ಕನ್ನಡ ವಾರ್ತೆಗಳು

2014ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಗೌರವ ಪ್ರಶಸ್ತಿ ಹಾಗೂ ವಿಜೇತರ ಆಯ್ಕೆ

Pinterest LinkedIn Tumblr

Krntk_yulu_akdemi

ತುಳು ಭಾಷೆ, ಸಾಹಿತ್ಯ, ನಾಟಕ ಕ್ಷೇತ್ರ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂರು ಜನ ಗಣ್ಯರನ್ನು ಅಕಾಡೆಮಿಯ 2014 ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಈ ಗೌರವ ಪ್ರಶಸ್ತಿಯು ರೂ.10,000 ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.
1. ತುಳು ಸಾಹಿತ್ಯ ಕ್ಷೇತ್ರ : ಕನರಾಡಿ ವಾದಿರಾಜ್ ಭಟ್ ಪ್ರಾಯ, 64
2. ತುಳು ನಾಟಕ ಕ್ಷೇತ್ರ : ಯಮ್. ಕೆ ಸೀತಾರಾಮ್ ಕುಲಾಲ್ ಪ್ರಾಯ, 75
3. ತುಳು ಸಿನಿಮಾ ಕ್ಷೇತ್ರ : ರಾಮ್ ಶೆಟ್ಟಿ, ಮುಂಬೈ ಪ್ರಾಯ, 64

ಪುಸ್ತಕ ಬಹುಮಾನ:
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪುಸ್ತಕ ಬಹುಮಾನಕ್ಕೆ ಈ ಕೆಳಗಿನ ಲೇಖಕರ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪುಸ್ತಕ ಬಹುಮಾನವು ರೂ.5,000 ನಗದು, ಸ್ಮರಣಿಕೆ ಮತ್ತು ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ.
1. ತುಳು ಕವನ ವಿಭಾಗ ಪಾಡ್ದನ ಶ್ರೀಮತಿ ಶಾರದಾ ಎ. ಅಂಚನ್

ಡಾ. ಕನರಾಡಿ ವಾದಿರಾಜ ಭಟ್ (ತುಳು ಸಾಹಿತ್ಯ ಕ್ಷೇತ್ರ)
ಉಡುಪಿಯ ಕನರಾಡಿಯಲ್ಲಿ 1951ರಲ್ಲಿ ಜನಿಸಿದ ಶ್ರೀ ವಾದಿರಾಜ ಭಟ್, 1973ರಲ್ಲಿ ಎಮ್. ಎ. (ಕನ್ನಡ) ಪದವೀಧರರಾಗಿ, 1974 ರಿಂದ ಶ್ರೀ ಶಾರದಾ ಕಾಲೇಜು, ಬಸ್ರೂರು ಇಲ್ಲಿ ಕನ್ನಡ ಉಪನ್ಯಾಸಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ, ವೃತ್ತಿಜೀವನವನ್ನು ಸಾಗಿಸಿದವರು. ವೃತ್ತಿಯ ಜತೆಯಲ್ಲೇ ತನ್ನ ಸಾಹಿತ್ಯ ಪ್ರವೃತ್ತಿಯಲ್ಲೂ ನಿರಂತರ ತೊಡಗಿಸಿಕೊಂಡ ಇವರು, ತುಳು-ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿದವರು. ತುಳುವಿನ ಸಾಹಿತ್ಯ, ಸಂಸ್ಕೃತಿ, ಜನಪದ ಅಧ್ಯಯನ, ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ 1974ರಿಂದಲೂ ಪ್ರವೃತ್ತರಾದ ವಾದಿರಾಜರ ಮುಖ್ಯ ಕೃತಿಗಳು- ಜೋಕ್ಲೆ ಪದೊಕುಲು-1 ಮತ್ತು ಜೋಕ್ಲೆ ಪದೊಕುಲು-2. ‘ಜೀವನ ಪಾಡ್ದನ’ (ತುಳು ಕಬಿತೆಲು), ‘ಮಗೆ ಬರವು ಕಲ್ತೆ’. . ಇತ್ಯಾದಿ.

