ಮಂಗಳೂರು, ಅ.22: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳೂರು ಕಸ್ಟಮ್ಸ್ ಇಲಾಖೆ 30 ಲಕ್ಷ ರೂ. ವೌಲ್ಯದ ಹಾಲಿನ ಹುಡಿಯಲ್ಲಿ ಮಿಶ್ರ ಮಾಡಿದ ಬೆಳ್ಳಿ ಕವಚದ ಬಂಗಾರದ ಹುಡಿ, ಕೇಸರಿ ಮತ್ತು ಸಿಗರೆಟನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದೆ.
ಮಂಗಳವಾರ ದುಬಾಯಿಂದ ಮಂಗಳೂರಿಗೆ ಬಂದ ವಿಮಾನದಲ್ಲಿ 26 ಲಕ್ಷ ರೂ. ವೌಲ್ಯದ 1,000 ಗ್ರಾಂ ತೂಕದ ಬೆಳ್ಳಿಯ ಹೊದಿಕೆಯ ಚಿನ್ನದ ಹುಡಿಯನ್ನು ಹಾಲಿನ ಹುಡಿಯೊಂದಿಗೆ ಮಿಶ್ರಣ ಮಾಡಿ ತರಲಾಗಿತ್ತು. ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಬಂಗಾರದ ಹುಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಮಂಗಳೂರು ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಧೀಶರು ಆರೋಪಿಗೆ 14 ದಿನದ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಬುಧವಾರ ಪ್ರಯಾಣಿಕನ ಬಳಿಯಿದ್ದ 2.5 ಲಕ್ಷ ರೂ. ವೌಲ್ಯದ 2ನೆ ದರ್ಜೆಯ ಕೇಸರಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಪ್ರಯಾಣಿಕನ ಬಳಿಯಿದ್ದ 1.20 ಲಕ್ಷ ರೂ. ವೌಲ್ಯದ 90 ಕಾರ್ಟನ್ಗಳಲ್ಲಿ ಕೊಂಡೊಯ್ಯುತ್ತಿದ್ದ ಸಿಗರೆಟ್ ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ಬಂಧಿಸಲಾಗಿದೆ.