ಕುಂದಾಪುರ: ಯಾರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಿದ್ದ ವೇಳೆ ಸಹೋದರ ತನ್ನ ಮೊಬೈಲ್ ಪಡೆದ ಎಂಬ ಕ್ಷುಲ್ಲಕ ಕಾರಣವನ್ನೆ ನೆಪವಾಗಿಸಿಕೊಂಡ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಸಮೀಪದ ಕರ್ಕಿ ಎಂಬಲ್ಲಿ ನಡೆದಿದೆ.
ಕುಂದಾಪುರ ಸರಕಾರಿ ಕಾಲೇಜು ವಿದ್ಯಾರ್ಥಿನಿಯಾದ ಕರ್ಕಿ ದಿ. ರಮೇಶ್ ಎಂಬುವರ ಪುತ್ರಿ ಪ್ರೀತಿ (17) ಎಂಬಾಕೆಯೇ ನೇಣಿಗೆ ಶರಣಾದವಳು. ಈಕೆ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು.
ತಂದೆ ತಾಯಿಯನ್ನು ಕೆಲವು ಸಮಯಗಳ ಹಿಂದೆ ಕಳೆದುಕೊಂದಿದ್ದ ಪ್ರೀತಿ ಬಳಿಕ ಸೋದರರೊಂದಿಗೆ ವಾಸವಿದ್ದಳು. ಮೊಬೈಲಿನಲ್ಲಿ ಮಾತನಾಡುತ್ತಿದ್ದ ವೇಳೆ ಮನೆಯಲ್ಲಿದ್ದ ಸೋದರ ಮಿತಿನ್ ಈ ಬಗ್ಗೆ ಪ್ರೀತಿಯಲ್ಲಿ ಕೇಳಿದಾಗ ಆಕೆ ಅದೇನೋ ಸಮಜಾಯಿಷಿ ನೀಡಿದ್ದಾಳೆ. ಆದರೇ ಕೆಲವು ದಿನಗಳಿಂದ ಆಕೆ ಮೊಬೈಲಿನಲ್ಲಿ ವಿಪರೀತವಾಗಿ ಮಗ್ನಳಾಗಿದ್ದಲ್ಲದೇ ಖಿನ್ನಳಾಗಿದ್ದ ಕಾರಣ ಅನುಮಾನಗೊಂಡ ಮಿತಿನ್ ಆಕೆಗೆ ಒಂದಷ್ಟು ಬುದ್ದಿ ಹೇಳಿದ್ದಲ್ಲದೇ ಆಕೆ ಮೊಬೈಲ್ ಪಡೆದಿದ್ದಾನೆ. ಆಕೆ ಮೊಬೈಲು ನೀಡುವಂತೆ ಕೇಳಿಕೊಂಡರೂ ಹೊರಗಡೆ ಅಂಗಡಿಗೆ ತೆರಳಿದ್ದು ವಾಪಾಸು ಮನೆಗೆ ಬಂದು ನೋಡುವಾಗ ಆಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಘಟನೆ ಬಳಿಕವೂ ಅದೇ ನಂಬರಿನಿಂದ ಹಲವು ಬಾರೀ ಪ್ರೀತಿಗೆ ಕರೆ ಬಂದಿದ್ದು ಪ್ರೀತಿ ಬಗ್ಗೆ ವಿಚಾರಿಸಿದ್ದ ಎನ್ನಲಾಗಿದೆ. ಕುಟುಂಬಿಕರು ಹೇಳುವ ಪ್ರಕಾರ ಆತನೇ ಆಕೆಗೆ ಏನೋ ತಿಳಿಸಿದ್ದು ಅದಕ್ಕೆ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮನೆಯಲ್ಲಿ ತನ್ನ ಪ್ರೀತಿ ವಿಚಾರ ತಿಳಿದ ಕಾರಣವೂ ಬೆದರಿದ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ. ಆದರೇ ಪ್ರೀತಿ ಯಾವುದೇ ಡೆತ್ ನೋಟ್ ಬರೆಯದ ಕಾರಣ ನಿಖರ ಕಾರಣಗಳಿನ್ನೂ ಸ್ಪಷ್ಟವಾಗಿಲ್ಲ.
ಸದ್ಯ ಯುವತಿ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದು ಕರೆ ಮಾಡಿದಾತನ ವಿವರಗಳನ್ನು ಸಂಗ್ರಹಿಸುವ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.