ತುಳು ಜಾನಪದದಲ್ಲಿ ವಿಶೇಷ ಆಸಕ್ತರಾದ ಇವರು ತುಳು ಜನಪದ ಕಥೆಗಳನ್ನು ಸಂಗ್ರಹಿಸಿದ್ದು ಇವು ತುಳು ಜನಪದ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸುತ್ತಿವೆ. ‘ನ್ಯೂ ಸ್ಟಾರ್ ಪಬ್ಲಿಷರ್ ಬೆಂಗಳೂರು 1989ರಿಂದ ಸತತ ನಾಲ್ಕು ವರ್ಷ ಪ್ರಕಟಿಸಿರುವ, ಈ ನಾಲ್ಕು ‘ತುಳು ಜನಪದ ಕತೆಗಳು’ ತುಳುವರಲ್ಲಿ ತುಂಬ ಜನಪ್ರಿಯವಾಗಿವೆ. ಮಂಗಳೂರು ‘ತುಳುಕೂಟ’ ದೊಂದಿಗೆ ಆರಂಭದಿಂದಲೂ ಸಂಬಂಧವಿರಿಸಿಕೊಂಡ ಡಾ. ವಾದಿರಾಜ ಭಟ್ ‘ತುಳುಕೂಟ’ ಪತ್ರಿಕೆಯನ್ನು ಪ್ರಸಾರ ಪಡಿಸುವಲ್ಲೂ ಉತ್ಸಾಹದಿಂದ ದುಡಿದವರು.

ತುಳು ಸಾಹಿತ್ಯ ಸಮ್ಮೇಳನ, ತುಳು ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಉಡುಪಿ ಹಮ್ಮಿಕೊಂಡ ಕಮ್ಮಟಗಳಲ್ಲಿ, ಕಲ್ಲಿಕೋಟೆಯಲ್ಲಿ ನಡೆದ ಅಖಿಲ ಭಾರತ ದ್ರಾವಿಡ ಭಾಷಾ ವಿಜ್ಞಾನಿಗಳ ಸಮ್ಮೇಳನದಲ್ಲಿ ಪಾಲ್ಗೊಂಡವರು. ಧರ್ಮ ವಿಚಾರಗಳ ತೌಲನಿಕ ಅಧ್ಯಯನದಲ್ಲಿ ಡಾಕ್ಟರೇಟ್ ಪದವಿ ಪಡೆದ ಇವರು ಆರು ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದವರು.

ಆಕಾಶವಾಣಿ, ದೂರದರ್ಶನಗಳಲ್ಲಿ ಮಾನವೀಯ ಮೌಲ್ಯಗಳು ಕುರಿತ ಕಾರ್ಯಕ್ರಮಗಳನ್ನು ಬಿತ್ತರಿಸಿದವರು. ಕನ್ನಡದಲ್ಲೂ ಹಲವಾರು ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಾದಿರಾಜ ಭಟ್ ಹಲವಾರು ಮಹಾನುಭಾವರ ಅಭಿನಂದನಾ ಗ್ರಂಥಗಳ ಪ್ರಧಾನ ಸಂಪಾದಕರಾಗಿಯೂ ದುಡಿದವರು. ಜಾನಪದ ನಿಘಂಟು ಯೋಜನೆಯಲ್ಲಿ ಕ್ಷೇತ್ರ ತಜ್ಞರಾಗಿ ಸಹಕರಿಸಿದವರು.

‘ಬಸ್ರೂರು ಒಂದು ಅಧ್ಯಯನ’ ಕೃತಿಯು ಮಂಗಳೂರು ವಿಶ್ವವಿದ್ಯಾಲಯದ ಎಮ್. ಎ. ವಿದ್ಯಾರ್ಥಿಗಳಿಗೆ ಪಠ್ಯವೂ ಆಗಿತ್ತು. ಯುವ ಜೇಸಿ ಪ್ರಶಸ್ತಿ, ಕಾರಂತ ಸದ್ಭಾವನಾ ಪ್ರಶಸ್ತಿ, ಭಾರತ ಭೂಷಣ ಪ್ರಶಸ್ತಿ, ಜಾನಪದ ಲೋಕ ವಿಶೇಷ ಪುರಸ್ಕಾರ ಇತ್ಯಾದಿಗಳೊಂದಿಗೆ ಮಾನ್ಯತೆ ಗಳಿಸಿದ ಡಾ. ವಾದಿರಾಜರಿಗೆ ಬಸ್ರೂರಿನ ಜನತೆ ಅಭಿನಂದಿಸಿ, ‘ಮೌಲ್ಯ ಸಾಧನೆ’ ಹೆಸರಿನ ಅಭಿನಂದನಾ ಗ್ರಂಥವನ್ನು ಸಮರ್ಪಿಸಿದೆ. ತುಳು ಭಾಷೆ, ತುಳು ಸಾಹಿತ್ಯ, ತುಳು ಜಾನಪದ ಕ್ಷೇತ್ರಗಳಲ್ಲಿ ಬಹಳಷ್ಟು ವರ್ಷಗಳಿಂದ ದುಡಿಯುತ್ತಾ ಅಮೂಲ್ಯ ಕೊಡುಗೆಗಳನ್ನಿತ್ತ ಡಾ.ವಾದಿರಾಜ ಭಟ್‌ರವರ ಸಾಧನೆಗಳನ್ನು ಪರಿಗಣಿಸಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲು ಅಕಾಡೆಮಿ ಅಭಿಮಾನ ಪಡುತ್ತಿದೆ.

