ಕನ್ನಡ ವಾರ್ತೆಗಳು

ಪಾಣೆಮಂಗಳೂರು 3 ಸೇತುವೆಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇದ್ದಕ್ಕೆ ಜಿಲ್ಲಾಧಿಕಾರಿ ಸೂಚನೆ.

Pinterest LinkedIn Tumblr

dc_visit_bntwallbrdg

ಬಂಟ್ವಾಳ, ಅ.16 : ತಾಲೂಕಿನಲ್ಲಿ ನೇತ್ರಾವತಿ ನದಿಗೆ ಕಟ್ಟಲಾಗಿರುವ ಮೂರು ಸೇತುವೆಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಬಂಟ್ವಾಳ ತಹಶೀಲ್ದಾರರಿಗೆ ತಾಕೀತು ಮಾಡಿದ್ದಾರೆ.

ನೇತ್ರಾವತಿ ನದಿಗೆ ಕಟ್ಟಲಾಗಿರುವ ಪಾಣೆಮಂಗಳೂರು ಹಳೆ ಸೇತುವೆ, ಹೊಸ ಸೇತುವೆ ಹಾಗೂ ರೈಲ್ವೇ ಸೇವೆಯ ಅಡಿಭಾಗದಲ್ಲೇ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕುರಿತ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಗುರುವಾರ ಬೆಳಗ್ಗೆ ಪಾಣೆಮಂಗಳೂರಿನ ನೇತ್ರಾವತಿ ನದಿಗೆ ಕಟ್ಟಲಾದ ಸೇತುವೆ ಪರಿಶೀಲನೆ ನಡೆಸಿದರು. ಮರಳುಗಾರಿಕೆಯಿಂದ ಸೇತುವೆಗಳಿಗೆ ಹಾನಿ ಸಂಭವಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಪ್ರತೀ ಸೇತುವೆಯ ಇಕ್ಕೆಲಗಳ ಸುಮಾರು 1ಕಿ.ಮೀ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ತಹಶೀಲ್ದಾರ್ ಪುರಂದರ ಹೆಗ್ಡೆಯವರಿಗೆ ಅವರು ಸೂಚಿಸಿದ್ದಾರೆ.

ಅಕ್ರಮ ಅವ್ಯಾಹತ: ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ನೇತ್ರಾವತಿ ಸೇತುವೆ ಅಡಿಭಾಗದಲ್ಲಿ ಹಾಡಹಗಲೇ ಎಗ್ಗಿಲ್ಲದೆ ಸಾಗುತ್ತಿದೆ. ಒಂದೆರಡು ಬಾರಿ ತಹಶೀಲ್ದಾರ್ ದಾಳಿ ನಡೆಸಿ ದಂಡ ವಿಧಿಸಿದ ಮರುದಿನದಿಂದಲೇ ಅಕ್ರಮವು ಮತ್ತೆ ಮುಂದುವರಿದಿದೆ. ಇದೀಗ ಜಿಲ್ಲಾಧಿಕಾರಿಯವರು ಸೇತುವೆ ಸುರಕ್ಷತೆ ಕುರಿತಾಗಿ ಹೆಚ್ಚಿನ ಆಸ್ಥೆ ವಹಿಸಿ, ಸೇತುವೆ ಆಸುಪಾಸಿನಲ್ಲಿ ಮರಳುಗಾರಿಕೆ ನಿಷೇಧಿಸಿಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಸೂಚಿಸಿದ್ದಾರೆ.

ಸೇತುವೆ ಸುರಕ್ಷತೆ ಮುಖ್ಯ ಪ್ರತಿನಿತ್ಯ ಸಾವಿರಾರು ಜನ ಓಡಾಡುವ ಸಂಪರ್ಕ ಸೇತುವೆಯನ್ನು ಸುರಕ್ಷಿತವಾಗಿರಿಸುವುದು ಮುಖ್ಯ. ಸೇತುವೆ ತಳಭಾಗದಲ್ಲೇ ಮರಳುಗಾರಿಕೆ ನಡೆಯುವ ಕುರಿತು ದೂರು ಬಂದಿದೆ. ಸೇತುವೆಗಳ ಸುರಕ್ಷತೆ ಬಗ್ಗೆ ಅಗತ್ಯ ಕ್ರಮ ಜರಗಿಸುವ ಬಗ್ಗೆ ಎ.ಸಿ. ಹಾಗೂ ತಹಶೀಲ್ದಾರರಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಯವರ ಸೂಚನೆಯ ಹಿನ್ನೆಲೆಯಲ್ಲಿ ಕಲಂ.ನಂ.133ರಂತೆ ನ್ಯಾಯಾಂಗ ಆದೇಶ ಹೊರಡಿಸಲಾಗುವುದು, ಆದೇಶ ಉಲ್ಲಂಘಿಸಿ ಮರಳುಗಾರಿಕೆ ನಡೆಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಪತ್ರಿಕೆಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರ ಭೇಟಿಯ ಸಂದರ್ಭ ಮಂಗಳೂರು ಸಹಾಯಕ ಆಯುಕ್ತ ಡಾ.ಡಿ.ಆರ್.ಅಶೋಕ್, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಲೋಕೋಪಯೋಗಿ ಇಲಾಖೆ ಹಾಗೂ ಗಣಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment