ಕುಂದಾಪುರ: ಕುಂದಾಪುರಕ್ಕೆ ಗ್ರಾಮಾಂತರ ಠಾಣೆ ಅಗತ್ಯವಿರುವ ಬಗ್ಗೆ ಈಗಾಗಲೇ ಪ್ರಸ್ತಾವನೆ ಹೋಗಿದೆ. ಮುಂದಿನ ಒಂದು ವರ್ಷಗಳಲ್ಲಿ ಗ್ರಾಮಾಂತರ ಠಾಣೆ ಆಗುವ ಸಾಧ್ಯತೆಯಿದ್ದು ಸೂಕ್ಷ್ಮ ಪ್ರದೇಶವೆಂದು ಬಿಂಬಿತವಾದ ಕಂಡ್ಲೂರಿನಲ್ಲಿ ಗ್ರಾಮಾಂತರ ಠಾಣೆ ಆರಂಭವಾಗುವುದು ಬಹುತೇಕ ಖಚಿತವಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಅಮೃತ್ ಪಾಲ್ ಕುಂದಾಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕುಂದಾಪುರ ತಾಲೂಕಿನ ಹೃದಯ ಭಾಗದಲ್ಲೇ ಆರು ವರ್ಷಗಳ ಹಿಂದೆ ನಡೆದ ಉದ್ಯಮಿ ಸುಬ್ರಾಯ ಹೊನ್ನಾವರ್ಕರ್ ಶೂಟೌಟ್ ಪ್ರಕರಣ ಸೇರಿದಂತೆ, ಬೆಳ್ವೆ ಸಮೀಪದ ಅಲ್ಬಾಡಿಯಲ್ಲಿ ನಡೆದ ಉದಯ ಶೆಟ್ಟಿ ಕೊಲೆ, ಹಂಗ್ಳೂರು ಕುಸುಮಾ ಕೊಲೆ ಸೇರಿದಂತೆ 2005ರ ಬಳಿಕ ನಡೆದ ತನಿಖೆಯಲ್ಲಿ ಪ್ರಗತಿ ಸಾಧಿಸದ ಎಲ್ಲಾ ಕೊಲೆ ಪ್ರಕರಣಗಳನ್ನು ಮರುತನಿಖೆ ಮಾಡುವುದಾಗಿ ಇದೇ ಸಂದರ್ಭ ಐಜಿಪಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಶಾಂತಿ ಪ್ರಿಯ ಸಮಾಜದ ಕಲ್ಪನೆ ಹಾಗೂ ಅಗತ್ಯತೆ ಜನರಿಗೆ ಬಿಟ್ಟಿದ್ದು ಅವರ ತೀರ್ಮಾನ ಒಳ್ಳೆಯದಿದ್ದರೇ ಸಮಾಜ ಸ್ವಸ್ಥವಾಗಿರುತ್ತದೆ. ಆದರೇ ಕೆಲವರ ಕುಮ್ಮಕ್ಕಿನಿಂದ ಸಣ್ಣಪುಟ್ಟ ವಿಚಾರಗಳಿಗೂ ಕೋಮು ಗಲಭೆಗಳು ನಡೇಯುತ್ತಿದ್ದು ಪರಸ್ಪರ ಮಾತುಕತೆ ಹಾಗೂ ಸಮಾಲೋಚನೆ ನಡೆಸಿ ಇವುಗಳನ್ನು ತಡೆಯುತ್ತೇವೆ, ಅದಕ್ಕೂ ಬಗ್ಗದಿದ್ದಲ್ಲಿ ಕಠಿಣ ಕ್ರಮವನ್ನು ನಾವು ಕೈಗೊಳ್ಳಲೇಬೇಕಾಗಿದೆ. ಅನಾದಿ ಕಾಲದಿಂದಲೂ ಧರ್ಮಗಳ ವೈಶಮ್ಯ ಉಭಯ ಜಿಲ್ಲೆಗಳಲ್ಲಿದೆ ಆದ್ರೇ ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಶಿರೂರು ರತ್ನ ಕೊಠಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳಾದರೂ ತನಿಖೆ ನಡೆಯುತ್ತಿದ್ದು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಕೈಂಗೊಂಡಿದ್ದೇವೆ. ಶವವು ಮೂರ್ನಾಲ್ಕು ದಿನಗಳ ಬಳಿಕ ಸಿಕ್ಕ ಕಾರಣ ಕೆಲವು ಸಾಕ್ಷ್ಯಗಳು ನಾಶವಾಗಿದ್ದರೂ ಉನ್ನತ ತನಿಖೆ ನಡೆಸಿದ್ದೇವೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಇನ್ನೂ ಮುಕ್ತಾಯಗೊಳಿಸದೇ ತನಿಖೆ ನಡೆಸಲಿದ್ದೇವೆ ಎಂದರು.
ಪೊಲೀಸರಿಗೆ ‘ಆರೋಗ್ಯ ಭಾಗ್ಯ’ ಯೋಜನೆ ಕುಂದಾಪುರ ತಾಲೂಕಿನ ಪೊಲೀಸರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಲಭ್ಯವಾಗದ ಕುರಿತು ಐಜಿಪಿ ಮುಂದಿನ ದಿನಗಳಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಈ ಯೋಜನೆ ಪೊಲೀಸರಿಗೆ ಮತ್ತು ಅವರ ಕುಟುಂಬಕ್ಕೆ ದೊರಕುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಉಡುಪಿ ಎಸ್ಪಿ ಅಣ್ಣಾಮಲೈ, ಕುಂದಾಪುರ ಡಿವೈಎಸ್ಪಿ ಮಂಜುನಾಥ್ ಶೆಟ್ಟಿ,ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ., ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್, ಕ್ರೈಮ್ ವಿಭಾಗದ ಎಸ್ಸೈ ದೇವರಾಜ್, ಮಹಿಳಾ ಠಾಣೆ ಎಸ್ಸೈ ಸುಜಾತಾ, ಟ್ರಾಫಿಕ್ ಠಾಣೆಯ ಉಪನಿರೀಕ್ಷಕರಾದ ಜಯ ಹಾಗೂ ದೇವೇಂದ್ರ, ಶಂಕರನಾರಾಯಣ ಎಸ್ಸೈ ದೇಜಪ್ಪ, ಅಮಾಸೆಬೈಲು ಎಸ್ಸೈ ಸುನೀಲ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.