ಎಮ್.ಕೆ. ಸೀತಾರಾಮ ಕುಲಾಲ್ (ತುಳು ನಾಟಕ ಕ್ಷೇತ್ರ)
ಮಂಗಳೂರಿನ ಶ್ರೀ ಎಮ್.ಕೆ.ಕುಲಾಲ್ ಕನ್ನಡ ತುಳು ನಾಟಕ ರಂಗಗಳಿಗೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳಿಂದ ಬಹು ಮಾನ್ಯರಾದವರು. ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರು, ಎಳವೆಯಿಂದಲೂ ನಾಟಕ ಸಾಹಿತ್ಯದ ಕೃಷಿಯನ್ನು ನಡೆಸುತ್ತಾ ಬಂದವರು. ಇವರ ಪ್ರಥಮ ನಾಟಕ ‘ದಾಸಿಪುತ್ರ’. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಅರುತ್ತೊಂಬತ್ತು ನಾಟಕಗಳನ್ನು ರಚಿಸಿದ್ದು, ‘ಮಣ್ಣ್‌ದ ಮಗಲ್ ಅಬ್ಬಕ್ಕ’ ನಾಟಕ ಅತ್ಯಂತ ಯಶಸ್ವಿ ಪ್ರಯೋಗಗಳನ್ನು ಕಂಡಿದೆ. ಕನ್ನಡದ ಅಬ್ಬಕ್ಕ ನಾಟಕ 1962ರಲ್ಲೇ ಆಗಿನ ಜಿಲ್ಲಾಧಿಕಾರಿ ಯಚ್. ನಾಗೇ ಗೌಡರು ಕೊಡಮಾಡಿದ ಪ್ರಥಮ ಬಹುಮಾನ ಗಳಿಸಿಕೊಂಡಿದೆ.

