ಕನ್ನಡ ವಾರ್ತೆಗಳು

ಫೇಸ್‍ಬುಕ್‍ನಲ್ಲಿ ಪರಿಚಯ: ಯುವತಿಯನ್ನು ಅಪಹರಿಸಿದ ಜೆಸಿಬಿ ಆಪರೇಟರ್ ಪೊಲೀಸರ ವಶ.

Pinterest LinkedIn Tumblr

1676kidnapping-11

ಸುಳ್ಯ, ಅ.17: ಯುವತಿಯನ್ನು ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು ಮದುವೆಯಾಗುವ ಭರವಸೆ ನೀಡಿ ಸುರತ್ಕಲ್‍ನ ಹಾಸ್ಟೆಲೊಂದರಲ್ಲಿರಿಸಿ ಬಳಿಕ ಆಕೆಯನ್ನು ಅಪಹರಿಸಿದ್ದ ಸುಳ್ಯ ತಾಲೂಕಿನ ವಿವಾಹಿತ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಮೇರ್ಕಜೆ ನಿವಾಸಿ ಆನಂದ ಗೌಡ ಎನ್ನುವವರ ಪುತ್ರ ಮೋಹನದಾಸ (35) ಬಂಧಿತ ಆರೋಪಿಯಾಗಿದ್ದು, ಪುತ್ತೂರಿನಲ್ಲಿ ಜೆಸಿಬಿ ಆಪರೇಟರ್ ಆಗಿದ್ದಾನೆ.

ಬೆಳ್ತಂಗಡಿ ಮೂಲದ ಅವಿವಾಹಿತ ಯುವತಿಯೋರ್ವಳನ್ನು ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡಿದ್ದ ಮೋಹನದಾಸ ಆಕೆಯನ್ನು ಮದುವೆಯಾಗುವುದಾಗಿ ಮತ್ತು ಓದಿಸುವುದಾಗಿ ನಂಬಿಸಿ ಸುರತ್ಕಲ್‍ಗೆ ಕರೆದೊಯ್ದು ಅಲ್ಲಿನ ಮಹಿಳಾ ಪಿ.ಜಿಗೆ ಸೇರಿಸಿದ್ದ.

ಕೆಲವು ದಿನಗಳ ಹಿಂದೆ ಯುವತಿ ಅಲ್ಲಿಂದ ದಿಢೀರ್ ನಾಪತ್ತೆಯಾಗಿದ್ದು, ಪಿ.ಜಿಯವರು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೆತ್ತಿಕೊಂಡಿದ್ದ ಪೊಲೀಸರು ಯುವತಿಯ ಮೊಬೈಲ್ ಫೋನ್ ಸುಬ್ರಹ್ಮಣ್ಯ ಟವರ್‍ನ ವ್ಯಾಪ್ತಿಯಲ್ಲಿರುವುದನ್ನು ಪತ್ತೆ ಹಚ್ಚಿದ್ದರು. ಈ ಮಾಹಿತಿಯ ಜಾಡು ಹಿಡಿದು ಸಾಗಿದಾಗ ಸುಳ್ಯದ ಖಾಸಗಿ ಮಹಿಳಾ ಹಾಸ್ಟೆಲ್‍ನಲ್ಲಿ ಯುವತಿ ಪತ್ತೆಯಾಗಿದ್ದಾಳೆ. ಮೋಹನ್‍ದಾಸ್ ತನ್ನನ್ನು ಕರೆದೊಯ್ದು ಹಲವಾರು ಕಡೆಗಳಲ್ಲಿ ಸುತ್ತಾಡಿಸಿದ್ದನ್ನು ಯುವತಿ ಪೊಲೀಸರಲ್ಲಿ ಬಾಯಿಬಿಟ್ಟಿದ್ದಾಳೆ.

ಮೋಹನ್‍ದಾಸ್ ವಿವಾಹಿತನಾಗಿದ್ದು ಎರಡು ಮಕ್ಕಳ ಅಪ್ಪನೂ ಆಗಿದ್ದಾನೆ. ಯುವತಿಯನ್ನು ವಂಚಿಸಿದ ಆರೋಪದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಹಿಂದೆ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ವ್ಯಕ್ತಿಯೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಎರಡು ಪ್ರಕರಣಗಳು ಮೋಹನ್‍ದಾಸ್ ವಿರುದ್ಧ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ಮಧ್ಯೆ, ಈತ ಮಹಿಳೆಯರ ಮಾರಾಟದ ದಂಧೆ ನಡೆಸುತ್ತಿದ್ದಾನೆ ಎಂದು ಯುವತಿಯ ಮನೆಯವರು ಆರೋಪಿಸಿದ್ದಾರೆ.

Write A Comment