ಮಂಗಳೂರು,ನ.04 : ಮಂಗಳೂರು ಜೈಲಿನಲ್ಲಿ ಕುಖ್ಯಾತ ಪಾತಕಿ ಮಾಡೂರು ಯೂಸುಫ್ ಹಾಗೂ ಗಣೇಶ ಶೆಟ್ಟಿ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಬಂದೀಖಾನೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ಪಂತ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆಲೋಕ್ ಮೋಹನ್ ಅವರು ಮಂಗಳವಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಮಲ್ಪಂತ್ ಅವರು ಸೋಮವಾರ ರಾತ್ರಿ ನಗರಕ್ಕೆ ಆಗಮಿಸಿ ಜೈಲಿಗೆ ಭೇಟಿ ನೀಡಿ ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದರು. ಮಂಗಳವಾರ ಬೆಳಗ್ಗೆ ಮರಳಿ ಜೈಲಿಗೆ ಆಗಮಿಸಿ ಅಧಿಕಾರಿಗಳು ಹಾಗೂ ಸಿಬಂದಿ ಸಭೆ ನಡೆಸಿದರು. ಆಲೋಕ್ ಮೋಹನ್ ಅವರು ಮಂಗಳವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಳಿಕ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆಲೋಕ್ ಮೋಹನ್ ಅವರು, ಮಾಡೂರು ಯೂಸುಫ್ ಬೆಳಗ್ಗೆ ವಾಕಿಂಗ್ ನಡೆಸುತ್ತಿದ್ದ ವೇಳೆ ಆತನ ಮೇಲೆ ಆರೋಪಿಗಳು ದಾಳಿ ಮಾಡಿದ್ದರು. ಚೂರಿಯಿಂದ ಹಲ್ಲೆ ನಡೆಸಲಾಗಿದ್ದು ಆತನ ದೇಹದ ಮೇಲೆ ಸುಮಾರು 40 ಗಾಯಗಳು ಕಂಡುಬಂದಿವೆ. ಗಣೇಶ್ ಶೆಟ್ಟಿ ಯೂಸುಫ್ನ ಪಕ್ಕದ ಸೆಲ್ನಲ್ಲಿದ್ದು ಆತನ ತಲೆ ಹಾಗೂ ಮುಖದ ಮೇಲೆ ಮಾತ್ರ ಗಾಯಗಳು ಕಂಡುಬಂದಿವೆ ಎಂದು ಹೇಳಿದರು.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ವಾಮಂಜೂರು, ಉಮೇಶ್ ಕೊಂಬಾರು, ಯುವರಾಜ್ ಸೂರಿಂಜೆ, ಶೋಭರಾಜ್, ಲತೇಶ್, ಮಹಮ್ಮದ್ ಇಕ್ಬಾಲ್, ಆಸೀಫ್, ಮುನೀರ್, ಇರ್ಷಾದ್ ಎಂಬ 9 ಮಂದಿ ವಿಚಾರಣಾಧೀನ ಕೈದಿಗಳ ವಿರುದ್ಧ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಲಾಗಿದೆ ಎಂದು ತಿಳಿಸಿದ್ದಾರೆ.
ಪೂರ್ವ ಸಿದ್ಧತೆ :
ಮಾಡೂರು ಇಸುಬು ಮತ್ತು ಗಣೇಶ್ ಶೆಟ್ಟಿಯ ಹತ್ಯೆ ಒಂದು ಯೋಜಿತ ಅಪರಾಧ ಕೃತ್ಯ ಯೂಸುಫ್ ಹತ್ಯೆಗೆ ಹೊರಗಿನವರು ಸಂಚು ರೂಪಿಸಿದ್ದು, ಕಾರಾಗೃಹದ ಒಳಗಿದ್ದ ವಿಚಾರಣಾಧೀನ ಕೈದಿಗಳು ಅದನ್ನು ಕಾರ್ಯರೂಪಕ್ಕೆ ತಂದಿರಬಹುದು ಎಂಬ ಅಂಶ ತನಿಖೆಯಲ್ಲಿ ಗೊತ್ತಾಗಿದೆ. ಇದು ಆ ಕ್ಷಣಕ್ಕೆ ಆರಂಭವಾದ ಗಲಾಟೆಯಿಂದ ನಡೆದ ಹತ್ಯೆಯಲ್ಲ. ಸಾಕಷ್ಟು ತಯಾರಿ ನಡೆಸಿ, ಪೂರ್ವ ಸಿದ್ಧತೆಯಂತೆ ಹತ್ಯೆ ಮಾಡಲಾಗಿದೆ. ಕೊಲೆಯಲ್ಲಿ ನೇರವಾಗಿ ಭಾಗಿಯಾದ ಐವರು ವಿಚಾರಣಾಧೀನ ಕೈದಿಗಳನ್ನು ಗುರುತಿಸಲಾಗಿದೆ ಎಂದು ಅಲೋಕ್ ಮೋಹನ್ ತಿಳಿಸಿದ್ದಾರೆ.
