ಕನ್ನಡ ವಾರ್ತೆಗಳು

ನಾಡಿನಾದ್ಯದಂತ ಇಂದು ಆಯುಧ ಪೂಜೆ ಸಂಭ್ರಮ

Pinterest LinkedIn Tumblr

Ayudha_Pooja_Pic_1

ಮಂಗಳೂರು,ಅ.22: ನಾಡಿನಾದ್ಯಂತ ಇಂದು ಅಯುಧ ಪೂಜೆ ಸಂಭ್ರಮ. ನವರಾತ್ರಿಯ ಒಂಭತ್ತನೇ ದಿನ ಮಹಾನವಮಿಯಂದು ಆಯುಧ ಪೂಜೆಯ ಸಡಗರ. ಈ ದಿನ ರಾಜ್ಯಾದ್ಯಂತ ಜನರು ತಮ್ಮ ವಾಹನಗಳನ್ನು ತೊಳೆದು ಮುದುವಣಿಗಿತ್ತಿಯಂತೆ ಸಿಂಗಾರ ಮಾಡಿ ಪೂಜಿಸುವುದು ವಾಡಿಕೆ.

ಕರಾವಳಿಯಲ್ಲಿ ಕೂಡ ಅಯುಧ ಪೂಜೆಯನ್ನು ಸಂಭ್ರಮ – ಸಡಗರದಿಂದ ಆಚರಿಸಲಾಯಿತು. ವಾಹನಗಳನ್ನು ಹೊಂದಿರುವವರು ಇಂದು ಮುಂಜಾನೆಯಿಂದಲೇ ನಗರದ ಕ್ಷೇತ್ರಗಳಿಗೆ ತೆರಳಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸಿಕೊಂಡು ಭಕ್ತಿ ಭಾವ ಪ್ರದರ್ಶಿಸಿದರು. ಈ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲಾ ಕ್ಷೇತ್ರಗಳಲ್ಲೂ ವಾಹನಗಳ ಸರತಿ ಸಾಲು ಕಂಡು ಬಂತು. ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಕಂಪನಿ ಹಾಗೂ ಫ್ಯಾಕ್ಟರಿಗಳಲ್ಲಿ ಕೂಡ ಯಂತ್ರೋಪಕರಣಗಳಿಗೆ ವಿಶೇಷವಾದ ಪೂಜೆ ಸಲ್ಲಿಸುವ ಮೂಲಕ ಅಯುಧ ಪೂಜೆಯನ್ನು ಆಚರಿಸಲಾಯಿತು.

ಈ ಬಾರಿ ಕರವಾಳಿಯಲ್ಲಿ ಕೆಲವರು ನಿನ್ನೆ ಮತ್ತು ಇಂದು ಎರಡು ದಿನ ಅಯುಧ ಪೂಜೆ ಆಚರಿಸಿದ್ದರಿಂದ ಬುಧವಾರ ಕೂಡ ಹೆಚ್ಚಿನ ದೇವಸ್ಥಾನಗಳಲ್ಲಿ ವಾಹನಗಳ ಸರತಿ ಸಾಲು ಕಂಡು ಬಂತು.

Ayudha_Pooja_Pic_2 Ayudha_Pooja_Pic_3 Ayudha_Pooja_Pic_4 Ayudha_Pooja_Pic_5 Ayudha_Pooja_Pic_6 Ayudha_Pooja_Pic_7 Ayudha_Pooja_Pic_8

ಆಯುಧ ಪೂಜೆಯ೦ದು ರಸ್ತೆಗಿಳಿದರೆ ಅದರ ಮಜಾನೇ ಬೇರೆ. ರಸ್ತೆ ಮೇಲೆ ಸ೦ಚರಿಸುವ ವಿವಿಧ ರೀತಿಯ ವಾಹನಗಳ ಅಲ೦ಕಾರವನ್ನು ನೋಡಲು ಅ೦ಗಡಿ – ಮು೦ಗಟ್ಟುಗಳ ಮು೦ದೆ ಬಿದ್ದಿರುವ ತೆಂಗಿನಕಾಯಿಗಳ ರಾಶಿ, ಬೂದುಗು೦ಬಳಕಾಯಿಗಳ ಅರಿಸಿನ – ಕು೦ಕುಮಗಳ ಬಣ್ಣ ನೋಡಲು ಕಣ್ಣೆರಡು ಸಾಲದು. ಭಾರತೀಯ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ದಸರ ಆಯುಧ ಪೂಜೆಯ ಮೂಲಕ ವಿಜೃ೦ಭಿಸುತ್ತದೆ.

