರೆ ಸ್ವೀಕರಿಸಿದರು. ಆಗ ಅತ್ತ ಕಡೆಯಿಂದ ಕರೆ ಮಾಡಿದ ವ್ಯಕ್ತಿ, ತುಳುವಿನಲ್ಲಿ ಬೆದರಿಕೆ ಹಾಕಿದನೆನ್ನಲಾಗಿದೆ.
ಈ ಬಗ್ಗೆ ಸೋಮನಾಥ ಕೋಟ್ಯಾನ್ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ತುಳುವಿನಲ್ಲಿ ‘ಏರ್ ಸೋಮನಾಥೆನಾ?, ನಿನನ್ ಜೀವಡ್ ಬುಡ್ಪುಜಿ’ (ಯಾರು ಸೋಮನಾಥನಾ? ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ) ಎಂದು ಬೆದರಿಕೆ ಹಾಕಿರುವ ದುಷ್ಕರ್ಮಿ ತನ್ನ ಕೃತ್ಯಕ್ಕೆ ವಿದೇಶದಲ್ಲಿ ಲಭ್ಯವಾಗುವ ಇಂಟರ್‍ನೆಟ್ (ನಂಬರ್ : 007122833) ಕರೆಯನ್ನು ಬಳಸಿದ್ದಾನೆಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.
ದೂರು ಪಡೆದುಕೊಂಡಿರುವ ಮೂಡುಬಿದಿರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂಡುಬಿದಿರೆಯಲ್ಲಿ ಶುಕ್ರವಾರ ನಡೆದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಕೊಲೆಯ ನಂತರ ನಡೆದ ಗಲಭೆಗೆ ಸಂಬಂಧಿಸಿಯೇ ಈ ಬೆದರಿಕೆ ಕರೆ ಬಂದಿದೆಯೆಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿಲ್ಲವಾದರೂ, ಹಲವರನ್ನು ವಿಚಾರಣೆಗಾಗಿ ಪೊಲೀಸರು ಕರೆಸಿಕೊಂಡಿರುವುದು ತಿಳಿದುಬಂದಿದೆ.