ಉನ್ನತ ಮಟ್ಟದ ಪೊಲೀಸ್ ತನಿಖೆ ಆರಂಭ
ಪ್ರಕರಣದ ತನಿಖೆ ನಡೆಸಲು ಮಂಗಳೂರು ಪೊಲೀಸ್ ಉಪ ಆಯುಕ್ತರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಸಹಾಯಕ ಪೊಲೀಸ್ ಆಯುಕ್ತರು ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ತಂಡದಲ್ಲಿದ್ದು ಪೊಲೀಸ್ ಆಯುಕ್ತರ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ. ಜೈಲಿನಲ್ಲಿ ನಡೆದ ಘಟನೆಗಳು ಹಾಗೂ ಲೋಪಗಳ ಬಗ್ಗೆ ಬಂದೀಖಾನೆ ಇಲಾಖೆಯ ವತಿಯಿಂದ ಮೈಸೂರು ಜೈಲಿನ ಮುಖ್ಯ ಅಧೀಕ್ಷಕ ಎ.ವಿ. ಅನಂತ ರೆಡ್ಡಿ ಅವರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ ಎಂದು ಹೇಳಿದರು.
ಆಯುಧಗಳು ಜೈಲಿನೊಳಗೆ ಹೇಗೆ ಬಂದವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಹಳೇ ಜೈಲಿನ ಬದಿಯಲ್ಲಿ ಮರವಿದ್ದು ಆದರ ಒಂದು ಕೊಂಬೆ ಜೈಲಿನ ಬದಿಗೆ ಚಾಚಿಕೊಂಡಿದೆ. ಮರವೇರಿ ಅಲ್ಲಿಂದ ಒಳಗೆ ಬಿಸಾಡಿರುವ ಸಾಧ್ಯತೆಗಳಿವೆ. ಆದರೂ ಈ ಬಗ್ಗೆ ವಿಭಿನ್ನ ಆಯಾಮಗಳಿಂದ ತನಿಖೆ ನಡೆಯುತ್ತಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಆಯುಧಗಳು ಇನ್ನೂ ಪತ್ತೆಯಾಗಿಲ್ಲ. ಜೈಲಿನೊಳಗೆ ಚರಂಡಿ ಹಾಗೂ ಮ್ಯಾನ್ಹೋಲ್ಗಳಿದ್ದು ಇದರಲ್ಲಿ ಎಸೆದಿರುವ ಸಾಧ್ಯತೆಗಳಿವೆ. ಆಯುಧಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿದ್ದು ಲೋಹ ಪತ್ತೆ ಸಾಧನವನ್ನು ಕೂಡಾ ಬಳಸಲಾಗುತ್ತಿದೆ ಎಂದು ಆಲೋಕ್ ಮೋಹನ್ ವಿವರಿಸಿದ್ದಾರೆ.
ಜೈಲು ಆವರಣದಲ್ಲಿ ಬಿಗುಬಂದೋಬಸ್ತು
ಸೋಮವಾರ ನಡೆದ ಘಟನೆಯ ಬಳಿಕ ಮಂಗಳೂರು ಜೈಲು ಆವರಣದಲ್ಲಿ ಬಿಗುಬಂದೋಬಸ್ತು ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ.