ಕನ್ನಡ ವಾರ್ತೆಗಳು

ರಾಷ್ಟ್ರೀಯ ಜಲನೀತಿಯಾಗದೆ ನೀರಿನ ಸಮಸ್ಯೆಗೆ ಸಿಗದು ಪರಿಹಾರ: ಯತಿರಾಜು

Pinterest LinkedIn Tumblr

netravathi_sangkth_photo_1

ಮಂಗಳೂರು, ಅ. 17: ಎತ್ತಿನಹೊಳೆ ಯೋಜನೆ ಬಗ್ಗೆ ರಾಜ್ಯ ಸರಕಾರ ಆತುರ ವಹಿಸುತ್ತಿರುವುದು ಅಪಾಯಕಾರಿಯಾಗಿದ್ದು, ಇದರಿಂದ ಬಯಲು ಸೀಮೆಯಂತೆ ಮುಂದೊಂದು ದಿನ ಮಲೆನಾಡು ಕೂಡ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಲಿದೆ ಎಂದು ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು ಆತಂಕ ವ್ಯಕ್ತಪಡಿದರು.

ಸಿಟಿಝನ್ಸ್ ಕೌನ್ಸಿಲ್ ಮಂಗಳೂರು ಚಾಪ್ಟರ್ ವತಿಯಿಂದ ಶುಕ್ರವಾರ ಸಂಘ ನಿಕೇತನದಲ್ಲಿ ಆಯೋಜಿಸಲಾಗಿದ್ದ ಎತ್ತಿನಹೊಳೆ -ಒಂದು ವೈಜ್ಞಾನಿಕ ಸಮೀಕ್ಷೆ ಎಂಬ ವಿಷಯದಲ್ಲಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದಕ್ಷಿಣ ಭಾರತದ 58 ಪ್ರಮುಖ ನದಿಗಳು ಪಶ್ಚಿಮಘಟ್ಟದಲ್ಲಿ ಜನ್ಮ ತಾಳುತ್ತವೆ. ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ನಿರಂತರ ದಾಳಿಯ ಮೂಲಕ ಪಶ್ಚಿಮಘಟ್ಟಕ್ಕೆ ಹಾನಿಯಾಗಿದೆ. ಮುಂದೊಂದು ದಿನ ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯ ಕುಸಿದು ಬಯಲು ಸೀಮೆಗೆ ಮಾತ್ರವಲ್ಲ ಮಲೆನಾಡಿನ ಜನರಿಗೂ ನೀರು ಸಿಗದು ಎಂದು ಎಚ್ಚರಿಸಿದರು.

netravathi_sangkth_photo_2 netravathi_sangkth_photo_3 netravathi_sangkth_photo_4 netravathi_sangkth_photo_5 netravathi_sangkth_photo_6 netravathi_sangkth_photo_7 netravathi_sangkth_photo_8 netravathi_sangkth_photo_9

ಎತ್ತಿನಹೊಳೆ ಯೋಜನೆ ಜಾರಿಯಿಂದ ಆಗಬಹುದಾದ ತಕ್ಷಣ ಹಾಗೂ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಸಮಾಲೋಚನೆ, ಪರಾಮರ್ಶೆ ಆಗಬೇಕಾಗಿದೆ. ಸದ್ಯ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಮಾತ್ರವೇ ಮಾಡಲಾಗುತ್ತಿದೆ. ಈ ಯೋಜನೆಗೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆಯಲಾಗಿಲ್ಲ. ಅದನ್ನು ಪಡೆಯುವವರೆಗೆ ಯಾವುದೇ ಕಾಮಗಾರಿ ನಡೆಸುವುದಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಎದುರು ನೀರಾವರಿ ನಿಗಮ ಹೇಳಿಕೊಂಡಿದ್ದರೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಕಾಮಗಾರಿ ನಡೆಸಲಾಗುತ್ತಿದೆ. ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿ ಕಾಮಗಾರಿ ತಡೆಯುವ ಪ್ರಯತ್ನ ಮಾಡಬೇಕಾದ ಗುರುತರ ಜವಾಬ್ದಾರಿ ಹೊಂದಿರುವ ಅರಣ್ಯ ಇಲಾಖೆಯೂ ಕರ್ತವ್ಯ ಲೋಪ ಎಸಗಿದೆ. ಇಲ್ಲಿನವರೇ ಆದ ಅರಣ್ಯ ಸಚಿವರು ಈ ನಿಟ್ಟಿನಲ್ಲಿ ವಿಫಲರಾಗಿದ್ದಾರೆ ಎಂದು ಯತಿರಾಜು ಆರೋಪಿಸಿದರು.

ರಾಷ್ಟ್ರೀಯ ಜಲನೀತಿಯಾಗದೆ ನೀರಿನ ಸಮಸ್ಯೆಗೆ ಸಿಗದು ಪರಿಹಾರ: ಯತಿರಾಜು
ಸಾಂಪ್ರದಾಯಿಕ ಜಲಮೂಲಗಳನ್ನು ಉಳಿಸಿ ದೇಶದ ಜಲ ಸಂಪತ್ತನ್ನು ಆದ್ಯತೆಯ ನೆಲೆಯಲ್ಲಿ ಸಮಾನವಾಗಿ ಸರಬರಾಜು ಮಾಡುವ ನಿಟ್ಟಿನಲ್ಲಿ ವೈಜ್ಞಾನಿಕ ಮತ್ತು ಸಮಗ್ರವಾದ ರಾಷ್ಟ್ರೀಯ ಹಾಗೂ ರಾಜ್ಯ ಜಲನೀತಿ ರೂಪಿಸಬೇಕಾಗಿದೆ. ಅದು ಸಾಧ್ಯ ಆಗುವವರೆಗೆ ಜಿಲ್ಲೆ ಮಾತ್ರವಲ್ಲ, ಇಡೀ ದೇಶದಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಸಿಗದು ಎಂದು ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ. ಯತಿರಾಜು ಹೇಳಿದರು.

ಎತ್ತಿನಹೊಳೆ ಯೋಜನೆ ಕುರಿತು ಅ.19ರಂದು ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ದಸರಾ ಬಳಿಕ ಸಭೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಸಿಟಿಝನ್ಸ್ ಕೌನ್ಸಿಲ್ ಸಂಚಾಲಕ ನರೇಶ್ ಶೆಣೈ, ಅಧ್ಯಕ್ಷ ಸುನಿಲ್ ಆಚಾರ್ಯ ಈ ಸಂದರ್ಭ ಉಪಸ್ಥಿತರಿದ್ದರು.

Write A Comment