ದೃಶ್ಯ ರೂಪಕಗಳನ್ನು ರಚಿಸಿ ಶಾಲೆಗಳಲ್ಲಿ ಪ್ರದರ್ಶಿಸುವುದೂ ಇವರ ಮೆಚ್ಚಿನ ಹವ್ಯಾಸವೇ. ತುಳು ಕನ್ನಡ ನಾಟಕಗಳಿಗೆ ಮುನ್ನೂರೈವತ್ತಕ್ಕೂ ಮೀರಿ ಹಾಡುಗಳನ್ನು ರಚಿಸಿ ಜನಮೆಚ್ಚಿಗೆ ಗಳಿಸಿದ ಶ್ರೀ ಕುಲಾಲ್ ತುಳು ಸಿನೇಮಾಗಳಿಗೂ ತನ್ನ ಹಾಡುಗಳಿಂದಲೇ ವಿಶೇಷ ಮನ್ನಣೆ ತಂದು ಕೊಟ್ಟವರು. ‘ಶ್ರೀ ಕ್ಷೇತ್ರ ಕಟೀಲು’ ಭಕ್ತಿಗೀತೆಗಳ ಧ್ವನಿಸುರುಳಿ, ‘ತುಳುವ ಮಲ್ಲಿಗೆ’ ಧ್ವನಿಸುರುಳಿಯ ಹಾಡುಗಳು ತುಂಬ ಪ್ರಖ್ಯಾತವಾಗಿವೆ. ‘ಕಡಲನಾಡ ಕಲಾವಿದರು’ ಸಂಸ್ಥೆಯಲ್ಲಿದ್ದು 51 ವರ್ಷ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದ ಶ್ರೀ ಸೀತಾರಾಮ ಕುಲಾಲ್ ಸ್ವತ: ನಟಿಸಿದ ಎಂಟು ನಾಟಕಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದಿವೆ. ‘ಉಡಲ್ದ ತುಡರ್’ ತುಳು ಚಿತ್ರದ ಕಥೆ ಮತ್ತು ಸಂಭಾಷಣೆಗೆ ಪ್ರಶಸ್ತಿಗಳು ಸಂದಿವೆ. ಇವರು ರಚಿಸಿದ ಸಿನೇಮಾ ಮತ್ತು ನಾಟಕದ ಬಹಳಷ್ಟು ಹಾಡುಗಳು ತುಳು ನಾಡಿನವರ ಬಾಯಲ್ಲಿ ನಿರಂತರ ಅನುರಣಿಸುವಂಥವೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸೀತಾರಾಮ ಕುಲಾಲ್ ಹಲವಾರು ಸಾಧನೆಗಳಿಗಾಗಿ ಅಭಿನಂದನಾರ್ಹರು.  ‘ತುಳುಭವನ’ಕ್ಕೆ ಸರಕಾರದಿಂದ ನಿವೇಶನವನ್ನು ಪಡೆದುದು, ತುಳು ಪಠ್ಯ ಯೋಜನೆಗೆ ಬುನಾದಿ ಹಾಕಿದ್ದು, ತುಳುಲಿಪಿ ಓಲೆಗಳ ಸಂಗ್ರಹದ ಪ್ರಯತ್ನ, ಕುಪ್ಪಂ ವಿಶ್ವವಿದ್ಯಾಲಯದ ಸಂಪರ್ಕದಲ್ಲಿ ಪಿಯಚ್.ಡಿ, ಎಮ್.ಫಿಲ್.ಯೋಜನೆ ಆರಂಭಿಸಿದ್ದು, ಅಕಾಡೆಮಿಯ ವತಿಯಿಂದ ಹತ್ತು ಸಿ.ಡಿ. ಗಳಲ್ಲಿ ತುಳು ಜಾನಪದ ನೃತ್ಯ, ದೈವದ ಕುಣಿತ, ತುಳುನಾಡಿನ ಪ್ರೇಕ್ಷಣೀಯ ಸ್ಥಳಗಳು, ಅಕಾಡೆಮಿ ನಡೆದು ಬಂದ ದಾರಿ ಇತ್ಯಾದಿಗಳನ್ನು ದಾಖಲಿಸಿದ್ದು, ತುಳುವನ್ನು ಸಂವಿಧಾನದಲ್ಲಿ ಸೇರ್ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದು, ‘ಬಲೇ ತುಳು ಕಲ್ಪುಗ’ ಕಾರ್ಯಕ್ರಮವನ್ನು ಆರಂಭಿಸಿದ್ದು ಇತ್ಯಾದಿ ಇಲ್ಲಿ‌ಉಲ್ಲೇಖನಾರ್ಹ ಸಾಧನೆಗಳು.
‘ರಂಗಕಲಾಭೂಷಣ’ ‘ತುಳು ರತ್ನ’ ‘ಪೆರ್‍ಮೆದ ತುಳುವೆ’ ‘ತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿ’ ಇತ್ಯಾದಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿ, ಊರು, ಪರವೂರು, ಪರರಾಜ್ಯ, ಪರದೇಶಗಳಲ್ಲಿ ಸನ್ಮಾನಿತರಾಗಿ, ಸದಾ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಮೇಲ್ಮೆಗಾಗಿ ದುಡಿಯಲು ಮುಂದಾಗುವ ಶ್ರೀ ಸೀತಾರಾಮ ಕುಲಾಲ್‌ರವರ ಬಹುಮುಖ ಪ್ರತಿಭೆ, ಬಹುಮುಖ ಸಾಧನೆಗಳನ್ನು ಪರಿಗಣಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲು ಅಕಾಡೆಮಿ ಅಭಿಮಾನ ಪಡುತ್ತಿದೆ.
ಶ್ರೀ ರಾಮ ಶೆಟ್ಟಿ (ತುಳು ಸಿನಿಮಾ ಕ್ಷೇತ್ರ)
1951ರಲ್ಲಿ ಜನಿಸಿದ ರಾಮ ಶೆಟ್ಟಿಯವರು ಮಂಗಳೂರಿನ ತುಂಬೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮುಂಬೈ ಸೇರಿ, ಅಲ್ಲಿನ ‘ಶಾರದಾ’ ರಾತ್ರಿ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದವರು. ಉತ್ತಮ ಕಬಡ್ಡಿ ಆಟಗಾರನಾಗಿ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿಕೊಂಡ ಇವರು ಪ್ರಖ್ಯಾತ ಸಾಹಸ ಸಂಯೋಜಕ ಫೈಟರ್ ಶೆಟ್ಟಿಯವರ ಗಮನಕ್ಕೆ ಬಂದು ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹಗಳಿಂದ ಒಂದು ವರ್ಷದ ಸಾಹಸ ತರಬೇತಿಯ ಬಳಿಕ ಸಾಹಸ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿ ತನ್ನ ಪ್ರಥಮ ಅಭಿನಯದ ‘ಹಮ್‌ರಾಹಿ’ ಚಿತ್ರದಿಂದಲೇ ಪ್ರಸಿದ್ಧಿಯ ಮೆಟ್ಟಲು ಹತ್ತತೊಡಗಿದರು. ತನ್ನ ಅಪ್ರತಿಮ ಧೈರ್ಯ ಸಾಹಸಗಳಿಂದ ಅಮಿತಾಬ್ ಬಚ್ಚನ್‌ನಂತಹ ಪ್ರಖ್ಯಾತ ಕಲಾವಿದರಿಗೆ ‘ಡ್ಯೂಪ್ ಕಲಾವಿದ’ನಾಗಿಯೂ ಪ್ರಸಿದ್ಧ ನಿರ್ದೇಶಕರ ಮನ ಮೆಚ್ಚಿಸಿದರು.

