ಕನ್ನಡ ವಾರ್ತೆಗಳು

ಮುಡುಶೆಡ್ಡೆ ವಿಜೇತ್‌ ಕೊಲೆ ಪ್ರಕರಣ : ನಾಲ್ವರು ಸಿಸಿಬಿ ಪೊಲೀಸರ ವಶ

Pinterest LinkedIn Tumblr

Vijeet_Murder_mudshedde_1

ಮಂಗಳೂರು: ಮುಡುಶೆಡ್ಡೆ ಸಮೀಪ ಎರಡು ದಿನಗಳ ಹಿಂದೆ ತಡರಾತ್ರಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ಹಲವು ಪ್ರಕರಣಗಳ ಆರೋಪಿ ವಿಜೇತ್‌ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 4 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶಿವನಗರದ ರಾಘವೇಂದ್ರ ಯಾನೆ ರಾಘು (30), ಮೊಹಮ್ಮದ್‌ ಅಲ್ತಾಫ್‌ (21), ಕುಲಶೇಖರ ನಿಡ್ಡೇಲ್‌ ಗೋಕರ್ಣದ ಹವೀತ್‌ ಪೂಜಾರಿ (21) ಮತ್ತು ಮೂಡುಶೆಡ್ಡೆ ಶಾಲೆ ಪದವಿನ ಶಂಶೀರ್‌ ಯಾನೆ ಡ್ಯಾಮ್‌ (21) ಎಂದು ಗುರುತಿಸಲಾಗಿದೆ.

3 ಕೊಲೆಯತ್ನ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಜೇತ್‌ ಅ. 28/29 ರಂದು ಮಧ್ಯರಾತ್ರಿ ಶಿವನಗರ ಜಂಕ್ಷನ್‌ ಕಡೆಗೆ ಹೋಗಿದ್ದಾಗ ಕೊಲೆ ನಡೆದಿತ್ತು. ಮೃತ ವಿಜೇತನ ತಂದೆ ವಾಮನ ಪೂಜಾರಿ ಅವರಿಗೆ ಪಕ್ಕದ ಮನೆಯ ಉದಯ ವಿಷಯವನ್ನು ತಿಳಿಸಿದ್ದರು.

ವಿಜೇತ್‌ ಶಿವನಗರ ಜಂಕ್ಷನ್‌ ಕಡಗೆ ಹೋಗುತ್ತಿದ್ದಾಗ ದಾರಿ ಮಧ್ಯೆ ಆತನಿಗೆ ಯಾರೋ ಹಲ್ಲೆ ನಡೆಸಿದ್ದರೆಂದು ಉದಯ ತಿಳಿಸಿದ ಮೇರೆಗೆ ವಾಮನ ಪೂಜಾರಿ ಸ್ಥಳಕ್ಕೆ ತೆರಳಿದಾಗ ಅಲ್ಲಿ ತನ್ನ ಮಗ ವಿಜೇತ್‌ನನ್ನು ಮಚ್ಚಿನಿಂದ ಕಡಿದು ಕೊಲೆ ಮಾಡಿರುವುದು ಕಂಡು ಬಂದಿತ್ತು.

ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಹಳೆ ವೈಷಮ್ಯಕ್ಕಾಗಿ ಈ ಕೊಲೆ ನಡೆದ ಬಗ್ಗೆ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ಅ. 30 ರಂದು ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಆರೋಪಿಗಳ ಮಾಹಿತಿ ಲಭಿಸಿತ್ತು.

ಕೊಲೆಯಾದ ವಿಜೇತ್‌ ಈ ಹಿಂದೆ ಸಣ್ಣ ಪುಟ್ಟ ಕಾರಣಕ್ಕೆ ಮೂಡುಶೆಡ್ಡೆ ಪರಿಸರದಲ್ಲಿ ಆಗಿಂದಾಗ್ಗೆ ಗಲಾಟೆ ಮಾಡುತ್ತಿದ್ದನು. ಒಂದೂವರೆ ತಿಂಗಳ ಹಿಂದೆ ಆರೋಪಿ ರಾಘವೇಂದ್ರ ಯಾನೆ ರಾಘು ಮನೆಗೆ ವಿಜೇತ್‌ ಅಕ್ರಮ ಪ್ರವೇಶ ಮಾಡಿ ಆತನಿಗೆ ತಲವಾರಿನಿಂದ ಹಲ್ಲೆ ನಡೆಸಿದ್ದು, ಈ ಬಗ್ಗೆ ವಿಜೇತನ ವಿರುದ್ಧ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,

ಇದಕ್ಕೆ ಪ್ರತಿಕಾರವಾಗಿ ರಾಘವೇಂದ್ರ ಯಾನೆ ರಾಘು ತನ್ನ ಸಹಚರರ ಜತೆ ಸೇರಿ ವಿಜೇತನ ಕೊಲೆಗೆ ಸಂಚು ರೂಪಿಸಿದ್ದನು ಎಂದು ವಿಚಾರಣೆಯಿಂದ ಗೊತ್ತಾಗಿದೆ.

ಆರೋಪಿ ರಾಘು ಯಾನೆ ರಾಘವೇಂದ್ರನು ವಾಮಂಜೂರು ರೋಹಿ ಸಹಚರ ಮುರುಗೇಶ್‌ ಮತ್ತು ಆತನ ಭಾವ ಉಪೇಂದ್ರ ಅವರ ಜೋಡಿ ಕೊಲೆ ಪ್ರಕರಣದಲ್ಲಿ ಹಾಗೂ 2014 ರಲ್ಲಿ ಪಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಿಜೈ ರಾಜಾ ಕೊಲೆ ಪ್ರಕರಣದ ಆರೋಪಿ ರವಿ ಪೂಜಾರಿಯ ಸಹಚರ ಭರತೇಶ್‌ನ‌ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದನು.

ಇನ್ನೋರ್ವ ಆರೋಪಿ ಹವೀತ್‌ ಪೂಜಾರಿಯ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿರುತ್ತದೆ.ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್‌ ಕಮೀಷನರ್‌ ಎಸ್‌.ಮುರುಗನ್‌ ಅವರ ಆದೇಶದಂತೆ ಡಿ.ಸಿ.ಪಿ. ಗಳಾದ ಕೆ.ಎಂ. ಶಾಂತರಾಜು ಮತ್ತು ಡಾ | ಸಂಜೀವ್‌ ಎಂ. ಪಾಟೀಲ್‌ ಅವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಸಿ.ಸಿ.ಬಿ ಆನ್‌ಸ್ಪೆಕ್ಟರ್‌ ವೆಲೆಂಟೈನ್‌ ಡಿ’ಸೋಜಾ, ಪಿ.ಎಸ್‌.ಐ ಶ್ಯಾಂ ಸುಂದರ್‌ ಹಾಗೂ ಸಿಬಂದಿ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

Write A Comment