ಮಂಗಳೂರು, ಅ.22: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ವೆಲೆನ್ಸಿಯಾದಲ್ಲಿರುವ ನಿವಾಸದ ಮೇಲ್ಛಾವಣಿಯಲ್ಲಿ ಅಳವಡಿಸಲಾದ ಸೌರಶಕ್ತಿ ಘಟಕವನ್ನು ದ. ಕ ಜಿಲ್ಲಾಧಿಕಾರಿ ಎ ಬಿ ಇಬ್ರಾಹೀಂ ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೌರಶಕ್ತಿ ವಿದ್ಯುತ್ ಬಗ್ಗೆ ಮೆಸ್ಕಾಂ ಜನರಿಗೆ ತಿಳಿಹೇಳಬೇಕು. ಬ್ಯಾಂಕ್‌ಗಳು ಜನರಿಗೆ ಈ ಯೋಜನೆಗಾಗಿ ಹಣಕಾಸಿನ ನೆರವು ಒದಗಿಸಿಕೊಡಬೇಕು ಎಂದು. ಸ್ಥಳೀಯ ಸಂಸ್ಥೆಗಳು, ಜನಪ್ರತಿನಿಧಿಗಳು ಸೌರಶಕ್ತಿಯನ್ನು ಬಳಸುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುತ್ ಕೊರತೆ ಕಾಡುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದಿಸಲು ಅವಕಾಶವಿದ್ದು ಅದನ್ನು ಬಳಸಿಕೊಳ್ಳಬೇಕಾಗಿದೆ ಎಂದರು.
ಐವನ್ ಡಿಸೋಜ, ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್, ಮನಪಾ ಆಯುಕ್ತ ಡಾ.ಗೋಪಾಲಕೃಷ್ಣ, ಸಚೇತಕ ಶಶಿಧರ್ ಹೆಗ್ಡೆ, ಮಾಜಿ ಮೇಯರ್‌ಅಶ್ರಫ್, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಉದ್ಯಮಿ ಸದಾನಂದ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಉಪಸ್ಥಿತರಿದ್ದರು.
ಐವನ್ ಡಿಸೋಜರ ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಲಾಗಿರುವ ಸೌರ ವಿದ್ಯುತ್ ಘಟಕದಿಂದ ಅವರ ಮನೆಗೆ ಬಳಸಿ ಉಳಿದ ವಿದ್ಯುತ್‌ನ್ನು ಮೆಸ್ಕಾಂ ಖರೀದಿಸುತ್ತದೆ. ಇದರಿಂದ ತಿಂಗಳಿಗೆ ಅಂದಾಜು 7 ಸಾವಿರ ರೂ. ಆದಾಯ ಐವನ್ ಕೈಸೇರಲಿದೆ. 8 ಲಕ್ಷ ರೂ. ವೆಚ್ಚದಲ್ಲಿ 10 ಕೆ.ವಿಯ ಸೌರಶಕ್ತಿ ಘಟಕವನ್ನು ನಿರ್ಮಿಸಲಾಗಿದ್ದು ಇದರಿಂದ ಪ್ರತಿದಿನ ಅಂದಾಜು 40 ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.