ಕನ್ನಡ ವಾರ್ತೆಗಳು

“ಮಂಗಳೂರು ಉದ್ಯೋಗ ಮೇಳ”ದ ಕಚೇರಿ ಉದ್ಘಾಟನೆ

Pinterest LinkedIn Tumblr

Jobfair_nwew_ofc

ಮಂಗಳೂರು, ಅ.17 : ನಗರದ ಹೊರವಲಯದ ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ.19 ಮತ್ತು 20ರಂದು ನಡೆಯಲಿರುವ ಮಂಗಳೂರು ಉದ್ಯೋಗ ಮೇಳದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.

ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಮೇಳದ ನಿಮಿತ್ತ ಈಗಾಗಲೇ ಹಲವಾರು ಸಭೆಗಳು ನಡೆದಿದ್ದು, ಅ.26ರಂದು ಪ್ರಮುಖ ಬಹುರಾಷ್ಟ್ರೀಯ ಕಂಪೆನಿಗಳ ಸಿಇಒಗಳ ಸಭೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಸಚಿವ ದೇಶಪಾಂಡೆ ಸಭೆಯಲ್ಲಿ ಭಾಗವಹಿಸಲಿದ್ದು, ಉದ್ಯೋಗ ಮೇಳಕ್ಕೆ ಪೂರಕವಾದ ಶಕ್ತಿ ತುಂಬುವ ಕಾರ್ಯ ಈ ಸಭೆಯ ಮೂಲಕ ಆಗಲಿದೆ ಎಂದವರು ಹೇಳಿದರು. ಮೇಳಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ (www.mangaluruudyogamela.com), ಪ್ರತ್ಯೇಕವಾದ ಇಮೇಲ್ ಐಡಿ (mangaluruudyogamela@gmail.com) ತೆರೆಯಲಾಗಿದೆ. ವಿವಿಧ ಸಮಿತಿಗಳನ್ನು ಕೂಡಾ ರಚಿಸಲಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಭಾಗವಹಿಸುವ ಕಂಪೆನಿಗಳು ಹಾಗೂ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಹಾಗೂ ಪೂರ್ವತಯಾರಿ ಕುರಿತಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮೇಳಕ್ಕೆ ಸಂಬಂಧಿಸಿ ಓರಿಯೆಂಟೇಶನ್ ಕಾರ್ಯಕ್ರಮ ನವೆಂಬರ್ 7 ಮತ್ತು 8ರಂದು ನಡೆಸಲಾಗುವುದು ಎಂದವರು ಈ ಸಂದರ್ಭ ತಿಳಿಸಿದರು.

ಉದ್ಯೋಗಾಕಾಂಕ್ಷಿಗಳಿಗೆ ಅವರ ವಿದ್ಯಾರ್ಹತೆ, ಅನುಭವ ಹಾಗೂ ಕೌಶಲ್ಯ ಸಾಮರ್ಥ್ಯಗಳ ಕುರಿತಂತೆ ಸಮಾಲೋಚನಾ ಸಭೆಯನ್ನೂ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಎಸ್ಪಿ ಡಾ. ಶರಣಪ್ಪ ಎಸ್.ಡಿ. ಜಿಪಂ ಸಿಇಒ ಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

‘ನಮ್ಮ ಕೈಯಲ್ಲಿ ನಮ್ಮ ಉದ್ಯೋಗ’
ಉದ್ಯೋಗ ಮೇಳವು ‘ನಮ್ಮ ಕೈಯಲ್ಲಿ ನಮ್ಮ ಉದ್ಯೋಗ’ ಎಂಬ ಘೋಷಣೆಯಡಿ ನಡೆಯಲಿದೆ. ಅರ್ಹ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಕಂಪೆನಿಗಳ ಮೂಲಕ ಉದ್ಯೋಗದ ಅವಕಾ ಶವನ್ನು ತೆರೆದಿಡುವ ವೇದಿಕೆಯಾಗಿ ಈ ಮೇಳ ಪರಿಣಮಿಸಲಿದೆ ಎಂದು ಸಚಿವ ರೈ ಹೇಳಿದರು.

ಮೇಳದ ವಿಶೇಷತೆಗಳು…
ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಉದ್ಯೋಗ ಆರಿಸಲು ನೆರವಾಗಲು ‘ಉದ್ಯೋಗ ಕೌಶಲ್ಯ ವರ್ಧನಾ ಕೇಂದ್ರ’ಗಳನ್ನು ತೆರೆಯುವುದು. ಭಾಗವಹಿಸುವ ಅಭ್ಯರ್ಥಿಗಳಿಗೆ ಉಚಿತ ಅವಕಾಶ. ಮೇಳದಲ್ಲಿ ಭಾಗವಹಿಸುವ ಕಂಪೆನಿ ಅಧಿಕಾರಿಗಳಿಗೆ ವಾಹನ ಮತ್ತು ತಂಗುವ ವ್ಯವಸ್ಥೆ. ನ.7 ಮತ್ತು 8ರಂದು ತಾಲೂಕು ಕೇಂದ್ರಗಳಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಸಂದರ್ಶನಕ್ಕೆ ಸಿದ್ಧಗೊಳಿಸಲು ಕಾರ್ಯಾಗಾರ.

ಕೃಪೆ : ವಾಭಾ

Write A Comment