ಮೂಡುಬಿದಿರೆ: ಮೂಡಬಿದ್ರೆಯಲ್ಲಿ ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಗೆ ವಿಹಿಂಪ ಮತ್ತು ಬಜರಂಗದಳ ಮೂಡುಬಿದಿರೆ ವತಿಯಿಂದ ಗುರುವಾರ ಪದ್ಮಾವತಿ ಕಲಾ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಪ್ರಶಾಂತ್ ಪೂಜಾರಿಯವರ ಕುಟುಂಬಕ್ಕೆ ಅರ್ಥಿಕ ನೆರವು ನೀಡುವ ಹಿನ್ನೆಲೆಯಲ್ಲಿ ಬಿಜೆಪಿ, ಸಂಘ ಪರಿವಾರ ಹಾಗೂ ವಿವಿಧ ಸಂಘಸಂಸ್ಥೆಗಳಿಂದ ಸಂಗ್ರಹಿಸಿದ 10 ಲಕ್ಷ ರೂ. ಮೊತ್ತದ ಚೆಕ್ಕನ್ನು ಆರ್‍ಎಸ್‍ಎಸ್ ಮಧ್ಯಕ್ಷೇತ್ರೀಯ ಪ್ರಮುಖ್ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಓಟ್ ಬ್ಯಾಂಕ್‍ಗೋಸ್ಕರ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡಿ, ಹಿಂದೂಗಳನ್ನು ಅವರ ವಿರುದ್ಧ ಎತ್ತಿಕಟ್ಟುತ್ತಿರುವುದುರಿಂದ ಕರಾವಳಿಯ ಸೌಹಾರ್ದ ನಾಶವಾಗುವಂತಾಗಿದೆ ಎಂದು ಆರೋಪಿಸಿದರು. ಜಿಲ್ಲೆಯ ಗೋವು ಹಾಗೂ ನಮ್ಮ ಮನೆಯ ಸ್ತ್ರೀಯರನ್ನು ರಕ್ಷಿಸಲು ಪ್ರತಿಯೊಬ್ಬರೂ ಹಿಂದುತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಪ್ರಭಾಕರ್ ಭಟ್ ಕರೆ ನೀಡಿದರು.
ಪ್ರಶಾಂತನ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ಪ್ರಶಾಂತ್‍ನ ಹಿಂದೂಪರ ಕೆಲಸಗಳು ಎಲ್ಲರಿಗೂ ಸ್ಫೂರ್ತಿ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಮೃತರ ಕುಟುಂಬಕ್ಕೆ ಸಂಘಪರಿವಾರ ಹಾಗೂ ಸಂಘ ಸಂಸ್ಥೆಗಳಿಂದ ಸಂಗ್ರಹಿಸಿದ ದೇಣಿಗೆಯ ವಿವರವನ್ನು ವಿಹಿಂಪ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅವರು ನೀಡಿದರು.
ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜಿ., ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್ ವೆಲ್, ವಿಹಿಂಪ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಮುಖಂಡರಾದ ಭುಜಂಗ ಕುಲಾಲ್, ಕೃಷ್ಣಮೂರ್ತಿ, ಬಿಜೆಪಿ ಮುಖಂಡರಾದ ಕೆ.ಪಿ.ಜಗದೀಶ ಅಧಿಕಾರಿ, ಉಮಾನಾಥ ಕೋಟ್ಯಾನ್, ಕೆ.ಪಿ.ಸುಚರಿತ ಶೆಟ್ಟಿ, ಪ್ರಶಾಂತ್ ತಂದೆ ಆನಂದ ಪೂಜಾರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಹಿಂಪ ಪ್ರಖಂಡ ಅಧ್ಯಕ್ಷ ಶ್ಯಾಮ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.