ಅವರು ಸಾಹಸ ಪ್ರದರ್ಶಿಸಿದ ಸಿನೇಮಾಗಳ ಸಂಖ್ಯೆ ಸುಮಾರು ಏಳು ನೂರು! ಖ್ಯಾತ ನಿರ್ಮಾಪಕ ನಿರ್ದೇಶಕ ಫಿರೋಜ್‌ಖಾನ್‌ರವರ ‘ಜಾನ್ ಬಾಜ್’ ಚಿತ್ರಕ್ಕೂ ಇವರದೇ ಸಾಹಸ ನಿರ್ದೇಶನ. ಕನ್ನಡ ಚಿತ್ರರಂಗದಲ್ಲೂ ಇವರ ಸಾಹಸ ನಿರ್ದೇಶನ ಅಪ್ರತಿಮವಾದುದೇ! ‘ಶಬ್ದವೇದಿ’, ‘ಕುಮಾರರಾಮ’, ‘ಸಿಂಹದ ಮರಿ’ ಮೊದಲಾದ ಮೂವತ್ತು ಚಿತ್ರಗಳ ಸಾಹಸ ಸರದಾರ ಶ್ರೀ ರಾಮ ಶೆಟ್ಟಿಯವರೇ. ಜತೆಯಲ್ಲಿ ಒರಿಯಾ, ಮರಾಠಿ ಚಿತ್ರಗಳಲ್ಲೂ ಬೇಡಿಕೆಯಿದ್ದ ಶೂರ ನಿರ್ದೇಶಕರಿವರು. ದೂರದರ್ಶನ ಧಾರಾವಾಹಿಗಳೂ ಇವರ ಸಾಹಸ ಕ್ರಿಯೆಗಳ ಪ್ರಯೋಗ ರಂಗಗಳೇ. ಚಿತ್ರ ನಿರ್ಮಾಣ, ನಿರ್ದೇಶನ ಎರಡೂ ಕ್ಷೇತ್ರಗಳಲ್ಲಿ ‘ಸೆ’ ಎನ್ನಿಸಿಕೊಳ್ಳುತ್ತಾ ಸಾಗಿದ ಶ್ರೀ ರಾಮ ಶೆಟ್ಟಿಯವರು ತುಳು ಚಿತ್ರರಂಗದತ್ತಲೂ ಆಕರ್ಷಿತರಾಗಿ ಪ್ರಮುಖರೆನ್ನಿಸಿದವರು.