ತರಕಾರಿ ಮಾರುವ ತಳ್ಳುಗಾಡಿಯಿಂದ ಹಿಡಿದು ಫ್ಯಾಕ್ಟರಿ, ಸಾಫ್ಟ್ ವೇರ್ ಕಂಪನಿಗಳಲ್ಲೆಲ್ಲ ಆಯುಧ ಪೂಜೆಯಂದು ಸಂಭ್ರಮದ ವಾತಾವರಣ. ಸೈಕಲ್, ಬೈಕ್, ಕಾರು, ಲಾರಿ, ಕಂಪ್ಯೂಟರ್, ವೈವಿಧ್ಯಮಯ ಯಂತ್ರಗಳನ್ನು ಶುದ್ದೀಕರಿಸಿ, ಸುಣ್ಣ ಬಳಿದು, ಹೂವಿಟ್ಟು, ಊದುಬತ್ತಿ ಬೆಳಗಿ ಪೂಜಿಸುತ್ತಾರೆ. ದೇಶಕ್ಕೆ ಅನ್ನ ನೀಡುವ ಉಳುವ ಯೋಗಿ ತನ್ನ ನೇಗಿಲಿಗೆ ಪೂಜೆ ಸಲ್ಲಿಸುವುದನ್ನು ಮರೆಯುವುದಿಲ್ಲ. ನಮ್ಮ ವಾಹನಗಳು ಸೇರಿದಂತೆ ನಿತ್ಯ ಬಳಸುವ ಯಂತ್ರಗಳು ಹಾಗೂ ಹಲವು ಸಾಧನಗಳನ್ನು ಪೂಜಿಸುತ್ತೇವೆ.

Ayudha_Pooja_Pic_9 Ayudha_Pooja_Pic_10 Ayudha_Pooja_Pic_11 Ayudha_Pooja_Pic_12 Ayudha_Pooja_Pic_13 Ayudha_Pooja_Pic_14 Ayudha_Pooja_Pic_15

ಮಾವಿನ ಸೊಪ್ಪಿನ ಹಸಿರು ತೋರಣ ಹೆಬ್ಬಾಗಿಲ ಮುಂದೆ ನಳನಳಿಸುತ್ತಿರುತ್ತದೆ. ಬಾಗಿಲ ಚೌಕಟ್ಟಿಗೆ ಆನಿಸಿರುವ ಬಾಳೆಕಂಬ ಹಬ್ಬದ ವಾತಾವರಣಕ್ಕೆ ಕಳೆ ತಂದಿರುತ್ತದೆ. ಸ್ಕ್ರೂ ಡ್ರೈವರಿಂದ ಹಿಡಿದು, ಸೈಕಲ್ಲು, ಬೈಕು, ಕಾರು ಮೊದಲಾದವುಗಳನ್ನು ತೊಳೆದು, ಕಂಪ್ಯೂಟರು, ಫ್ರಿಜ್, ಟಿವಿಗಳನ್ನು ಶುಚಿಗೊಳಿಸಿ ಅರಿಷಿಣ ಕುಂಕುಮ, ಹೂವೇರಿಸಿ ಊದುಬತ್ತಿ ಬೆಳಗುತ್ತಾರೆ.

ಎಲ್ಲ ಕಾರ್ಮಿಕರೂ ಅವತ್ತೊಂದು ದಿನ ಕೆಲಸಕ್ಕೆ ರಜೆ ಮಾಡಿ ಪೂಜೆ ಮಾಡಿ, ಸಿಹಿ ಹಂಚಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮನೆಮನೆಗಳಲ್ಲಿ ಹಬ್ಬದ ವಾತಾವರಣ ರಾರಾಜಿಸಿರುತ್ತದೆ. ಮನೆಮಂದಿಯೆಲ್ಲರೂ ಜೊತೆಗೂಡಿ ಆಚರಿಸುವ ಹಬ್ಬಗಳಲ್ಲಿ ಈ ಆಯುಧ ಪೂಜೆಯೂ ಸಹ ಒಂದಾಗಿದೆ.

Write A Comment