‘ಬದ್ಕೆರೆ ಬುಡ್ಲೆ’ ‘ದಾರೆದ ಸೀರೆ’, ‘ಬಂಗಾರ್‍ದ ಕುರಲ್’ ಇವು ಇವರ ಯಶಸ್ವೀ ತುಳು ಚಿತ್ರಗಳು. ತುಳುನಾಡಿನ ಈ ಅಪೂರ್ವ ಪ್ರತಿಭಾನ್ವಿತ ಚಿತ್ರರಂಗ ಸಾಧಕ ರಾಷ್ಟ್ರವ್ಯಾಪಿಯಲ್ಲಿ ಹೆಸರಾಂತನಾಗುತ್ತಾ, ತುಳು ಚಿತ್ರರಂಗಕ್ಕೂ ಸೇವೆ ಸಲ್ಲಿಸಿ ತುಳುವಿನ ಹಿರಿಮೆಗೆ ಕಾರಣರಾದುದನ್ನು ಪರಿಗಣಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಅಭಿನಂದಿಸಲು ಅಕಾಡೆಮಿ ಅಭಿಮಾನಪಡುತ್ತಿದೆ.

ಶ್ರೀಮತಿ ಶಾರದಾ ಎ. ಅಂಚನ್
ಶ್ರೀಮತಿ ಶಾರದಾ ಎ. ಅಂಚನ್ ದೂರದ ಮುಂಬೈ ಮಹಾನಗರದಲ್ಲಿ ಬದುಕು ಸಾಗಿಸುತ್ತಾ, ತುಳು, ಕನ್ನಡ ಭಾಷೆಗಳಲ್ಲಿ ಸಾಹಿತ್ಯದ ಕೃಷಿ ಮಾಡುತ್ತಿರುವವರು. ತುಳು ಸಂಸ್ಕೃತಿಯಲ್ಲಿ ತುಂಬ ಆಸಕ್ತಿ ಉಳಿಸಿ ಕೊಂಡಿರುವ ಇವರು ತುಳು ಸಂಸ್ಕೃತಿಯ ಬಗ್ಗೆ ತುಂಬ ತಿಳುವಳಿಕೆ ಉಳ್ಳವರು. ತನ್ನ ಕವಿತೆಗಳಲ್ಲಿ ತುಳು ಸಂಸ್ಕೃತಿಯ ತಿರುಳನ್ನು, ತನ್ನ ಸಮರ್ಥ ತುಳು ಭಾಷೆಯಲ್ಲಿ ಕಟ್ಟಿಕೊಡುವ ಇವರ ಚತುರತೆ ಮೆಚ್ಚ ಬೇಕಾದುದೇ. ಇವರ ಪ್ರಥಮ ತುಳು ಕವಿತೆಗಳ ಸಂಕಲನ, ‘ಪಾರ್ದನ’ ಇದರಲ್ಲಿ ಒಂದಲ್ಲ ಒಂದು ತುಳು ಸಂಸ್ಕೃತಿಯ ಅಂಶಗಳಿವೆ. ಇವರ ಅತೀವ ಆಸಕ್ತಿ ಮತ್ತು ಅನುಭವಗಳು ಕವನಗಳಲ್ಲಿ ವ್ಯಕ್ತವಾಗಿದೆ. ತನ್ನ ಜ್ಞಾನಾನುಭವವನ್ನು ಹೊಸ ಬಗೆಯಲ್ಲಿ ಅಭಿವ್ಯಕ್ತಿಸುವ ರೀತಿ ಗಮನಾರ್ಹವಾಗಿದೆ. ತುಂಬ ಅಚ್ಚುಕಟ್ಟಾಗಿ ಹೆಣೆಯಲ್ಪಟ್ಟ ಇವರ ‘ಪಾರ್ದನ’ ಕವಿತೆಗಳ ಸಂಕಲನವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2014 ರ ಸಾಲಿನ ಪುಸ್ತಕ ಬಹುಮಾನವಿತ್ತು ಗೌರವಿಸಲು ಸಂತೋಷಿಸುತ್ತಿದೆ.

Write A Comment